ಬಿಹಾರ: ಗ್ಯಾಂಗ್‌ರೇಪ್‌ನಿಂದ ಪಾರಾದ ನರ್ಸ್
ಬಿಹಾರದ ಖಾಸಗಿ ಆಸ್ಪತ್ರೆಯೊಂದರ ನರ್ಸ್ ತಮ್ಮ ಮೇಲಿನ ಸಾಮೂಹಿಕ ಅತ್ಯಾಚಾರ ಯತ್ನವನ್ನು ಧೈರ್ಯ ಮತ್ತು ಸಮಯಪ್ರಜ್ಞೆಯಿಂದ ವಿಫಲಗೊಳಿಸಿದ್ದಾರೆ.
ಖಾಸಗಿ ಆಸ್ಪತ್ರೆಯ ಆಡಳಿತಾಧಿಕಾರಿಯೂ ಆದ ವೈದ್ಯ, ಇಬ್ಬರು ಸಹಚರರೊಂದಿಗೆ ಅತ್ಯಾಚಾರಕ್ಕೆ ಯತ್ನಿಸಿದರು.ಆಸ್ಪತ್ರೆಗೆ ಒಳಗಿನಿಂದ ಬೀಗ ಹಾಕಿ, ಸಿಸಿಟಿವಿ ಕ್ಯಾಮೆರಾ ಆಫ್ ಮಾಡಿ ಹಲ್ಲೆಗೆ ಮುಂದಾಗಿದ್ದರು. ಆದರೆ, ನರ್ಸ್ ಬ್ಲೇಡಿನಿಂದ ವೈದ್ಯರ ಖಾಸಗಿ ಅಂಗವನ್ನು ಕತ್ತರಿಸಿ, ತಪ್ಪಿಸಿಕೊಂಡರು.
ಅತ್ಯಾಚಾರ ಯತ್ನ: ಸೆಪ್ಟೆಂಬರ್ 11 ರಂದು ಸಮಷ್ಟಿಪುರ ಜಿಲ್ಲೆಯ ಗಂಗಾಪುರದ ಆರ್‌ಬಿಎಸ್ ಹೆಲ್ತ್ ಕೇರ್ ಸೆಂಟರ್‌ನಲ್ಲಿ ಕರ್ತವ್ಯನಿರತ ನರ್ಸ್ ಮೇಲೆ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಂಜಯ್ ಕುಮಾರ್ ಮತ್ತು ಅವರ ಇಬ್ಬರು ಸಹಚರರು ಅತ್ಯಾಚಾರಕ್ಕೆ ಮುಂದಾಗಿದ್ದರು. ಅವರೆಲ್ಲರೂ ಮದ್ಯಾಪಾನ ಮಾಡಿದ್ದರು.
ನರ್ಸ್ ವೈದ್ಯನ ಗುಪ್ತಾಂಗವನ್ನು ಬ್ಲೇಡ್‌ನಿಂದ ಕತ್ತರಿಸಿ ತಪ್ಪಿಸಿಕೊಂಡರು. ಆಸ್ಪತ್ರೆಯ ಹೊರಗಿರುವ ಮೈದಾನದಲ್ಲಿ ಅಡಗಿ ಕುಳಿತು ಪೊಲೀಸರಿಗೆ ಕರೆ ಮಾಡಿದಳು. ಪೊಲೀಸರು ಆಸ್ಪತ್ರೆಗೆ ಧಾವಿಸಿ, ಮೂವರು ಆರೋಪಿಗಳನ್ನು ಬಂಧಿಸಿದರು. ಸುನೀಲ್ ಕುಮಾರ್ ಗುಪ್ತಾ ಮತ್ತು ಅವಧೇಶ್ ಕುಮಾರ್ ಇನ್ನಿಬ್ಬರು ಆರೋಪಿಗಳು.
ಆಸ್ಪತ್ರೆಯಿಂದ ಮದ್ಯದ ಬಾಟಲಿ, ನರ್ಸ್ ಬಳಸಿದ ಬ್ಲೇಡ್, ರಕ್ತಸಿಕ್ತ ಬಟ್ಟೆ ಮತ್ತು ಮೂರು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಿಹಾರ ಪಾನನಿಷೇಧ ಇರುವ ರಾಜ್ಯವಾಗಿರುವುದರಿಂದ, ಮೂವರ ವಿರುದ್ಧ ಪಾನನಿಷೇಧ ಕಾನೂನುಗಳ ಅಡಿಯಲ್ಲೂ ಆರೋಪ ಹೊರಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರು ನರ್ಸ್ ಧೈರ್ಯ ಮತ್ತು ಸಮಯಪ್ರಜ್ಞೆಯನ್ನು ಶ್ಲಾಘಿಸಿದ್ದಾರೆ.