ಬಿಜೆಪಿ ಸಾಂಸ್ಥಿಕ ರಚನೆಯಲ್ಲಿ ಸಂಪೂರ್ಣ ಬದಲಾವಣೆಯ ಸಾಧ್ಯತೆ
x

ಬಿಜೆಪಿ ಸಾಂಸ್ಥಿಕ ರಚನೆಯಲ್ಲಿ ಸಂಪೂರ್ಣ ಬದಲಾವಣೆಯ ಸಾಧ್ಯತೆ

ಬಿಜೆಪಿ ಹಾಲಿ ಮುಖ್ಯಸ್ಥ ಜೆ.ಪಿ. ನಡ್ಡಾ ಅವರು ಹೊಸ ಸರ್ಕಾರಕ್ಕೆ ಸೇರ್ಪಡೆಯಾಗುವ ಸಾಧ್ಯತೆಯಿದೆ.ಆದ್ದರಿಂದ, ಹೊಸ ಅಧ್ಯಕ್ಷರು ಮತ್ತು ರಾಷ್ಟ್ರೀಯ ಪದಾಧಿಕಾರಿಗಳ ತಂಡವನ್ನು ಆಯ್ಕೆ ಮಾಡಬೇಕಾಗುತ್ತದೆ. ಲೋಕಸಭೆ ಚುನಾವಣೆಯಲ್ಲಿ ಸೋತಿರುವ 15ಕ್ಕೂ ಹೆಚ್ಚು ಕೇಂದ್ರ ಸಚಿವರಲ್ಲಿ ಕೆಲವರನ್ನು ಪಕ್ಷ ಸಂಘಟನೆಯಲ್ಲಿ ಬಳಸಿಕೊಳ್ಳುವ ಸಾಧ್ಯತೆ ಇದೆ.


ಬಿಜೆಪಿ ಸತತ ಮೂರನೇ ಅವಧಿಗೆ ಸರ್ಕಾರ ರಚನೆ ಮಾಡಿದ ನಂತರ, ಪಕ್ಷದ ಸಾಂಸ್ಥಿಕ ರಚನೆಯನ್ನು ಸಂಪೂರ್ಣವಾಗಿ ಬದಲಿಸುವ ಸಾಧ್ಯತೆಯಿದೆ.

ಬಿಜೆಪಿ ಹಾಲಿ ಮುಖ್ಯಸ್ಥ ಜೆ.ಪಿ. ನಡ್ಡಾ ಅವರ ಅಧಿಕಾರಾವಧಿ 2024ರ ಜನವರಿಯಲ್ಲಿ ಕೊನೆಗೊಂಡಿತು. ಆದರೆ, ಲೋಕಸಭೆ ಚುನಾವಣೆ ಪೂರ್ಣಗೊಳ್ಳುವವರೆಗೆ ಅವರಿಗೆ ವಿಸ್ತರಣೆ ನೀಡಲಾಯಿತು. ನಡ್ಡಾ ಅವರು ಹೊಸ ಸರ್ಕಾರಕ್ಕೆ ಸೇರ್ಪಡೆಯಾಗುವ ಸಾಧ್ಯತೆಯಿದ್ದು, ಪಕ್ಷಕ್ಕೆ ಹೊಸ ಅಧ್ಯಕ್ಷ ಮತ್ತು ರಾಷ್ಟ್ರೀಯ ಪದಾಧಿಕಾರಿಗಳ ತಂಡವನ್ನು ಹುಡುಕಬೇಕಾಗುತ್ತದೆ. ಅವರಿಗೆ ಕೇಂದ್ರ ಸಚಿವರ ಜವಾಬ್ದಾರಿ ಹೊಸದಲ್ಲ. ಏಕೆಂದರೆ, ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಅವಧಿಯಲ್ಲಿ ಕೇಂದ್ರ ಸಂಪುಟದ ಭಾಗವಾಗಿದ್ದರು.

ಹೊಸ ಮುಖಗಳು: ʻಸರ್ಕಾರದ ರಚನೆ ಆದ್ಯತೆ. ಆನಂತರ ಪಕ್ಷದ ಸಂಘಟನೆಯಲ್ಲಿ ಬದಲಾವಣೆ ಮಾಡಲಾಗುತ್ತದೆ. ಆತುರವಿಲ್ಲ. ಬಿಜೆಪಿ ವ್ಯಕ್ತಿಯೊಬ್ಬರ ಅಧಿಕಾರಾವಧಿಯನ್ನು ವಿಸ್ತರಿಸಲಾಗದ ಸರ್ಕಾರಿ ಸಂಘಟನೆಯಲ್ಲ,ʼ ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಆರ್‌.ಪಿ. ಸಿಂಗ್ ʻದಿ ಫೆಡರಲ್‌ʼಗೆ ತಿಳಿಸಿದರು.

2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಹಿನ್ನಡೆಯಿಂದ, ತನ್ನ ಚುನಾವಣೆ ಯಂತ್ರವನ್ನು ಉತ್ತಮಗೊಳಿಸಲು ರಾಷ್ಟ್ರೀಯ ತಂಡ, ರಾಜ್ಯ ಘಟಕಗಳು ಮತ್ತು ಜಿಲ್ಲಾ ಘಟಕಗಳಲ್ಲಿ ಬದಲಾವಣೆ ಮಾಡಲು ಇಚ್ಛಿಸಿದೆ.

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕೇಂದ್ರ ಸಂಪುಟಕ್ಕೆ ಸೇರ್ಪಡೆಗೊಳಿಸಬೇಕಿರುವುದರಿಂದ, ಸಾಂಸ್ಥಿಕ ರಚನೆಯಲ್ಲೂ ಬದಲಾವಣೆ ಮಾಡಬೇಕಿದೆ. ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧಿಯಾ ಅವರಿಗೂ ಕೇಂದ್ರದಲ್ಲಿ ಅವಕಾಶ ಕಲ್ಪಿಸುವ ಸಾಧ್ಯತೆಯಿದೆ. ಮಾಜಿ ಸಚಿವರಿಗೆ ಹೊಸ ಪಾತ್ರ: ಲೋಕಸಭೆ ಚುನಾವಣೆಯಲ್ಲಿ 15ಕ್ಕೂ ಹೆಚ್ಚು ಕೇಂದ್ರ ಸಚಿವರು ಸೋತಿರುವುದರಿಂದ, ಪಕ್ಷದ ಸಂಘಟನೆಯಲ್ಲಿ ಕೆಲವರಿಗೆ ಸ್ಥಾನ ಸಿಗುವ ಸಾಧ್ಯತೆ ಇದೆ.

ಚುನಾವಣೆಯಲ್ಲಿ ಸೋತ ಕೆಲವು ಪ್ರಮುಖ ಮಂತ್ರಿಗಳೆಂದರೆ ಸ್ಮೃತಿ ಇರಾನಿ, ಅಜಯ್ ಮಿಶ್ರಾ ತೇನಿ, ಅರ್ಜುನ್ ಮುಂಡಾ, ರಾಜೀವ್ ಚಂದ್ರಶೇಖರ್, ಕೈಲಾಶ್ ಚೌಧರಿ, ಮಹೇಂದ್ರ ನಾಥ್ ಪಾಂಡೆ, ಕೌಶಲ್ ಕಿಶೋರ್, ಸಾಧ್ವಿ ನಿರಂಜನ್ ಜ್ಯೋತಿ, ಸಂಜೀವ್ ಬಲ್ಯಾನ್, ರಾವ್ ಸಾಹೇಬ್ ದಾನ್ವೆ, ಆರ್.ಕೆ. ವಿ. ಮುರಳೀಧರನ್, ಎಲ್ ಮುರುಗನ್, ಸುಭಾಸ್ ಸರ್ಕಾರ್ ಮತ್ತು ನಿಶಿತ್ ಪ್ರಮಾಣಿಕ್.

ಸಂಘಟನೆಯಲ್ಲಿ ಕೆಲವು ಹಿರಿಯ ನಾಯಕರಿಗೆ ಅವಕಾಶ ಕಲ್ಪಿಸುವುದಲ್ಲದೆ, ಒಡಿಶಾ, ಆಂಧ್ರಪ್ರದೇಶ ಮತ್ತು ಕೇರಳದಂತಹ ರಾಜ್ಯಗಳಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಳಾವಕಾಶ ಕಲ್ಪಿಸಬೇಕಿದೆ ಎಂದು ಬಿಜೆಪಿಯ ಉನ್ನತ ನಾಯಕರು ಹೇಳಿದ್ದಾರೆ.

ಮಿತ್ರ ಪಕ್ಷಗಳಿಗೆ ಅವಕಾಶ: ಬಿಜೆಪಿ ಬಹುಮತಕ್ಕೆ ಮಿತ್ರ ಪಕ್ಷಗಳನ್ನು ಅವಲಂಬಿಸಿರುವುದರಿಂದ, ಆ ಪಕ್ಷಗಳಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕಾ ಗುತ್ತದೆ. 2009 ಮತ್ತು 2014 ಕ್ಕೆ ಹೋಲಿಸಿದರೆ, ಈ ಬಾರಿ ಸಂಪುಟದಲ್ಲಿ ಮಿತ್ರಪಕ್ಷಗಳಿಗೆ ಗರಿಷ್ಠ ಪ್ರಾತಿನಿಧ್ಯವನ್ನು ನೀಡಬೇಕಾಗುತ್ತದೆ.

ʻನಾವು ಎನ್‌ಡಿಎ ಜೊತೆಗಿದ್ದೇವೆ ಮತ್ತು ನಮಗೆ ಯಾವುದೇ ಬೇಡಿಕೆಗಳಿಲ್ಲ. ಈ ಚರ್ಚೆ ನಂತರದ ಹಂತದಲ್ಲಿ ನಡೆಯಲಿದೆ. ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ನಮ್ಮ ನಾಯಕ ನಿತೀಶ್ ಕುಮಾರ್ ಈಗಾಗಲೇ ಎರಡು ಬಾರಿ ಬಿಜೆಪಿ ನಾಯಕತ್ವದೊಂದಿಗೆ ಮಾತನಾಡಿದ್ದಾರೆ,ʼ ಎಂದು ಜೆಡಿಯು ಹಿರಿಯ ನಾಯಕ ರಾಮ್ ನಾಥ್ ಠಾಕೂರ್ ದ ಫೆಡರಲ್‌ಗೆ ತಿಳಿಸಿದ್ದಾರೆ.

ಹೆಜ್ಜೆಗುರುತು ವಿಸ್ತಾರ: ಏತನ್ಮಧ್ಯೆ, ಎರಡು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದಕ್ಕೆ ಬಿಜೆಪಿ ನಾಯಕರು ಹರ್ಷ ವ್ಯಕ್ತಪಡಿಸಿದ್ದಾರೆ. ʻಈ ಚುನಾವಣೆಗಳ ಫಲಿತಾಂಶವು ಮಹತ್ವದ್ದು. ನಾವು ಈಗ ಬಹುತೇಕ ಎಲ್ಲ ರಾಜ್ಯಗಳಲ್ಲಿ ಅಸ್ತಿತ್ವ ಹೊಂದಿರುವುದರಿಂದ, ಬಿಜೆಪಿ ಈಗ ಪ್ಯಾನ್ ಇಂಡಿಯಾ ಪಕ್ಷವಾಗಿದೆ. ಒಡಿಶಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದಲ್ಲದೆ, ಆಂಧ್ರಪ್ರದೇಶದಲ್ಲಿ ಜನ ಎನ್‌ಡಿಎ ಸರ್ಕಾರಕ್ಕೆ ಮತ ಹಾಕಿದ್ದಾರೆ. ಕರ್ನಾಟಕದಲ್ಲಿ ನಮ್ಮ ಪ್ರಾಬಲ್ಯವನ್ನು ಉಳಿಸಿಕೊಂಡಿದ್ದೇವೆ. ಕೇರಳ ಮತ್ತು ತೆಲಂಗಾಣದಲ್ಲೂ ಉತ್ತಮ ಪ್ರದರ್ಶನ ನೀಡಿದ್ದೇವೆ,ʼ ಎಂದು ಬಿಜೆಪಿ ರಾಜ್ಯಸಭೆ ಸದಸ್ಯ ಲೆಹರ್ ಸಿಂಗ್ ಸಿರೋಯಾ ದ ಫೆಡರಲ್‌ಗೆ ತಿಳಿಸಿದರು.

ಲೋಕಸಭೆ ಫಲಿತಾಂಶವನ್ನು ವಿರೋಧ ಪಕ್ಷಗಳು ಏಕೆ ಸಂಭ್ರಮಿಸುತ್ತಿವೆ ಎಂದು ಸಿರೋಯಾ ಪ್ರಶ್ನಿಸಿದರು. ʻಬಿಜೆಪಿ 240 ಸಂಸದರನ್ನು ಹೊಂದಿರುವ ಏಕೈಕ ದೊಡ್ಡ ಪಕ್ಷ. ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಎನ್‌ಡಿಎ ಸರ್ಕಾರ ರಚಿಸುತ್ತಿದೆ. ಕಾಂಗ್ರೆಸ್ ಕೇವಲ 99 ಸ್ಥಾನ ಹೊಂದಿದ್ದು, ಅವರು ಫಲಿತಾಂಶವನ್ನು ಏಕೆ ಸಂಭ್ರಮಿಸುತ್ತಿದ್ದಾರೆ ಎಂದು ನನಗೆ ಅರ್ಥವಾಗುತ್ತಿಲ್ಲ. ಎಲ್ಲ ವಿರೋಧ ಪಕ್ಷಗಳು ಗಳಿಸಿದ ಸ್ಥಾನಕ್ಕಿಂತ ಬಿಜೆಪಿ ಹೆಚ್ಚು ಕ್ಷೇತ್ರಗಳಲ್ಲಿ ಜಯ ಗಳಿಸಿದೆ,ʼ ಎಂದರು.

Read More
Next Story