Election 2024/ಮಹಾರಾಷ್ಟ್ರ,ಉತ್ತರಪ್ರದೇಶದಲ್ಲಿ ಸೀಟು ಹಂಚಿಕೆ ಅಂತಿಮಗೊಳಿಸಿದ ಬಿಜೆಪಿ
x

Election 2024/ಮಹಾರಾಷ್ಟ್ರ,ಉತ್ತರಪ್ರದೇಶದಲ್ಲಿ ಸೀಟು ಹಂಚಿಕೆ ಅಂತಿಮಗೊಳಿಸಿದ ಬಿಜೆಪಿ

ಮರಾಠ ಸಮುದಾಯವು ಒಬಿಸಿಯಡಿ ಮೀಸಲಿಗೆ ಒತ್ತಾಯಿಸುತ್ತಿರುವುದರಿಂದ, ಐದು ನಿರ್ಣಾಯಕ ಲೋಕಸಭೆ ಕ್ಷೇತ್ರಗಳಲ್ಲಿ ಸೀಟು ಹಂಚಿಕೆ ವಿಳಂಬಗೊಂಡಿತ್ತು.ಬಿಜೆಪಿ ಒಬಿಸಿ ಮತಗಳನ್ನು ಸೆಳೆಯಲು ರಾಷ್ಟ್ರೀಯ ಸಮಾಜ ಪಕ್ಷದ ಮುಖ್ಯಸ್ಥ ಮಹಾದೇವ ಜಂಕರ್‌ ಅವರನ್ನು ನಿಯೋಜಿಸಿದೆ.


ಲೋಕಸಭೆ ಚುನಾವಣೆಯ ಕೊನೆಯ ಮೂರು ಹಂತಗಳು ಪೂರ್ಣಗೊಳ್ಳಲು ಕೇವಲ ಹದಿನೈದು ದಿನ ಬಾಕಿ ಉಳಿದಿದೆ. ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ಎನ್‌ಡಿಎ ಮೈತ್ರಿಕೂಟದ ಸದಸ್ಯರೊಂದಿಗೆ ಸೀಟು ಹಂಚಿಕೆಗೆ ಅಂತಿಮ ಸ್ಪರ್ಶ ನೀಡಿದೆ.

ಸೀಟು ಹಂಚಿಕೆ ಸುಗಮಗೊಂಡಿರುವುದರಿಂದ, ಮಹಾರಾಷ್ಟ್ರದಲ್ಲಿ ಅದರ ಸಾಮಾಜಿಕ ಎಂಜಿನಿಯರಿಂಗ್ ಸೂತ್ರ ಬಲಗೊಳ್ಳುವ ಸಾಧ್ಯತೆಯಿದೆ. ರಾಜ್ಯದಲ್ಲಿ ಮರಾಠ ಸಮುದಾಯವು ಇತರ ಹಿಂದುಳಿದ ವರ್ಗ(ಒಬಿಸಿ)ಗಳಡಿ ಮೀಸಲಿಗೆ ಒತ್ತಾಯಿಸುತ್ತಿದೆ. ಮರಾಠ ಸಮುದಾಯಕ್ಕೆ ಒಬಿಸಿ ಸ್ಥಾನಮಾನ ನೀಡಬೇಡಿ ಎಂದು ಬಹುತೇಕ ಒಬಿಸಿ ಸಮುದಾಯದವರು ರಾಜ್ಯ ಸರ್ಕಾರಕ್ಕೆ ಖಡಾಖಂಡಿತವಾಗಿ ಹೇಳಿರುವುದರಿಂದ, ಬಿಜೆಪಿ-ಎನ್‌ಡಿಎ ಮೈತ್ರಿ ಇಕ್ಕಟ್ಟಿಗೆ ಸಿಲುಕಿದೆ.

ಮಹಾರಾಷ್ಟ್ರದ ಐದು ನಿರ್ಣಾಯಕ ಲೋಕಸಭೆ ಸ್ಥಾನ: ಮರಾಠ ಸಮುದಾಯದ ಒಬಿಸಿ ಸ್ಥಾನಮಾನದ ಬೇಡಿಕೆಯಿಂದಾಗಿ, ಐದು ನಿರ್ಣಾಯಕ ಲೋಕಸಭೆ ಸ್ಥಾನಗಳಲ್ಲಿ ಸೀಟು ಹಂಚಿಕೆ ವಿಳಂಬಗೊಂಡಿತ್ತು. ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯು ಈ ಐದು ಸ್ಥಾನಗಳಲ್ಲೂ ಸ್ಪರ್ಧಿಸುವುದಾಗಿ ಹಠ ಹಿಡಿದಿದೆ. ಅವಿಭಜಿತ ಶಿವಸೇನೆಯು ಪರ್ಭಾನಿ, ನಾಸಿಕ್, ಥಾಣೆ, ಪಾಲ್ಘರ್ ಮತ್ತು ಕಲ್ಯಾಣ್ ಐದು ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಇದರಿಂದಾಗಿ, ಶಿಂಧೆ ಈ ಕ್ಷೇತ್ರಗಳನ್ನು ಬಿಟ್ಟುಕೊಡಲು ಸಿದ್ಧವಿರಲಿಲ್ಲ.

ಈ ಕ್ಷೇತ್ರಗಳಲ್ಲಿ ಕೆಲವನ್ನು ಬಿಟ್ಟುಕೊಡುವಂತೆ ಶಿಂಧೆ ಅವರನ್ನು ಬಿಜೆಪಿಯ ಹಿರಿಯ ನಾಯಕರು ಮನವೊಲಿಸಿದ ಬಳಿಕ ಶಿವಸೇನೆ ಮೂರು ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ ಮತ್ತು ಎರಡು ಸ್ಥಾನಗಳಲ್ಲಿ ಒಂದನ್ನು ಬಿಜೆಪಿಗೆ ಮತ್ತು ರಾಷ್ಟ್ರೀಯ ಸಮಾಜ ಪಕ್ಷದ ಮಹಾದೇವ ಜಂಕರ್ ಅವರಿಗೆ ನೀಡಲಾಗಿದೆ. ರಾಜಿ ಸೂತ್ರದ ಪ್ರಕಾರ, ಶಿವಸೇನೆಯು ನಾಸಿಕ್, ಕಲ್ಯಾಣ್ ಮತ್ತು ಥಾಣೆಯಲ್ಲಿ, ಬಿಜೆಪಿ ಪಾಲ್ಘರ್‌ನಲ್ಲಿ ಮತ್ತು ಪರ್ಭಾನಿ ಕ್ಷೇತ್ರದಿಂದ ಮಹಾದೇವ ಜಂಕರ್ ಸ್ಪರ್ಧಿ ಸಲಿದ್ದಾರೆ.

ಒಬಿಸಿ ಮತ್ತು ಮರಾಠ ಮತಗಳ ವಿಭಜನೆ: ಎನ್‌ಡಿಎಗೆ ಚಿಂತೆಗೆ ಕಾರಣವಾಗಿರುವುದು ಒಬಿಸಿ ಮತ್ತು ಮರಾಠ ಮತಗಳ ವಿಭಜನೆ. ʻಒಬಿಸಿ ಸಮುದಾಯದವರು ಬಿಜೆಪಿ ಮತ್ತು ಎನ್‌ಡಿಎ ಪಾಲುದಾರರಿಗೆ ಮತ ಹಾಕುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಈ ಚುನಾವಣೆಯಲ್ಲಿ 48 ಸ್ಥಾನಗಳಲ್ಲಿ ಬಹುಪಾಲು ಕ್ಷೇತ್ರಗಳನ್ನು ಎನ್‌ಡಿಎ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ,ʼ ಎಂದು ರಾಷ್ಟ್ರೀಯ ಸಮಾಜ ಪಕ್ಷದ ಮುಖ್ಯಸ್ಥ ಮತ್ತು ಪರ್ಭಾನಿಯ ಎನ್‌ಡಿಎ ಅಭ್ಯರ್ಥಿ ಮಹಾದೇವ್ ಜಂಕರ್ ದ ಫೆಡರಲ್‌ಗೆ ತಿಳಿಸಿದರು.

ಜಂಕರ್ ಅವರ ಪಾತ್ರ ಮಹತ್ವದ್ದು. ಏಕೆಂದರೆ, ಅವರು ಒಬಿಸಿ ಅಡಿ ಮರಾಠರಿಗೆ ಮೀಸಲು ನೀಡಬೇಕೆಂಬ ಬೇಡಿಕೆಗೆ ಪ್ರತಿಯಾಗಿ ಒಬಿಸಿ ಸಮುದಾಯದಿಂದ ಮಹಾರಾಷ್ಟ್ರದಾದ್ಯಂತ ಪ್ರತಿಭಟನೆ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ದ್ದರು. ಮಹಾರಾಷ್ಟ್ರದಲ್ಲಿ ಐದನೇ ಹಂತದಲ್ಲಿ 13 ಸ್ಥಾನಗಳಲ್ಲಿ ಚುನಾವಣೆ ನಡೆಯಬೇಕಿದ್ದು,ಬಿಜೆಪಿಯ ಹಿರಿಯ ನಾಯಕರು ಈ ಎಲ್ಲಾ ಸ್ಥಾನಗಳಲ್ಲಿ ಪ್ರಚಾರ ಮಾಡಬೇಕೆಂದು ಜಂಕರ್‌ ಅವರನ್ನು ಕೇಳಿಕೊಂಡಿದ್ದಾರೆ.

ʻಎನ್‌ಡಿಎಯಲ್ಲಿ ನನ್ನ ಪಾತ್ರ ಸ್ಪಷ್ಟವಾಗಿದೆ. ಒಬಿಸಿ ಸಮುದಾಯದ ಮತಗಳನ್ನು ಬಿಜೆಪಿ-ಎನ್‌ಡಿಎ ಪಾಲುದಾರರಿಗೆ ಹಾಕಿಸುವಂತೆ ನನ್ನ ನ್ನು ಕೇಳಲಾಗಿದೆ. ನಾನು ಈಗಾಗಲೇ 14 ರಿಂದ 16 ಲೋಕಸಭೆ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದೇನೆ. ಮೇ 20 ರಂದು ಚುನಾವಣೆ ನಡೆಯಲಿರುವ ಉಳಿದ 13 ಕ್ಷೇತ್ರಗಳಲ್ಲೂ ಪ್ರಚಾರ ಮಾಡುತ್ತೇನೆ,ʼ ಎಂದು ಜಂಕರ್ ಹೇಳಿದರು.

ಮಹಾರಾಷ್ಟ್ರ ಮತ್ತು ಉತ್ತರಪ್ರದೇಶ ನಿರ್ಣಾಯಕ ರಾಜ್ಯಗಳಾಗಿದ್ದು, ಒಟ್ಟು 128 ಸಂಸದರನ್ನು ಆಯ್ಕೆ ಮಾಡುತ್ತವೆ. 2019 ರ ಚುನಾವಣೆ ಯಲ್ಲಿ ಎನ್‌ಡಿಎ 103 ಸ್ಥಾನಗಳನ್ನುಗೆದ್ದಿದೆ.

ಉತ್ತರ ಪ್ರದೇಶಕ್ಕೆ ಕಾರ್ಯನೀತಿ: ಮುಂದಿನ ಎರಡು ವಾರಗಳಲ್ಲಿ ಉತ್ತರ ಪ್ರದೇಶದ ಶೇ. 50ಕ್ಕೂ ಹೆಚ್ಚು ಸ್ಥಾನಗಳಿಗೆ ಚುನಾವಣೆ ನಡೆ ಯಲಿದೆ. ಸಣ್ಣ ಪಕ್ಷಗಳ ಬೇಡಿಕೆ ಈಡೇರಿಸುವ ಪ್ರಯತ್ನದಲ್ಲಿ ಎನ್‌ಡಿಎ ಪಾಲುದಾರರ ನಡುವಿನ ಸೀಟು ಹಂಚಿಕೆ ವಿಳಂಬಗೊಂಡಿತ್ತು.

ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ನೇತೃತ್ವದ ಅಪ್ನಾ ದಳ, ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ (ಎಸ್‌ ಬಿಎಸ್‌ಜೆ) ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್ ಮತ್ತು ನಿಶಾದ್‌ ಪಕ್ಷಗಳು ಪೂರ್ವ ಉತ್ತರ ಪ್ರದೇಶದಲ್ಲಿ ಎಂಟು ಲೋಕಸಭೆ ಸ್ಥಾನಗಳನ್ನು ಕೇಳಿದ್ದವು. ಪೂರ್ವ ಉತ್ತರ ಪ್ರದೇಶದಲ್ಲಿ ಈ ಮೂರು ಪ್ರಾದೇಶಿಕ ಪಕ್ಷಗಳು ಸಾಕಷ್ಟು ಬಲ ಹೊಂದಿವೆ. ಅಪ್ನಾ ದಳ ಕನಿಷ್ಠ ಮೂರು, ಎಸ್‌ಬಿಎಸ್‌ಜೆ ಮೂರು ಮತ್ತು ನಿಶಾದ್ ಪಕ್ಷವು ಎರಡು ಕ್ಷೇತ್ರವನ್ನು ಕೇಳಿದ್ದವು.

ʻಅಪ್ನಾ ದಳ ಎರಡು ಸ್ಥಾನದಲ್ಲಿ ಸ್ಪರ್ಧಿಸುತ್ತಿದೆ. ಹೆಚ್ಚು ಸ್ಥಾನಗಳ ನಮ್ಮ ಬೇಡಿಕೆ ಈಡೇರದ ಕಾರಣ ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ. ನಾವು ಎನ್‌ಡಿಎ ಭಾಗವಾಗಿರುವುದರಿಂದ, ಮೈತ್ರಿ ಕೂಟ ಗೆಲ್ಲುವುದು ಮುಖ್ಯವೇ ಹೊರತು ಪಕ್ಷದ ವೈಯಕ್ತಿಕ ಗೆಲುವಲ್ಲʼ ಎಂದು ಪಕ್ಷದ ಶಾಸಕ ಡಾ. ಸುನಿಲ್ ಪಟೇಲ್ ʻದ ಫೆಡರಲ್‌ʼಗೆ ತಿಳಿಸಿದರು. ಅಪ್ನಾ ದಳ ಮಿರ್ಜಾಪುರ ಮತ್ತು ರಾಬರ್ಟ್ಸ್‌ಗಂಜ್‌ ಕ್ಷೇತ್ರದಿಂದ, ಎಸ್‌ಬಿಎಸ್‌ಜೆ ಘೋಸಿಯಿಂದ ಸ್ಪರ್ಧಿಸಲಿದೆ ಮತ್ತು ನಿಶಾದ್ ಪಕ್ಷ ಭದೋಹಿಯಿಂದ ಸ್ಪರ್ಧಿಸಲಿದೆ.

ಬಿಹಾರದ ವಿಧಾನಸಭೆ ಚುನಾವಣೆ ನವೆಂಬರ್‌ 2025ರಲ್ಲಿ ನಡೆಯಲಿದ್ದು, ಆಗ ಈ ಮೂರು ಪಕ್ಷಗಳಿಗೆ ಉತ್ತರ ಪ್ರದೇಶ ಮತ್ತು ಬಿಹಾರದ ಗಡಿಗೆ ಹೊಂದಿಕೊಂಡಿರುವ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗುತ್ತದೆ ಎಂದು ಬಿಜೆಪಿ ನಾಯಕತ್ವ ಆಶ್ವಾಸನೆ ನೀಡಿದೆ.

ʻನಾವು ಅಥವಾ ಎರಡು ಸ್ಥಾನದ ಬಗ್ಗೆ ಮಾತನಾಡುವುದಿಲ್ಲ. ಉತ್ತರ ಪ್ರದೇಶದ ಎಲ್ಲಾ 80 ಸ್ಥಾನಗಳನ್ನು ಹಾಗೂ ಮುಂದಿನ ವರ್ಷ ಬಿಹಾರದಲ್ಲಿ ಎನ್‌ಡಿಎ ಸರ್ಕಾರ ರಚಿಸುವ ಗುರಿಯನ್ನು ಹೊಂದಿದ್ದೇವೆʼ ಎಂದು ಎಸ್‌ಬಿಎಸ್‌ಜೆ ರಾಷ್ಟ್ರೀಯ ವಕ್ತಾರ ಅರುಣ್ ಕುಮಾರ್ ರಾಜ್‌ಭರ್ ದ ಫೆಡರಲ್‌ಗೆ ತಿಳಿಸಿದರು.

Read More
Next Story