Bird strikes : ವಿಮಾನಯಾನಕ್ಕೆ ಅಪಾಯ ತಂದೊಡ್ಡುವ ಬರ್ಡ್‌ ಸ್ಟ್ರೈಕ್‌
x
ಪ್ರಾತಿನಿಧಿಕ ಚಿತ್ರ.

Bird strikes : ವಿಮಾನಯಾನಕ್ಕೆ ಅಪಾಯ ತಂದೊಡ್ಡುವ ಬರ್ಡ್‌ ಸ್ಟ್ರೈಕ್‌

ತಂತ್ರಜ್ಞಾನ ಸುಧಾರಣೆಯಾಗಿದ್ದರೂ, ತಪ್ಪಿಸಲು ನಾನಾ ರೀತಿಯ ಕ್ರಮಗಳನ್ನು ಕೈಗೊಂಡಿರುವ ಹೊರತಾಗಿಯೂ ಪಕ್ಷಿಗಳ ಹಿಂಡು ಡಿಕ್ಕಿ ಹೊಡೆದ ಪರಿಣಾಮ ಅಜೆರ್‌ಬೈಜಾನ್‌ನ ವಿಮಾನವೊಂದು ನೆಲಕಪ್ಪಳಿಸಿದ ಕಾರಣ ಈ ಪ್ರಶ್ನೆ ಎದುರಾಗಿದೆ.


ಬುಧವಾರ (ಡಿಸೆಂಬರ್ 25) ಕಜಕಸ್ತಾನದ ಅಕ್ಟೌ ವಿಮಾನ ನಿಲ್ದಾಣದ ಬಳಿ 67 ಪ್ರಯಾಣಿಕರನ್ನುಹೊತ್ತೊಯ್ಯುತ್ತಿದ್ದ ವಿಮಾನವೊಂದು ಭೂಮಿಗೆ ಅಪ್ಪಳಿಸಿದೆ. ಇದರಲ್ಲಿ 25 ಮಂದಿ ಮಾತ್ರ ಬದುಕಿ ಉಳಿದಿದ್ದಾರೆ ಎಂದು ಮೂಲಗಳು ಹೇಳಿವೆ. ಅವರು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಮಾನದಲ್ಲಿದ್ದ ಸಿಬ್ಬಂದಿ ಹಾಗೂ ಪೈಲೆಟ್‌ ಕೂಡ ಮೃತಪಟ್ಟಿದ್ದಾರೆ. ಇದು ಇತ್ತೀಚಿನ ದಿನಗಳಲ್ಲಿನಡೆದ ಅತ್ಯಂತ ಭೀಕರ ವಿಮಾನ ದುರಂತವಾಗಿದೆ. ವಿಮಾನ ದುರಂತಕ್ಕೆ ಹಕ್ಕಿಗಳ ಹೊಡೆತ ಕಾರಣವೆಂದು ಪ್ರಾಥಮಿಕವಾಗಿ ಗೊತ್ತಾಗಿದೆ.

ಪಕ್ಷಿ ದಾಳಿಯಿಂದಾಗಿ ವಿಮಾನದಲ್ಲಿನ ಜಿಪಿಎಸ್‌ ಮತ್ತು ಅಡಾಸ್‌ ವ್ಯವಸ್ಥೆ ವೈಫಲ್ಯಗೊಂಡಿತು. ಹೀಗಾಗಿ ಪೈಲಟ್ ತುರ್ತು ಲ್ಯಾಂಡಿಂಗ್‌ಗೆ ಪ್ರಯತ್ನಿಸಿರಬಹುದು ಎಂದು ಹೇಳಲಾಗಿದೆ. ಹೀಗಾಗಿ ಪಕ್ಷಿಗಳ ದಾಳಿಯು ಮತ್ತೆ ಚರ್ಚೆಗೆ ಬಂದಿದೆ. ವಿಮಾನಯಾನಕ್ಕೆ ಅತ್ಯಂತ ಸವಾಲೊಡ್ಡುವ ಸಂಗತಿಯೇ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.

ಪಕ್ಷಿ ದಾಳಿ ಎಂದರೇನು?

ಪಕ್ಷಿ ದಾಳಿ ಅಥವಾ ಬರ್ಡ್‌ ಏರ್‌ಕ್ರಾಫ್ಟ್‌ ಸ್ಟ್ರೈಕ್‌ ಹಜಾರ್ಡ್‌ (BASH) ಸಾಮಾನ್ಯವಾಗಿ ವಿಮಾನ ಟೇಕ್ ಆಫ್ ಅಥವಾ ಲ್ಯಾಂಡಿಂಗ್ ಸಮಯದಲ್ಲಿ ಎದುರಾಗುತ್ತದೆ. ಅಲ್ಲದಿದ್ದರೆ ವಿಮಾನ ಕಡಿಮೆ ಎತ್ತರದ ಹಾರಾಟದ ಸಮಯದಲ್ಲಿ ಪಕ್ಷಿ ಅಥವಾ ಅವುಗಳ ಹಿಂಡು ವಿಮಾನಕ್ಕೆ ಡಿಕ್ಕಿ ಹೊಡೆದು ಆಘಾತ ಉಂಟು ಮಾಡುತ್ತದೆ.

ದೊಡ್ಡ ವಿಮಾನಕ್ಕೆ ಸಣ್ಣ ಹಕ್ಕಿ ಡಿಕ್ಕಿ ಹೊಡೆಯುವುದ ಕ್ಷುಲ್ಲಕ ವಿಚಾರವೆಂದು ತೋರಿದರೂ, ಪಕ್ಷಿಗಳ ದಾಳಿಯು ವಿಮಾನವನ್ನು ತೀವ್ರವಾಗಿ ಹಾನಿಗೊಳಿಸುತ್ತದೆ. ವಿಶೇಷವಾಗಿ ಪಕ್ಷಿಗಳು ಎಂಜಿನ್‌ಗಳು , ವಿಂಡ್‌ಶೀಲ್ಡ್‌ಗಳು ಅಥವಾ ಹಾರಾಟ ನಿಯಂತ್ರಣಗಳಂತಹ ನಿರ್ಣಾಯಕ ವ್ಯವಸ್ಥೆಗಳಿಗೆ ಡಿಕ್ಕಿ ಹೊಡೆದಾಗ ದೊಡ್ಡ ಹಾನಿ ನಿಶ್ಚಿತ.

ಹೆಚ್ಚಿನ ವೇಗದಲ್ಲಿ ಹಾರುವ ವಿಮಾನಕ್ಕೆ ಸಣ್ಣ ಪಕ್ಷಿಗಳು ಡಿಕ್ಕಿ ಹೊಡೆದಾಗ ಉಂಟಾಗುವ ಬಲವು ದುರಂತ ಪರಿಣಾಮಗಳಿಗೆ ಕಾರಣವಾಗುತ್ತದೆ. ಉದಾಹರಣೆಗೆ ಜೆಟ್ ಎಂಜಿನ್‌ಗಳಿಗೆ ಪಕ್ಷಿಗಳು ಬಡಿದರ ಎಂಜಿನ್ ವೈಫಲ್ಯಕ್ಕೆ ಕಾರಣವಾಗುತ್ತದೆ. ಈ ಸನ್ನಿವೇಶವು ಪೈಲಟ್‌ಗಳಿಗೆ ನಿಯಂತ್ರಿಸಲು ಸಾಧ್ಯವಾಗದ ಸ್ಥಿತಿಯಾಗಿದೆ.

ಪಕ್ಷಿಗಳ ದಾಳಿಯ ಪರಿಣಾಮ

ಪಕ್ಷಿ ದಾಳಿಗಳು ಕಡಿಮೆ ಎಂದು ಅಂದುಕೊಂಡರೂ ವಾರ್ಷಿಕವಾಗಿ ಸಾವಿರಾರು ಘಟನೆಗಳು ವರದಿಯಾಗುತ್ತವೆ. ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ಐಸಿಎಒ) ಪ್ರಕಾರ, ವಾಯುಯಾನದ ಆರಂಭಿಕ ದಿನಗಳಿಂದ ಹಿಡಿದು ಪಕ್ಷಿ ದಾಳಿಗಳಿಂದಾಗಿ 250ಕ್ಕೂ ಹೆಚ್ಚು ಸಾವುನೋವುಗಳಿಗೆ ಕಾರಣವಾಗಿವೆ. 500ಕ್ಕೂ ಹೆಚ್ಚು ವಿಮಾನಗಳನ್ನು ಪತನಗೊಂಡು ನಾಶಗೊಂಡಿವೆ.

ಇತ್ತೀಚಿನ ಪ್ರಕರಣವೆಂದರೆ , "ಮಿರಾಕಲ್ ಆನ್ ದಿ ಹಡ್ಸನ್". 2009ರಲ್ಲಿ, ಯುಎಸ್ ಏರ್‌ವೇಸ್‌ನ ವಿಮಾನ 1549ರ ಎರಡೂ ಎಂಜಿನ್‌ಗಳು ಪಕ್ಷಿಗಳ ದಾಳಿಯಿಂದ ನಿಷ್ಕ್ರಿಯಗೊಂಡವು. ಪೈಲೆಟ್‌ಗಳು ಚಾಕಚಕ್ಯತೆಯಿಂದ ಹಡ್ಸನ್ ನದಿಯಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದರು. ಅದೃಷ್ಟವಶಾತ್, ಎಲ್ಲಾ ಪ್ರಯಾಣಿಕರು ಬದುಕುಳಿದರು, ಆದರೆ ಈ ಘಟನೆಯು ಪಕ್ಷಿ ದಾಳಿಯ ಗಂಭೀರತೆಯನ್ನು ಎತ್ತಿ ತೋರಿಸಿತು .

ಮಾರಣಾಂತಿಕವಲ್ಲದ ಪಕ್ಷಿ ದಾಳಿಗಳು ಸಹ ಆಗಾಗ್ಗೆ ನಡೆಯುತ್ತಿರುತ್ತವೆ. ಈ ಘಟನೆಗಳು ಭಾರಿ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತವೆ. ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್ಎಎ) ಅಂದಾಜಿನ ಪ್ರಕಾರ, ಪಕ್ಷಿ ದಾಳಿಯಿಂದ ಜಾಗತಿಕ ವಾಯುಯಾನ ಉದ್ಯಮಕ್ಕೆ ವಾರ್ಷಿಕವಾಗಿ 1.2 ಬಿಲಿಯನ್ ಡಾಲರ್ ನಷ್ಟವುಂಟಾಗುತ್ತಿದೆ.

ಪಕ್ಷಿಗಳ ದಾಳಿ ತಡೆಗಟ್ಟುವ ರೀತಿಯೇನು?

ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣಗಳು ಮತ್ತು ವಾಯುಯಾನ ಅಧಿಕಾರಿಗಳು ಪಕ್ಷಿ ದಾಳಿಯ ಅಪಾಯಗಳನ್ನು ಕಡಿಮೆ ಮಾಡಲು ಹಲವಾರು ಕ್ರಮಗಳನ್ನು ಬಳಸುತ್ತಾರೆ:

1. ವನ್ಯಜೀವಿ ನಿರ್ವಹಣಾ ಯೋಜನೆ : ವಿಮಾನ ನಿಲ್ದಾಣಗಳು ಪಕ್ಷಿಗಳನ್ನು ಹೆದರಿಸಲು ಫಾಲ್ಕನ್‌ಗಳು, ನಾಯಿಗಳು ಮತ್ತು ಪೈರೋಟೆಕ್ನಿಕ್‌ಗಳಂಥ ಪಕ್ಷಿ ಪ್ರತಿಬಂಧಕಗಳನ್ನು ಬಳಸುತ್ತವೆ. ಪಕ್ಷಿಗಳು ಹತ್ತಿರದಲ್ಲಿ ಗೂಡುಕಟ್ಟುವುದನ್ನು ತಡೆಯಲು ಕೆಲವರು ಧ್ವನಿ ಫಿರಂಗಿಗಳು ಅಥವಾ ಲೇಸರ್‌ಗಳನ್ನು ಬಳಸುತ್ತಾರೆ.

2. ರಾಡಾರ್ ಮತ್ತು ಕಣ್ಗಾವಲು ವ್ಯವಸ್ಥೆಗಳು: ಸುಧಾರಿತ ಪಕ್ಷಿ ಪತ್ತೆ ರೇಡಾರ್‌ಗಳು ವಿಮಾನ ನಿಲ್ದಾಣಗಳಲ್ಲಿ ಮತ್ತು ಸುತ್ತಮುತ್ತಲಿನ ಪಕ್ಷಿಗಳ ಚಲನೆಯನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ, ವಾಯು ಸಂಚಾರ ನಿಯಂತ್ರಕರಿಗೆ ಎಚ್ಚರಿಕೆಗಳನ್ನು ನೀಡಲು ಅಥವಾ ಗರಿಷ್ಠ ಪಕ್ಷಿ ಚಟುವಟಿಕೆಯ ಸಮಯದಲ್ಲಿ ವಿಮಾನಗಳನ್ನು ವಿಳಂಬಗೊಳಿಸಲು ಅನುವು ಮಾಡಿಕೊಡುತ್ತದೆ.

3. ವಿಮಾನ ವಿನ್ಯಾಸ ಬದಲಾವಣೆ : ಆಧುನಿಕ ವಿಮಾನ ಎಂಜಿನ್‌ಗಳನ್ನು ಕೆಲವು ಮಿತಿಗಳವರೆಗೆ ಪಕ್ಷಿಗಳ ಹೊಡೆತಗಳನ್ನು ತಡೆದುಕೊಳ್ಳಲು ರೀತಿಯಲ್ಲಿ ರಚಿಸಲಾಗಿರುತ್ತದೆ. ಪಕ್ಷಿಗಳ ಹೊಡೆತವನ್ನು ಪ್ರತಿರೋಧಿಸಲು ವಿಂಡ್‌ಶೀಲ್ಡ್‌ಗಳನ್ನು ಬಲವಾಗಿ ನಿರ್ಮಿಸಲಾಗಿರುತ್ತದೆ.

4. ಎತ್ತರ ನಿಗದಿ : ಪಕ್ಷಿ ಗುಂಪಾಗಿ ವಲಸೆ ಹೋಗುವ ಮಾರ್ಗಗಳನ್ನು ತಪ್ಪಿಸಲು ಮತ್ತು ವಲಸೆ ಋತುಗಳಲ್ಲಿ ಎತ್ತರದ ಶಿಫಾರಸುಗಳನ್ನು ಅನುಸರಿಸಲು ಪೈಲೆಟ್‌ಗಳಿಗೆ ತರಬೇತಿ ನೀಡಲಾಗುತ್ತದೆ. ಅಪಾಯ ಕಡಿಮೆ ಮಾಡಲು ವಿಮಾನಯಾನ ಸಂಸ್ಥೆಗಳು ವಿಮಾನ ಮಾರ್ಗಗಳನ್ನು ಬದಲಾಯಿಸಬಹುದು.

5. ಪಕ್ಷಿಗಳ ಆವಾಸಸ್ಥಾನ ಮಾರ್ಪಾಡು: ವಿಮಾನ ನಿಲ್ದಾಣಗಳು ರನ್‌ವೇಗಳ ಬಳಿ ಆಹಾರ ಪಕ್ಷಿಗಳ ಮೂಲಗಳು ಮತ್ತು ಜಲಮೂಲಗಳು ಇಲ್ಲದಂತೆ ಮಾಡಲಾಗುತ್ತದೆ

ಮುಂದಿರುವ ದಾರಿಯೇನು?

ತಂತ್ರಜ್ಞಾನದ ಪ್ರಗತಿ ಮತ್ತು ತಡೆಗಟ್ಟುವ ಕ್ರಮಗಳ ಹೊರತಾಗಿಯೂ, ಪಕ್ಷಿ ದಾಳಿಗಳು ವಾಯುಯಾನದ ಅನಿವಾರ್ಯ ಅಂಶವಾಗಿ ಉಳಿದಿವೆ. ಕಜಕಸ್ತಾನದಲ್ಲಿ ಬುಧವಾರ ಸಂಭವಿಸಿದ ದುರಂತ ಇನ್ನೂ ಇಂಥ ಅಪಘಾತಗಳ ನಡೆಯಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ. ಹೀಗಾಗಿ ಇನ್ನಷ್ಟು ಸುಧಾರಣೆ ಅಗತ್ಯವಿದೆ.

Read More
Next Story