
ಐದು ಹಂತದಲ್ಲಿ ಬಿಜೆಪಿಗೆ 310 ಸ್ಥಾನ: ಶಾ
ಮೇ 21-ಲೋಕಸಭೆ ಚುನಾವಣೆಯ ಐದು ಹಂತಗಳು ಪೂರ್ಣಗೊಂಡಿದ್ದು, ಬಿಜೆಪಿ 310 ಸ್ಥಾನಗಳನ್ನು ಗಳಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಹೇಳಿದ್ದಾರೆ.
ಸಂಬಲ್ಪುರದಲ್ಲಿ ಚುನಾವಣಾ ಸಭೆಯಲ್ಲಿ ಮಾತನಾಡಿ, ಒಡಿಶಾ ಜನರನ್ನು ʻಬಾಬು ರಾಜ್ʼ ನಿಂದ ಮುಕ್ತಗೊಳಿಸಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡಬೇಕು ಎಂದರು.
ʻಈ ಬಾರಿ ಒಡಿಶಾದಲ್ಲಿ ಕಮಲ ಅರಳಲಿದೆ. ಐದನೇ ಹಂತದ ಚುನಾವಣೆ ನಂತರ ಬಿಜೆಪಿ ಈಗಾಗಲೇ 310 ಸ್ಥಾನ ಗಳಿಸಿದೆ. ಆರನೇ ಮತ್ತು ಏಳನೇ ಸುತ್ತಿನ ಮತದಾನದ ನಂತರ ನಾವು 400 ಪ್ಲಸ್ ಸ್ಥಾನಗಳನ್ನು ಪಡೆದುಕೊಳ್ಳುತ್ತೇವೆ. ರಾಜ್ಯದಲ್ಲಿ ಬೆರಳೆಣಿಕೆ ಅಧಿಕಾರಿಗಳು ಆಡಳಿತ ನಡೆಸುತ್ತಿದ್ದು, ರಾಜ್ಯದಲ್ಲಿ ಬಾಬುರಾಜ್ ಅಂತ್ಯಗೊಳ್ಳಲಿದೆʼ ಎಂದು ಹೇಳಿದರು.
ಬಿಜೆಪಿಯಿಂದ ‘ಭೂಮಿಪುತ್ರ’ ಸಿಎಂ: ʻಬಿಜೆಡಿ ಸರ್ಕಾರ ಒಡಿಶಾದ ಹೆಮ್ಮೆ, ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಅವಮಾನಿಸಿದೆ. ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ, ಯುವ, ಶಕ್ತಿಯುತ, ಶ್ರಮಶೀಲ ಮತ್ತು ಕ್ರಿಯಾಶೀಲ ಒಡಿಯಾದ ಭೂಮಿಪುತ್ರ (ಮಣ್ಣಿನ ಮಗ)ನನ್ನು ಮುಖ್ಯಮಂತ್ರಿಯನ್ನಾಗಿ ನೀಡಲಿದೆ,ʼ ಎಂದು ಹೇಳಿದರು.
ʻನವೀನ್ ಬಾಬು ಒಡಿಶಾದಲ್ಲಿ ಬಾಬುಶಾಹಿ ತಂದಿದ್ದು, ಒಡಿಯಾ ಜನರ ಹೆಮ್ಮೆ ಮತ್ತು ಘನತೆಗೆ ಧಕ್ಕೆ ತರುತ್ತಿದ್ದಾರೆ. ಬಿಜೆಪಿಗೆ ಮತ ಹಾಕಿದರೆ ಭೂಮಿಪುತ್ರ ಉತ್ಕಲ ಭೂಮಿಯನ್ನು ಆಳುತ್ತಾನೆಯೇ ಹೊರತು ತಮಿಳು ಬಾಬು ಅಲ್ಲ’ ಎಂದು ಹೇಳಿದರು.
ಖನಿಜ ಸಂಪನ್ಮೂಲ ರಕ್ಷಣೆ: ʻಬಿಜೆಡಿ ಸರ್ಕಾರವು ಜಗನ್ನಾಥ ದೇವಾಲಯವನ್ನು ವಾಣಿಜ್ಯ ಕೇಂದ್ರವಾಗಿ ಪರಿವರ್ತಿಸಲು ಬಯಸಿದೆ. ಮಠಗಳು ಮತ್ತು ದೇವಾಲಯಗಳನ್ನು ನಾಶಪಡಿಸಲಾಗಿದೆ. ದೇವಾಲಯದ ಎಲ್ಲ ನಾಲ್ಕು ದ್ವಾರಗಳನ್ನು ಸಾರ್ವಜನಿಕರಿಗೆ ಇನ್ನೂ ಮುಕ್ತಗೊಳಿಸಿಲ್ಲ. ಜಗನ್ನಾಥನ ಜಗತ್ಪ್ರಸಿದ್ಧ ರಥಯಾತ್ರೆಯನ್ನು ನಿಲ್ಲಿಸಲಿದೆ. ಬಿಜೆಡಿ ಸರ್ಕಾರ ಪಶ್ಚಿಮ ಒಡಿಶಾವನ್ನು ನಿರ್ಲಕ್ಷಿಸಿದೆ. ಬಿಜೆಪಿ ರಾಜ್ಯದ ಎಲ್ಲಾ ಭಾಗಗಳ ಸಮಾನ ಅಭಿವೃದ್ಧಿಗೆ ಬದ್ಧವಾಗಿದೆ. ಸಂಬಲ್ಪುರದಲ್ಲಿ 500 ಹಾಸಿಗೆಗಳ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ನಿರ್ಮಿಸುತ್ತದೆ ಮತ್ತು ತೆಂಡು ಎಲೆ ಕಾರ್ಮಿಕರಿಗೆ ಪಿಎಫ್ (ಭವಿಷ್ಯ ನಿಧಿ) ನೀಡಲಿದೆ,ʼ ಎಂದು ಘೋಷಿಸಿದರು.
ಒಡಿಷಾದಲ್ಲಿ ಸಚಿವ ಧರ್ಮೇಂದ್ರ ಪ್ರಧಾನ್ ಸ್ಪರ್ಧಿಸಿದ್ದಾರೆ.