
ದೇವಸ್ಥಾನ ಶುದ್ಧೀಕರಣ ಮಾಡಿ ಉಚ್ಛಾಟನೆಗೆ ಒಳಗಾದ ಬಿಜೆಪಿ ಮಾಜಿ ಶಾಸಕ ಗ್ಯಾನ್ ದೇವ್ ಅಹುಜಾ
ದಲಿತ ಕಾಂಗ್ರೆಸ್ ಶಾಸಕ ದೇವಸ್ಥಾನ ಪ್ರವೇಶಿಸಿದ್ದಕ್ಕೆ ಶುದ್ಧೀಕರಣ ಮಾಡಿದ ಬಿಜೆಪಿಯ ಮಾಜಿ ಶಾಸಕ!
ಗ್ಯಾನ್ ದೇವ್ ಅಹುಜಾ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ತೀಕಾರಾಮ್ ಜುಲ್ಲಿ ಕಾಂಗ್ರೆಸ್ ನಾಯಕರಾಗಿದ್ದು, ಅವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನೈತಿಕ ಅಧಿಕಾರ ಹೊಂದಿಲ್ಲ ಎಂದು ವಾದಿಸಿದ್ದಾರೆ.
ರಾಜಸ್ಥಾನದ ಅಲ್ವಾರ್‌ನಲ್ಲಿರುವ ರಾಮ್ ದೇವಸ್ಥಾನದಲ್ಲಿ ಏಪ್ರಿಲ್ 6ರಂದು ಅಮಾನವೀಯ ಪ್ರಸಂಗವೊಂದು ನಡೆದಿದೆ. ಇಲ್ಲಿ ನಡೆದ ರಾಮ ನವಮಿ ಸಮಾರಂಭದಲ್ಲಿ ರಾಜಸ್ಥಾನ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ದಲಿತ ಕಾಂಗ್ರೆಸ್ ನಾಯಕ ತೀಕಾರಾಮ್ ಜುಲ್ಲಿ ಭಾಗವಹಿಸಿದ್ದನ್ನು ಆಕ್ಷೇಪಿಸಿ, ಬಿಜೆಪಿ ನಾಯಕ ಗ್ಯಾನ್ ದೇವ್ ಅಹುಜಾ ಗಂಗಾಜಲವನ್ನು ಸಿಂಪಡಿಸಿ "ಶುದ್ಧೀಕರಣ" ಕಾರ್ಯ ನಡೆಸಿದ್ದು ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕನ ಕೃತ್ಯವು ಭಾರೀ ವಿವಾದಕ್ಕೆ ಕಾರಣವಾಗಿದ್ದು, ಜಾತಿ ಪಕ್ಷಪಾತದ ಆರೋಪಗಳನ್ನು ಎದುರಾಗಿದೆ. ಸಾರ್ವಜನಿಕ ಆಕ್ರೋಶ ಹೆಚ್ಚಾದ ನಂತರ ಬಿಜೆಪಿ, ಗ್ಯಾನ್ ದೇವ್ ಅಹುಜಾರನ್ನು ಪಕ್ಷದಿಂದ ಅಮಾನತುಗೊಳಿಸಿದೆ. ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ಗ್ಯಾನ್ ದೇವ್ ಅಹುಜಾ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ತೀಕಾರಾಮ್ ಜುಲ್ಲಿ ಕಾಂಗ್ರೆಸ್ ನಾಯಕರಾಗಿದ್ದು, ಅವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನೈತಿಕ ಅಧಿಕಾರ ಹೊಂದಿಲ್ಲ ಎಂದು ವಾದಿಸಿದ್ದಾರೆ. ಕಾಂಗ್ರೆಸ್ ಪಕ್ಷ ಭಗವಾನ್ ರಾಮನ ಅಸ್ತಿತ್ವವನ್ನು ಪ್ರಶ್ನಿಸಿದೆ ಮತ್ತು ಅಯೋಧ್ಯೆಯಲ್ಲಿ ನಡೆದ ಪ್ರಾಣ ಪ್ರತಿಷ್ಠಾ ಸಮಾರಂಭ ಬಹಿಷ್ಕರಿಸಿತ್ತು. ಈ ಕಾರಣಕ್ಕಾಗಿ ತಾವು ಶುದ್ಧೀಕರಣ ಮಾಡಿದ್ದಾಗಿ ಸಮಜಾಯಿಷಿ ನೀಡಿದ್ದಾರೆ.
"ಕೆಲವು ಅಶುದ್ಧ ಜನರು ದೇವಾಲಯಕ್ಕೆ ಬಂದಿದ್ದರಿಂದ ಗಂಗಾಜಲ ಸಿಂಪಡಿಸಲಾಗಿದೆ" ಎಂದು ಅವರು ಹೇಳಿದ್ದಾರೆ. ಆದರೆ ಜುಲ್ಲಿ ಅವರ ದಲಿತ ಎಂಬುದನ್ನು ನೇರವಾಗಿ ಉಲ್ಲೇಖಿಸದಿದ್ದರೂ, ಅವರ ಪಕ್ಷವನ್ನು ಉಲ್ಲೇಖಿಸಿ "ಪಾಪಿಗಳು ಮತ್ತು ರಾಕ್ಷಸರು" ಎಂದು ಕರೆದಿದ್ದಾರೆ.
ತೀಕಾರಾಮ್ ಜುಲ್ಲಿ ಪ್ರತಿಕ್ರಿಯೆ
ಮೂರು ಬಾರಿ ಶಾಸಕರಾಗಿರುವ ಜುಲ್ಲಿ ಈ ಘಟನೆಯನ್ನು ಬಿಜೆಪಿಯು ದಲಿತರ ವಿರುದ್ಧದ ಪೂರ್ವಾಗ್ರಹದ ಗುರುತು ಎಂದು ಕರೆದಿದ್ದಾರೆ. ಈ ಕೃತ್ಯವು ತಮ್ಮ ವೈಯಕ್ತಿಕ ನಂಬಿಕೆಯ ಮೇಲಿನ ದಾಳಿ ಮಾತ್ರವಲ್ಲ, ಅಸ್ಪೃಶ್ಯತೆಯಂತಹ ಕಾನೂನುಬಾಹಿರ ಮತ್ತು ಸಂವಿಧಾನ ವಿರೋಧಿ ಪದ್ಧತಿ ಉತ್ತೇಜಿಸುವ ಪ್ರಯತ್ನ ಎಂದು ಆರೋಪಿಸಿದ್ದಾರೆ. "ಬಿಜೆಪಿಗೆ ದಲಿತರ ಮೇಲೆ ಅಷ್ಟೊಂದು ದ್ವೇಷವಿದೆಯೊ? ನಾವು ದೇವಾಲಯದಲ್ಲಿ ಪ್ರಾರ್ಥನೆ ಮಾಡುವುದನ್ನೂ ಸಹಿಸಲಾರರೇ?" ಎಂದು ಪ್ರಶ್ನಿಸಿದ ಅವರು, ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಮದನ್ ರಾಠೋಡ್ ಅವರಿಂದ ಸ್ಪಷ್ಟನೆ ಕೋರಿದ್ದಾರೆ.
ವ್ಯಾಪಕ ಖಂಡನೆ
ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೇರಿದಂತೆ ಕಾಂಗ್ರೆಸ್ ನಾಯಕರು ಈ ಕೃತ್ಯವನ್ನು ತಾರತಮ್ಯದ ಮತ್ತು ಸಭ್ಯ ಸಮಾಜಕ್ಕೆ ಕಪ್ಪು ಚುಕ್ಕೆ ಎಂದು ಖಂಡಿಸಿದ್ದಾರೆ. "21ನೇ ಶತಮಾನದಲ್ಲಿ ಇಂತಹ ಸಂಕುಚಿತ ಮನೋಭಾವ ಸ್ವೀಕಾರಾರ್ಹವಲ್ಲ" ಎಂದು ಗೆಹ್ಲೋಟ್ ಹೇಳಿದ್ದಾರೆ. ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ ಮಾಡುವುದಾಗಿ ಹೇಳಿದೆ.
ಅಹುಜಾರ ಹಿಂದಿನ ವಿವಾದಗಳು
ಅಲ್ವಾರ್‌ನ ರಾಮಗಢದ ಮಾಜಿ ಶಾಸಕ ಅಹುಜಾ ತಮ್ಮ ಉಗ್ರ ಹೇಳಿಕೆಗಳಿಂದ ಹಲವಾರು ಬಾರಿ ವಿವಾದಕ್ಕೀಡಾಗಿದ್ದಾರೆ. "ಮುಸ್ಲಿಮರು ಒಬ್ಬ ಹಿಂದೂ ಹುಡುಗಿಯನ್ನು ಕರೆದೊಯ್ದರೆ , ನಾವು ಐದು ಮುಸ್ಲಿಮ್ ಹುಡುಗಿಯರನ್ನು ಅಪಹರಿಸುತ್ತೇವೆ" ಎಂದು ಹೇಳಿಕೆ ನೀಡಿದ್ದರು. ಜೆಎನ್ಯುವ ವಿಚಾರ, ಗೋ ಹತ್ಯೆ ವಿಚಾರಕ್ಕೆ ಬಂದಾಗ ಕಾನೂನು ಬಾಹಿರ ಹೇಳಿಕೆಗಳನ್ನು ನೀಡಿದ್ದರು.