
ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ: ಈಗಾಗಲೇ 98% ದಾಖಲೆಗಳು ಸಲ್ಲಿಕೆ, ಚುನಾವಣಾ ಆಯೋಗದಿಂದ ಮಾಹಿತಿ
ಜೂನ್ 24 ರಿಂದ ಆಗಸ್ಟ್ 24ರವರೆಗಿನ 60 ದಿನಗಳಲ್ಲಿ ಈ ಸಾಧನೆ ಮಾಡಲಾಗಿದ್ದು, ಇದು ದಿನಕ್ಕೆ ಸರಾಸರಿ 1.64% ರಷ್ಟು ದಾಖಲೆ ಸಲ್ಲಿಕೆಗೆ ಸಮನಾಗಿದೆ.
ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision - SIR) ಪ್ರಕ್ರಿಯೆಯು ಅಂತಿಮ ಹಂತ ತಲುಪಿದ್ದು, ಈಗಾಗಲೇ 98.2% ರಷ್ಟು ಮತದಾರರಿಂದ ಅಗತ್ಯ ದಾಖಲೆಗಳನ್ನು ಸ್ವೀಕರಿಸಲಾಗಿದೆ ಎಂದು ಭಾರತ ಚುನಾವಣಾ ಆಯೋಗ (EC) ಭಾನುವಾರ ತಿಳಿಸಿದೆ.
ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಮತ್ತು ತಿದ್ದುಪಡಿಗಳನ್ನು ಸಲ್ಲಿಸಲು ಇನ್ನೂ ಎಂಟು ದಿನಗಳು ಬಾಕಿ ಇರುವಾಗಲೇ, ದಾಖಲೆ ಸಲ್ಲಿಕೆ ಪ್ರಕ್ರಿಯೆಯು ಬಹುತೇಕ ಪೂರ್ಣಗೊಂಡಿದೆ ಎಂದು ಆಯೋಗ ಹೇಳಿದೆ.
ದಾಖಲೆ ಸಲ್ಲಿಕೆಗೆ ಸೆಪ್ಟೆಂಬರ್ 1 ಕಡೇ ದಿನ
ಈ ಪರಿಷ್ಕರಣೆ ಪ್ರಕ್ರಿಯೆಯು, ಮತದಾರರಿಗೆ ತಮ್ಮ ಹೆಸರು, ವಿಳಾಸದಂತಹ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಮತ್ತು ಈ ಹಿಂದೆ ಅರ್ಜಿ ಸಲ್ಲಿಸುವಾಗ ಬಿಟ್ಟುಹೋಗಿದ್ದ ದಾಖಲೆಗಳನ್ನು ಒದಗಿಸಲು ಅವಕಾಶ ನೀಡುತ್ತದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
"ಬಿಹಾರ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ಬಂದಿರುವ ಮಾಹಿತಿಯ ಪ್ರಕಾರ, ಇಲ್ಲಿಯವರೆಗೆ 98.2% ಮತದಾರರ ದಾಖಲೆಗಳನ್ನು ಸ್ವೀಕರಿಸಲಾಗಿದೆ," ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.
ಜೂನ್ 24 ರಿಂದ ಆಗಸ್ಟ್ 24ರವರೆಗಿನ 60 ದಿನಗಳಲ್ಲಿ ಈ ಸಾಧನೆ ಮಾಡಲಾಗಿದ್ದು, ಇದು ದಿನಕ್ಕೆ ಸರಾಸರಿ 1.64% ರಷ್ಟು ದಾಖಲೆ ಸಲ್ಲಿಕೆಗೆ ಸಮನಾಗಿದೆ. ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 1 ಕೊನೆಯ ದಿನವಾಗಿದ್ದು, ಇನ್ನು ಕೇವಲ 1.8% ಮತದಾರರು ಮಾತ್ರ ತಮ್ಮ ದಾಖಲೆಗಳನ್ನು ಸಲ್ಲಿಸುವುದು ಬಾಕಿಯಿದೆ.
ಸುಪ್ರೀಂ ಕೋರ್ಟ್‌ನ ನಿರ್ದೇಶನ
ಮತದಾರರ ಪಟ್ಟಿಗೆ ಹೆಸರು ಸೇರಿಸಲು ಇಚ್ಛಿಸುವವರಿಂದ, ಆಧಾರ್ ಕಾರ್ಡ್ ಅಥವಾ ಚುನಾವಣಾ ಆಯೋಗವು ನಿಗದಿಪಡಿಸಿರುವ ಇತರೆ 11 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸ್ವೀಕರಿಸುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ, ದಾಖಲೆ ಸಲ್ಲಿಕೆ ಪ್ರಕ್ರಿಯೆಯು ಸುಗಮವಾಗಿ ನಡೆಯುತ್ತಿದೆ.