ಕೋಟಾ ಹೆಚ್ಚಳ: ಹೈಕೋರ್ಟ್ ತೀರ್ಪು ಪ್ರಶ್ನಿಸಿದ ಬಿಹಾರ ಸರ್ಕಾರ
ಹೊಸದಿಲ್ಲಿ, ಜು.2 - ದಲಿತರು, ಬುಡಕಟ್ಟುಗಳು ಮತ್ತು ಹಿಂದುಳಿದವರಿಗೆ ಕೋಟಾ ಹೆಚ್ಚಿಸಲು ನಿತೀಶ್ ಕುಮಾರ್ ಸರ್ಕಾರ ರೂಪಿಸಿದ ಮೀಸಲು ಕಾನೂನು ರದ್ದುಗೊಳಿಸಿದ ಪಾಟ್ನಾ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ, ಬಿಹಾರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
2023 ರ ನವೆಂಬರ್‌ನಲ್ಲಿ ರಾಜ್ಯದ ಉಭಯ ಸದನಗಳು ಸರ್ವಾನುಮತದಿಂದ ಅಂಗೀಕರಿಸಿದ ತಿದ್ದುಪಡಿಗಳು ಸಂವಿಧಾನವನ್ನು ಉಲ್ಲಂಘಿಸುತ್ತವೆ, ಕೆಟ್ಟ ಕಾನೂನು ಮತ್ತು ಸಮಾನತೆಯ ಷರತ್ತಿನ ಉಲ್ಲಂಘನೆ ಎಂದು ಹೈಕೋರ್ಟ್, ಜೂನ್ 20 ರ ತೀರ್ಪಿನಲ್ಲಿ ಹೇಳಿತ್ತು.
ವಕೀಲ ಮನೀಶ್ ಕುಮಾರ್ ಮೂಲಕ ಸುಪ್ರೀಂ ಕೋರ್ಟ್‌ಗೆ ರಾಜ್ಯದ ಮನವಿ ಸಲ್ಲಿಸಿದೆ. ಸರ್ಕಾರ ಕೋಟಾವನ್ನು ಶೇ.50 ರಿಂದ ಶೇ.65ಕ್ಕೆ ಹೆಚ್ಚಿಸಿತ್ತು.
87 ಪುಟಗಳ ವಿವರ ಆದೇಶದಲ್ಲಿ ಇಂದ್ರ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಮೀಸಲು ಶೇ.50 ಮಿತಿಯನ್ನು ಉಲ್ಲಂಘಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ʻಸರ್ಕಾರಿ ಸೇವೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸಮುದಾಯಗಳ ಸಂಖ್ಯಾತ್ಮಕ ಪ್ರಾತಿನಿಧ್ಯಕ್ಕೆ ವಿರುದ್ಧವಾಗಿ ವಿವಿಧ ವರ್ಗಗಳ ಜನಸಂಖ್ಯೆ ಅನುಪಾತದ ಮೇಲೆ ರಾಜ್ಯ ಮೀಸಲು ನಿಗದಿಗೊಳಿಸಿದೆ ಎಂದು ಹೈಕೋರ್ಟ್ ಹೇಳಿತ್ತು.
ತಿದ್ದುಪಡಿಗಳು ಜಾತಿ ಸಮೀಕ್ಷೆಯನ್ನು ಆಧರಿಸಿದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.63 ರಷ್ಟು ಇತರ ಹಿಂದುಳಿದ ವರ್ಗಗಳು (ಒಬಿಸಿ) ಮತ್ತು ಅತ್ಯಂತ ಹಿಂದುಳಿದ ವರ್ಗ(ಇಬಿಸಿ)ಗಳು ಇದ್ದು, ಎಸ್‌ಸಿ-ಎಸ್‌ಟಿ ಸಮುದಾಯ ಶೇ. 21 ಕ್ಕಿಂತ ಹೆಚ್ಚು ಇದೆ ಎಂದು ಸಮೀಕ್ಷೆ ಹೇಳಿತ್ತು.
ಎಸ್‌ಸಿ-ಎಸ್‌ಟಿಗಳನ್ನು ಹೊರತುಪಡಿಸಿ, ಇತರ ಜಾತಿಗಳ ಎಣಿಕೆಯನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಹೇಳಿದ ಬಳಿಕ ಬಿಹಾರ ಸರ್ಕಾರ ಮೀಸಲು ಜಾತಿಗಣತಿ ನಡೆಸಿತು.