ವಿಮಾನ ಪ್ರಯಾಣಿಕರಿಗೆ ಬಿಗ್ ಶಾಕ್: ಟಿಕೆಟ್ ದರ 22 ಪಟ್ಟು ಹೆಚ್ಚಳ ಸಾಧ್ಯತೆ?
x

ವಿಮಾನ ಪ್ರಯಾಣಿಕರಿಗೆ ಬಿಗ್ ಶಾಕ್: ಟಿಕೆಟ್ ದರ 22 ಪಟ್ಟು ಹೆಚ್ಚಳ ಸಾಧ್ಯತೆ?

ವರದಿಗಳ ಪ್ರಕಾರ, ದೆಹಲಿ ವಿಮಾನ ನಿಲ್ದಾಣದಲ್ಲಿ ದೇಶೀಯ ಪ್ರಯಾಣಿಕರಿಗೆ ಪ್ರಸ್ತುತ ಇರುವ 129 ರೂಪಾಯಿ ಬಳಕೆದಾರರ ಅಭಿವೃದ್ಧಿ ಶುಲ್ಕವು 1,261 ರೂಪಾಯಿಗೆ ಏರಿಕೆಯಾಗುವ ಸಾಧ್ಯತೆಯಿದೆ.


Click the Play button to hear this message in audio format

ವಿಮಾನ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲು ವಿಮಾನ ನಿಲ್ದಾಣ ಪ್ರಾಧಿಕಾರಗಳು ಸಜ್ಜಾಗಿವೆ. ದೆಹಲಿ ಮತ್ತು ಮುಂಬೈ ವಿಮಾನ ನಿಲ್ದಾಣಗಳಿಂದ ಪ್ರಯಾಣಿಸುವವರ 'ಬಳಕೆದಾರರ ಅಭಿವೃದ್ಧಿ ಶುಲ್ಕ' (UDF) ಬರೋಬ್ಬರಿ 22 ಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ. ಟೆಲಿಕಾಂ ಮತ್ತು ವಿಮಾನ ನಿಲ್ದಾಣ ನಿಯಂತ್ರಣ ಪ್ರಾಧಿಕಾರದ (TDSAT) ಇತ್ತೀಚಿನ ಆದೇಶವೇ ಈ ದಿಢೀರ್ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಸೋಮವಾರದ ಮಾಧ್ಯಮ ವರದಿಗಳು ತಿಳಿಸಿವೆ.

ಟಿಡಿಎಸ್‌ಎಟಿ (TDSAT) ಆದೇಶದ ಪ್ರಕಾರ, 2009 ರಿಂದ 2014ರ ಅವಧಿಯಲ್ಲಿನ ವಿಮಾನ ನಿಲ್ದಾಣ ಸುಂಕದ ಲೆಕ್ಕಾಚಾರವನ್ನು ಬದಲಿಸಲಾಗಿದೆ. ಇದರಿಂದಾಗಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಸುಮಾರು 50,000 ಕೋಟಿ ರೂಪಾಯಿಗೂ ಹೆಚ್ಚು ಬಾಕಿ ಉಳಿಸಿಕೊಂಡಿವೆ. ಈ ಭಾರಿ ಮೊತ್ತವನ್ನು ಪ್ರಯಾಣಿಕರ ಶುಲ್ಕ, ಲ್ಯಾಂಡಿಂಗ್ ಮತ್ತು ಪಾರ್ಕಿಂಗ್ ಶುಲ್ಕಗಳ ಮೂಲಕ ವಸೂಲಿ ಮಾಡಲು ಉದ್ದೇಶಿಸಲಾಗಿದೆ.

ಎಷ್ಟು ಏರಿಕೆ?

ವರದಿಗಳ ಪ್ರಕಾರ, ದೆಹಲಿ ವಿಮಾನ ನಿಲ್ದಾಣದಲ್ಲಿ ದೇಶೀಯ ಪ್ರಯಾಣಿಕರಿಗೆ ಪ್ರಸ್ತುತ ಇರುವ 129 ರೂಪಾಯಿ ಬಳಕೆದಾರರ ಅಭಿವೃದ್ಧಿ ಶುಲ್ಕವು 1,261 ರೂಪಾಯಿಗೆ ಏರಿಕೆಯಾಗುವ ಸಾಧ್ಯತೆಯಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ 650 ರೂಪಾಯಿ ಇದ್ದ ಶುಲ್ಕ ಬರೋಬ್ಬರಿ 6,356 ರೂಪಾಯಿಗೆ ಹೆಚ್ಚಳವಾಗಬಹುದು. ಇನ್ನು ಮುಂಬೈ ವಿಮಾನ ನಿಲ್ದಾಣದ ಕಥೆಯೂ ಭಿನ್ನವಾಗಿಲ್ಲ. ಇಲ್ಲಿ ದೇಶೀಯ ಪ್ರಯಾಣಿಕರು 175 ರೂಪಾಯಿ ಬದಲು 3,856 ರೂಪಾಯಿ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರು 615 ರೂಪಾಯಿ ಬದಲು 13,495 ರೂಪಾಯಿ ತೆರಬೇಕಾಗುವ ಭೀತಿ ಎದುರಾಗಿದೆ.

ಈ ಆದೇಶವನ್ನು ಪ್ರಶ್ನಿಸಿ ಭಾರತೀಯ ವಿಮಾನ ನಿಲ್ದಾಣ ಆರ್ಥಿಕ ನಿಯಂತ್ರಣ ಪ್ರಾಧಿಕಾರ (AERA) ಹಾಗೂ ದೇಶೀಯ ಮತ್ತು ವಿದೇಶಿ ವಿಮಾನಯಾನ ಸಂಸ್ಥೆಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿವೆ. ವಿಮಾನ ನಿಲ್ದಾಣಗಳು ಮತ್ತು ಏರ್‌ಲೈನ್ಸ್ ನಡುವಿನ ಈ ಕಾನೂನು ಹೋರಾಟದಲ್ಲಿ ಅಂತಿಮವಾಗಿ ಪ್ರಯಾಣಿಕರು ಬಲಿಪಶುಗಳಾಗಬಾರದು ಎಂಬ ಆತಂಕವನ್ನು ಸರ್ಕಾರಿ ಅಧಿಕಾರಿಯೊಬ್ಬರು ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಈ ದರ ಏರಿಕೆ ಜಾರಿಯಾದರೆ, ವಿಮಾನಯಾನ ದರಗಳಲ್ಲಿ ರಾತ್ರೋರಾತ್ರಿ ಭಾರಿ ಏರಿಕೆ ಕಂಡುಬರುವ ಸಾಧ್ಯತೆಯಿದೆ.

Read More
Next Story