ನವರಾತ್ರಿ ವೇಳೆ ನವ ದೆಹಲಿಯ ಮಾಂಸದ ಅಂಗಡಿಗಳನ್ನು ಮುಚ್ಚಲು ಬಿಜೆಪಿ ಶಾಸಕರ ಒತ್ತಾಯ
x

ನವರಾತ್ರಿ ವೇಳೆ ನವ ದೆಹಲಿಯ ಮಾಂಸದ ಅಂಗಡಿಗಳನ್ನು ಮುಚ್ಚಲು ಬಿಜೆಪಿ ಶಾಸಕರ ಒತ್ತಾಯ

ದೆಹಲಿಯಾದ್ಯಂತ ಈ ನಿಯಮವನ್ನು ಜಾರಿಗೊಳಿಸಲು ಸಾಧ್ಯವಾಗದಿದ್ದರೂ, ತಮ್ಮ ಪತ್ಪರ್‌ಗಂಜ್ ಕ್ಷೇತ್ರದಲ್ಲಿ ಮಾಂಸದ ಅಂಗಡಿಗಳು ಕಾರ್ಯನಿರ್ವಹಿಸದಂತೆ ನೋಡಿಕೊಳ್ಳುವುದಾಗಿ ಅವರು ಘೋಷಿಸಿದ್ದಾರೆ.


ದೆಹಲಿಯಲ್ಲಿ ನವರಾತ್ರಿ ಹಬ್ಬದ ಸಂದರ್ಭದಲ್ಲಿ 9 ದಿನ ಮಾಂಸದ ಅಂಗಡಿಗಳನ್ನು ಸಂಪೂರ್ಣವಾಗಿ ಮುಚ್ಚಬೇಕೆಂದು ಬಿಜೆಪಿಯ ಇಬ್ಬರು ಪ್ರಮುಖ ಶಾಸಕರು ಒತ್ತಾಯಿಸಿದ್ದಾರೆ. ಪತ್ಪರ್‌ಗಂಜ್ ಕ್ಷೇತ್ರದ ಶಾಸಕ ರವೀಂದರ್ ನೇಗಿ ಮತ್ತು ಇನ್ನೊಬ್ಬ ಶಾಸಕ ನೀರಜ್ ಬಸೋಯಾ ಅವರು ಈ ಬೇಡಿಕೆಯನ್ನು ಮುಂದಿಟ್ಟಿದ್ದು, ಈ ವಿಷಯವು ಚರ್ಚೆಗೆ ಗ್ರಾಸವಾಗಿದೆ. ನವರಾತ್ರಿ ವೇಳೆ ಮಾಂಸ ಮಾರಾಟವು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಅವರು ವಾದಿಸಿದ್ದಾರೆ.

ರವೀಂದರ್ ನೇಗಿ ಅವರು ತಮ್ಮ ಹೇಳಿಕೆಯಲ್ಲಿ, "ನವರಾತ್ರಿಯ ಸಮಯದಲ್ಲಿ ದೇವಾಲಯಗಳ ಸಮೀಪದಲ್ಲೂ ಮಾಂಸದ ಅಂಗಡಿಗಳು ತೆರೆದಿರುತ್ತವೆ. ಇಂತಹ ಸಂದರ್ಭದಲ್ಲಿ ಮಾಂಸದ ಅಂಗಡಿಗಳ ದೃಶ್ಯ ನಮ್ಮ ಭಾವನೆಗಳಿಗೆ ಆಘಾತ ಉಂಟುಮಾಡುತ್ತದೆ. ಎಲ್ಲರೂ ಹಿಂದೂಗಳ ಭಾವನೆಗಳಿಗೆ ಗೌರವ ನೀಡಬೇಕು" ಎಂದು ತಿಳಿಸಿದ್ದಾರೆ. ಮುಂದುವರಿದ ಅವರು, " ರಂಜಾನ್​ ಹಬ್ಬದ ವೇಳೆ ಜನರು ಶ್ಯಾವಿಗೆ ಪಾಯಸ ಸವಿಯಬಹುದು, ಮೇಕೆಗಳನ್ನು ಕೊಲ್ಲುವ ಅಗತ್ಯವಿಲ್ಲ" ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೆಹಲಿಯಾದ್ಯಂತ ಈ ನಿಯಮವನ್ನು ಜಾರಿಗೊಳಿಸಲು ಸಾಧ್ಯವಾಗದಿದ್ದರೂ, ತಮ್ಮ ಪತ್ಪರ್‌ಗಂಜ್ ಕ್ಷೇತ್ರದಲ್ಲಿ ಮಾಂಸದ ಅಂಗಡಿಗಳು ಕಾರ್ಯನಿರ್ವಹಿಸದಂತೆ ನೋಡಿಕೊಳ್ಳುವುದಾಗಿ ಅವರು ಘೋಷಿಸಿದ್ದಾರೆ. ತಾವು ಮುನ್ಸಿಪಲ್ ಕಾರ್ಪೊರೇಟರ್ ಆಗಿದ್ದ ಸಂದರ್ಭದಲ್ಲಿ ಸಹ ಇದೇ ರೀತಿಯ ಒತ್ತಾಯ ಮಾಡಿದ್ದೆವು ಎಂದು ನೇಗಿ ತಿಳಿಸಿದ್ದಾರೆ.

ನೀರಜ್ ಬಸೋಯಾ ಅವರು ಸಹ ಇದೇ ವಿಷಯವನ್ನು ಬಲವಾಗಿ ಪ್ರತಿಪಾದಿಸಿದ್ದಾರೆ. "ನವರಾತ್ರಿಯ ಸಮಯದಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚುವುದು ಅಗತ್ಯ. ಇವು ವಸತಿ ಪ್ರದೇಶಗಳಲ್ಲಿ ಇರಬಾರದು. ಮಾಂಸ ಮಾರಾಟಗಾರರು ಗೂಂಡಾಗಿರಿಯಲ್ಲಿ ತೊಡಗುತ್ತಾರೆ. ಈ ಅಂಗಡಿಗಳು ಕೇವಲ ವಾಣಿಜ್ಯ ಪ್ರದೇಶಗಳಿಗೆ ಸೀಮಿತವಾಗಿರಬೇಕು" ಎಂದು ಹೇಳಿದ್ದಾರೆ. ಇದಲ್ಲದೇ, ವಸತಿ ಪ್ರದೇಶಗಳಲ್ಲಿ ವರ್ಷಪೂರ್ತಿ ಮಾಂಸದ ಅಂಗಡಿಗಳಿಗೆ ಅವಕಾಶ ನೀಡಬಾರದು ಎಂಬ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.

"ಇತ್ತೀಚಿನ ದಿನಗಳಲ್ಲಿ ಮಾಂಸದ ಅಂಗಡಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಆಮ್ ಆದ್ಮಿ ಪಕ್ಷದ ಆಡಳಿತದ ಅವಧಿಯಲ್ಲಿ ಇದಕ್ಕೆ ಪ್ರೋತ್ಸಾಹ ನೀಡಲಾಗಿತ್ತು" ಎಂದು ಬಸೋಯಾ ಆರೋಪಿಸಿದ್ದಾರೆ. ಈ

ಮುಖ್ಯಮಂತ್ರಿ ರೇಖಾ ಗುಪ್ತಾ, ಮುನ್ಸಿಪಲ್ ಕಾರ್ಪೊರೇಷನ್ ಆಯುಕ್ತರು ಮತ್ತು ದೆಹಲಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯುವುದಾಗಿ ಅವರು ಹೇಳಿದ್ದಾರೆ.

ಧಾರ್ಮಿಕ ಸಂಘರ್ಷ

ಈ ಒತ್ತಾಯವು ದೆಹಲಿಯಲ್ಲಿ ಧಾರ್ಮಿಕ ಸಂವೇದನೆ ಮತ್ತು ವಾಣಿಜ್ಯ ಚಟುವಟಿಕೆಗಳ ನಡುವಿನ ಸಂಘರ್ಷವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಶಾಸಕರ ಈ ಬೇಡಿಕೆಗೆ ಸರ್ಕಾರ ಹೇಗೆ ಸ್ಪಂದಿಸುತ್ತದೆ ಎಂಬುದು ಎಲ್ಲರ ಗಮನ ಸೆಳೆದಿದೆ. ನವರಾತ್ರಿ ಹಬ್ಬವು ದುರ್ಗಾ ದೇವಿಗೆ ಸಮರ್ಪಿತವಾದ ಪವಿತ್ರ ಸಂದರ್ಭವಾಗಿದ್ದು, ಈ ಸಮಯದಲ್ಲಿ ಕೆಲವರು ಮಾಂಸಾಹಾರ ತ್ಯಜಿಸುತ್ತಾರೆ. ಈ ನಿರ್ಧಾರವು ವ್ಯಾಪಾರಿಗಳ ಮೇಲೆ ಆರ್ಥಿಕ ಪರಿಣಾಮ ಬೀರುವ ಸಾಧ್ಯತೆ ಇದ್ದು, ಈ ವಿಷಯವು ಮುಂದಿನ ದಿನಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಬಹುದು.

Read More
Next Story