ರಾಮ್ ರಹೀಮ್, ಕೇಜ್ರಿವಾಲ್ ಬಿಡುಗಡೆ ಹಿಂದೆ ಬಿಜೆಪಿ: ರಾಬರ್ಟ್ ವಾದ್ರಾ
ನವದೆಹಲಿ: ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಮತ್ತು ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಬಿಡುಗಡೆ ಹಿಂದೆ ಬಿಜೆಪಿಯ ಕೈವಾಡವಿದ್ದು, ಕಾಂಗ್ರೆಸ್‌ನ ಅವಕಾಶಗಳನ್ನು ಕುಗ್ಗಿಸುವುದು ಉದ್ಧೇಶ ಎಂದು ರಾಬರ್ಟ್ ವಾದ್ರಾ ಮಂಗಳವಾ ರ ದೂರಿದ್ದಾರೆ.
ತಮ್ಮ ಹೆಸರನ್ನು ಅವಹೇಳನಕಾರಿ ರೀತಿಯಲ್ಲಿ ಬಳಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವರಿಷ್ಠರ ವಿರುದ್ಧ ಕೂಡ ವಾದ್ರಾ ವಾಗ್ದಾಳಿ ನಡೆಸಿದರು.
ʻಕೊಲೆ, ಅತ್ಯಾಚಾರ ಆರೋಪಿ ಬಾಬಾ ರಾಮ್ ರಹೀಮ್ ಅವರನ್ನು ಚುನಾವಣೆಗೆ 20 ದಿನ ಮೊದಲು ಬಿಡುಗಡೆ ಮಾಡಬಹುದು. ಕೇಜ್ರಿವಾಲ್ ಅವರು ಹರಿಯಾಣದಲ್ಲಿ ಪ್ರಚಾರ ಮಾಡಲು ಆಗುವಂತೆ ಬಿಡುಗಡೆ ಮಾಡಲಾಗಿದೆ. ಇದು ಬಿಜೆಪಿಯ ಪೂರ್ವಯೋಜಿತ ತಂತ್ರ ಎಂದು ಭಾವಿಸುತ್ತೇನೆ. ಈ ಮೂಲಕ ಹರ್ಯಾಣದಲ್ಲಿ ಗೆಲ್ಲುವ ಕಾಂಗ್ರೆಸ್‌ನ ಅವಕಾಶವನ್ನು ಕಸಿದುಕೊಳ್ಳಬಹುದು ಎಂದು ಬಿಜೆಪಿ ಭಾವಿಸಿದಂತಿದೆ,ʼ ಎಂದು ಹೇಳಿದರು.
ಹರಿಯಾಣ ಸರ್ಕಾರವು ಡೇರಾ ಮುಖ್ಯಸ್ಥರ ಪೆರೋಲ್ ಪರಿಗಣಿಸಬಹುದು ಎಂದು ಮುಖ್ಯ ಚುನಾವಣಾಧಿಕಾರಿ ಪಂಕಜ್ ಅಗರ್ವಾಲ್ ಸೋಮವಾರ ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದ ಕೇಜ್ರಿವಾಲ್ ಅವರು ಹರಿಯಾಣದಾದ್ಯಂತ ಪ್ರಚಾರ ನಡೆಸುತ್ತಿದ್ದಾರೆ.
ʻನಾನು ಹರಿಯಾಣದಲ್ಲಿ ಉದ್ಯೋಗ ಸೃಷ್ಟಿಸಬಹುದಿತ್ತು. ಆದರೆ, ಬಿಜೆಪಿ ಸರ್ಕಾರ ನನ್ನ ಸಹಚರರನ್ನು ಹೆದರಿಸಿ, ಅವರು ದೂರ ಹೋಗುವಂತೆ ಮಾಡಿದರು. ನನಗೆ ಈಗ ಕೆಲಸ ಮಾಡುವುದು ಕಷ್ಟ; ಅವರು ನನ್ನನ್ನು ಆರ್ಥಿಕವಾಗಿ ನಾಶಮಾಡಲು ಪ್ರಯತ್ನಿಸಿದರು,ʼ ಎಂದು ದೂರಿದರು. ಹರಿಯಾಣದ ಜನರು ಕಾಂಗ್ರೆಸ್ಸಿಗೆ ಅಧಿಕ ಬಹುಮತ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹರಿಯಾಣದಲ್ಲಿ ಅಕ್ಟೋಬರ್ 5 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 8 ರಂದು ಫಲಿತಾಂಶ ಹೊರಬೀಳಲಿದೆ