
ಬಿಹಾರ ಚುನಾವಣೆ: ಡೀಪ್‌ಫೇಕ್, ಸುಳ್ಳುಸುದ್ದಿಗೆ ಬ್ರೇಕ್ ಹಾಕಲು ಚುನಾವಣಾ ಆಯೋಗದ ಖಡಕ್ ಎಚ್ಚರಿಕೆ
ರಾಜಕೀಯ ಪಕ್ಷಗಳು, ತಾರಾ ಪ್ರಚಾರಕರು ಹಾಗೂ ಅಭ್ಯರ್ಥಿಗಳು ಕೃತಕ ಬುದ್ದಿಮತ್ತೆ(ಎಐ) ಹಾಗೂ ಡಿಜಿಟಲ್ ವೇದಿಕೆಗಳಿಂದ ಸೃಷ್ಠಿಸಿದ ಸಂದೇಶಗಳ ಬಗ್ಗೆ ಪ್ರಮಾಣಪತ್ರ ಸಲ್ಲಿಸಬೇಕು ಎಂದು ತಿಳಿಸಿದೆ.
ಬಿಹಾರ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದ್ದಂತೆ, ಪ್ರಚಾರದಲ್ಲಿ ಕೃತಕ ಬುದ್ಧಿಮತ್ತೆ (AI) ಮತ್ತು ಡೀಪ್‌ಫೇಕ್ ತಂತ್ರಜ್ಞಾನದ ದುರ್ಬಳಕೆಯನ್ನು ತಡೆಯಲು ಕೇಂದ್ರ ಚುನಾವಣಾ ಆಯೋಗವು ಕಠಿಣ ಕ್ರಮಕ್ಕೆ ಮುಂದಾಗಿದೆ. ಸಾಮಾಜಿಕ ಜಾಲತಾಣಗಳು ಮತ್ತು ಡಿಜಿಟಲ್ ವೇದಿಕೆಗಳಲ್ಲಿ ಎಐ-ಆಧಾರಿತ ಸುಳ್ಳುಸುದ್ದಿ, ತಿರುಚಿದ ಮಾಹಿತಿ ಮತ್ತು ದ್ವೇಷಪೂರಿತ ಪ್ರಚಾರಕ್ಕೆ ಕಡಿವಾಣ ಹಾಕಲು ರಾಜಕೀಯ ಪಕ್ಷಗಳಿಗೆ ಖಡಕ್ ಎಚ್ಚರಿಕೆ ನೀಡಿದೆ.
ಚುನಾವಣಾ ಆಯೋಗವು ಗುರುವಾರ ಹೊರಡಿಸಿದ ಹೊಸ ಮಾರ್ಗಸೂಚಿಗಳ ಪ್ರಕಾರ, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತ್ತು ತಾರಾ ಪ್ರಚಾರಕರು ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಲಾದ ಯಾವುದೇ ಪ್ರಚಾರ ಸಾಮಗ್ರಿಗಳನ್ನು (ವೀಡಿಯೊ, ಆಡಿಯೊ, ಚಿತ್ರ) ಬಳಸುವ ಮುನ್ನ "ಕೃತಕ ಬುದ್ಧಿಮತ್ತೆಯಿಂದ ತಯಾರಿಸಿದ ವಿಷಯ" ಎಂದು ಸ್ಪಷ್ಟವಾಗಿ ಲೇಬಲ್ ಮಾಡಬೇಕು. ಅಷ್ಟೇ ಅಲ್ಲ, ಇಂತಹ ವಿಷಯಗಳ ಬಳಕೆಗೆ ಪೂರ್ವಾನುಮತಿಗಾಗಿ ಪ್ರಮಾಣಪತ್ರವನ್ನೂ ಸಲ್ಲಿಸುವುದು ಕಡ್ಡಾಯವಾಗಿದೆ.
"ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯತೆ ಮತ್ತು ಸಮಗ್ರತೆಯನ್ನು ಕಾಪಾಡುವುದು ನಮ್ಮ ಆದ್ಯತೆ. ಎಐ ಆಧಾರಿತ ತಂತ್ರಜ್ಞಾನಗಳನ್ನು ಬಳಸಿ ಮತದಾರರನ್ನು ದಾರಿ ತಪ್ಪಿಸುವ, ತಪ್ಪು ಮಾಹಿತಿ ಹರಡುವ ಅಥವಾ ಚುನಾವಣಾ ವಾತಾವರಣವನ್ನು ಕಲುಷಿತಗೊಳಿಸುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ. ಸಾಮಾಜಿಕ ಮಾಧ್ಯಮಗಳ ಮೇಲೆ ಹದ್ದಿನ ಕಣ್ಣಿಡಲಾಗುವುದು" ಎಂದು ಆಯೋಗವು ಎಚ್ಚರಿಸಿದೆ.
ಪ್ರಚಾರದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು, ಎಐ-ನಿರ್ಮಿತ ವಿಷಯಗಳ ಜೊತೆಗೆ ಕಡ್ಡಾಯವಾಗಿ ಹಕ್ಕು ನಿರಾಕರಣೆ (disclaimer) ಪ್ರಕಟಿಸಬೇಕೆಂದು ಆಯೋಗವು ಸೂಚಿಸಿದೆ. ಬಿಹಾರದಲ್ಲಿ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗದ ಈ ದಿಟ್ಟ ಕ್ರಮವು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ಖಚಿತಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.