ಕಾಂಗ್ರೆಸ್ಸಿನಿಂದ  ಮೂರು ಲೋಕಗಳಲ್ಲೂ ಹಗರಣ: ನಡ್ಡಾ
x

ಕಾಂಗ್ರೆಸ್ಸಿನಿಂದ ಮೂರು ಲೋಕಗಳಲ್ಲೂ ಹಗರಣ: ನಡ್ಡಾ


ರಾಂಪುರ (ಯುಪಿ), ಏ. 8- ಕಾಂಗ್ರೆಸ್ ಮೂರು ಲೋಕಗಳಲ್ಲೂ ಹಗರಣ ಮಾಡಿದೆ. ಪಕ್ಷ ಆಕಾಶ, ಭೂಮಿಯೊಳಗೆ ಮತ್ತು ನೀರಿನಲ್ಲಿ ಕೂಡ ಬಿಡಲಿಲ್ಲ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಸೋಮವಾರ ಆರೋಪಿಸಿದ್ದಾರೆ.

ಸೋಮವಾರ ರಾಂಪುರದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣೆ ಸಭೆಯಲ್ಲಿ ಇಂಡಿಯ ಒಕ್ಕೂಟದ ವಿರುದ್ಧ ವಾಗ್ದಾಳಿ ನಡೆಸಿದರು, ʻಮೋದಿಜಿ ಭ್ರಷ್ಟಾಚಾರವನ್ನು ಕೊನೆಗೊಳಿಸಲು ಹೇಳುತ್ತಿದ್ದಾರೆ. ಯಾವುದೇ ಭ್ರಷ್ಟರನ್ನು ಬಿಡುವುದಿಲ್ಲ; ಅವರೆಲ್ಲರೂ ಜೈಲಿಗೆ ಹೋಗುತ್ತಾರೆ. ಆದರೆ, ಮೈತ್ರಿಕೂಟ ಭ್ರಷ್ಟರನ್ನು ʻಉಳಿಸಿʼ ಎಂದು ಹೇಳುತ್ತಿದೆ ಮತ್ತು ಅವರು ಅದರಲ್ಲಿ ʻತೊಡಗಿಕೊಂಡಿದ್ದಾರೆʼ ಎಂದು ಹೇಳಿದರು.

ʻಕಾಂಗ್ರೆಸ್ ಕಲ್ಲಿದ್ದಲು, ಸಿಡಬ್ಲ್ಯುಜಿ, 2ಜಿ/ 3ಜಿ ಹಗರಣ, ಅಗಸ್ಟಾ ವೆಸ್ಟ್‌ ಲ್ಯಾಂಡ್ ಮತ್ತು ಸಬ್‌ ಮರೇನ್‌ ಹಗರಣ ಮಾಡಿದೆ. ಬೇರೆ ರೀತಿ ಹೇಳುವುದಾದರೆ, ಮೂರು ಲೋಕದಲ್ಲೂ ಹಗರಣಗಳನ್ನು ಮಾಡಿದೆʼ ಎಂದು ಹೇಳಿದರು.

ʻಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಲ್ಯಾಪ್‌ಟಾಪ್ ಹಗರಣ, ಆಹಾರಧಾನ್ಯ ಹಗರಣ ಮಾಡಿದ್ದಾರೆ. ಆರ್‌ಜೆಡಿ ಹಿರಿಯ ನಾಯಕ ಲಾಲು ಪ್ರಸಾದ್ ಅವರು ಮೇವು ಹಗರಣ ಮತ್ತು ಭೂ ಹಗರಣ ಮಾಡಿದ್ದಾರೆʼ ಎಂದು ಆರೋಪಿಸಿದರು. ʻತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಆದಾಯ 1.32 ಲಕ್ಷ ಕೋಟಿ ರೂ. ಎಂದು ನಿಮಗೆ ತಿಳಿದಿದೆಯೇ? ಈ ಆದಾಯಕ್ಕೆ ಯಾವುದೇ ಮೂಲವಿಲ್ಲ. ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್‌ ಅವರ ಜಾರ್ಖಂಡ ಮುಕ್ತಿ ಮೋರ್ಚಾ (ಜೆಎಂಎಂ) ಕೂಡ ಹಗರಣ ಮಾಡಿದೆ. ಅರವಿಂದ್ ಕೇಜ್ರಿವಾಲ್ ಮದ್ಯದ ಹಗರಣ ಮಾಡಿಲ್ಲವೇ? ಇಂಡಿಯ ಒಕ್ಕೂಟ ಭ್ರಷ್ಟರ ಮೈತ್ರಿ ಹೊರತು ಬೇರೇನೂ ಅಲ್ಲ,ʼ ಎಂದು ಅವರು ಹೇಳಿದರು.

ʻರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಾಜಿ ಸಚಿವ ಪಿ. ಚಿದಂಬರಂ, ಡಿಎಂಕೆ ಸಚಿವರು ಮತ್ತು ಮಮತಾ ಬ್ಯಾನರ್ಜಿ ಸರ್ಕಾರದ ಸಚಿವರು ಜಾಮೀನಿನ ಮೇಲೆ ಇದ್ದಾರೆ. ಸೋರೆನ್, ಕೇಜ್ರಿವಾಲ್, ಎಎಪಿ ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್, ಟಿಎಂಸಿ ಸಚಿವರು, ಕೆಸಿಆರ್ ಅವರ ಪುತ್ರಿ ಕೆ.ಕವಿತಾ ಮತ್ತು ರಾಂಪುರದ ಹಿರಿಯ ಎಸ್‌ಪಿ ನಾಯಕ ಅಜಂ ಖಾನ್ ಜೈಲಿನಲ್ಲಿದ್ದಾರೆʼ ಎಂದು ಹೇಳಿದರು.

ʻಪರಿವಾರವಾದಿʼ ಪಕ್ಷಗಳನ್ನು ಪಟ್ಟಿ ಮಾಡಿ, ʻಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ; ನ್ಯಾಷನಲ್ ಕಾನ್ಫರೆನ್ಸ್ ನಲ್ಲಿ ಓಮರ್ ಅಬ್ದುಲ್ಲಾ ಮತ್ತು ಫಾರೂಕ್ ಅಬ್ದುಲ್ಲಾ, ಪಿಡಿಪಿಯಲ್ಲಿ ಮುಫ್ತಿ ಮೊಹಮ್ಮದ್ ಮತ್ತು ಮೆಹಬೂಬಾ ಮುಫ್ತಿ, ಶಿರೋಮಣಿ ಅಕಾಲಿ ದಳದಲ್ಲಿ ಪ್ರಕಾಶ್ ಸಿಂಗ್ ಬಾದಲ್, ಸುಖಬೀರ್ ಬಾದಲ್, ಚೌತಾಲಾ ಕುಟುಂಬ, ಎಸ್ಪಿಯಲ್ಲಿ ಮುಲಾಯಂ ಸಿಂಗ್ ಯಾದವ್, ಅಖಿಲೇಶ್ ಯಾದವ್ ಮತ್ತು ಡಿಂಪಲ್ ಯಾದವ್, ಲಾಲು ಯಾದವ್, ರಾಬ್ರಿ ದೇವಿ, ತೇಜಸ್ವಿ ಯಾದವ್,ತೇಜ್ ಪ್ರತಾಪ್; ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ, ಕೆಸಿಆರ್,ಕೆಟಿಆರ್,ಕವಿತಾ, ಕರುಣಾನಿಧಿ,ಎಂ.ಕೆ. ಸ್ಟಾಲಿನ್, ಉದಯನಿಧಿ ಮತ್ತು ಉದ್ಧವ್ ಠಾಕ್ರೆ ಮತ್ತು ಆದಿತ್ಯ ಠಾಕರೆ ಹೆಸರು ಉಲ್ಲೇಖಿಸಿದರು.

ಏಪ್ರಿಲ್ 19 ರಂದು ಉತ್ತರ ಪ್ರದೇಶದ ಸಹರಾನ್‌ಪುರ, ಕೈರಾನಾ, ಮುಜಾಫರ್‌ನಗರ, ಬಿಜ್ನೋರ್, ನಗೀನಾ (ಎಸ್‌ಸಿ), ಮೊರಾದಾಬಾದ್, ರಾಂಪುರ್ ಮತ್ತು ಪಿಲಿಭಿತ್‌ ನಲ್ಲಿ ಮತ ಚಲಾವಣೆ ನಡೆಯಲಿದೆ.

Read More
Next Story