ಚುನಾವಣೆ  ದೃಷ್ಟಿಯಿಂದ ಬಲವಂತದ ಕ್ರಮವಿಲ್ಲ: ಐಟಿ ಇಲಾಖೆ
x

ಚುನಾವಣೆ ದೃಷ್ಟಿಯಿಂದ ಬಲವಂತದ ಕ್ರಮವಿಲ್ಲ: ಐಟಿ ಇಲಾಖೆ

ನಿಟ್ಟುಸಿರು ಬಿಟ್ಟ ಕಾಂಗ್ರೆಸ್


ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆಯು ಸುಪ್ರೀಂ ಕೋರ್ಟ್‌ ಗೆ ಸೋಮವಾರ ಹೇಳಿದೆ.

3,500 ಕೋಟಿ ರೂ. ತೆರಿಗೆ ಬೇಡಿಕೆ ನೋಟಿಸ್ ವಿರುದ್ಧ ಕಾಂಗ್ರೆಸ್ ಸಲ್ಲಿಸಿದ ಮನವಿಗೆ ಪ್ರತಿಕ್ರಿಯಿಸಿದ ಆದಾಯ ತೆರಿಗೆ ಇಲಾಖೆ, ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದೆ.‌ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠ, ಐಟಿ ಇಲಾಖೆಯನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿತು. ಪೀಠವು ವಿಚಾರಣೆಯನ್ನು ಜುಲೈ ತಿಂಗಳಿಗೆ ಮುಂದೂಡಿತು.

ಬಲವಂತದ ಕ್ರಮವಿಲ್ಲ: ತುಷಾರ್‌ ಮೆಹ್ತಾ,ʻ ಕಾಂಗ್ರೆಸ್ ಒಂದು ರಾಜಕೀಯ ಪಕ್ಷ; ಚುನಾವಣೆ ನಡೆಯುತ್ತಿರುವುದರಿಂದ, ಪಕ್ಷದ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳುವುದಿಲ್ಲ. ಇಲಾಖೆಯು ವಿಷಯದ ಅರ್ಹತೆ ಬಗ್ಗೆ ಪ್ರತಿಕ್ರಿಯಿಸುತ್ತಿಲ್ಲ. ಎಲ್ಲ ಹಕ್ಕುಗಳು ಮತ್ತು ತಕರಾರುಗಳನ್ನು ಮುಕ್ತವಾಗಿ ಬಿಡಬೇಕುʼ ಎಂದು ಹೇಳಿದರು.

ʻಅವರಿಗೆ 2024 ರಲ್ಲಿ ಶೇ. 20 ರಷ್ಟು ತೆರಿಗೆ ಪಾವತಿಸುವ ಆಯ್ಕೆಯನ್ನು ನೀಡಲಾಯಿತು. 135 ಕೋಟಿ ರೂ. ಸಂಗ್ರಹಿಸಲಾಯಿತು. ಆನಂತರ 1,700 ಕೋಟಿ ರೂ.ಗೆ ಬೇಡಿಕೆಯನ್ನು ಹೆಚ್ಚಿಸಲಾಯಿತು. ಆದ್ದರಿಂದ, ವಿಷಯ 1,700 ಕೋಟಿ ರೂ.ಗೆ ಸಂಬಂಧಿಸಿದೆ. ಈ ವಿಷಯವನ್ನು ಚುನಾವಣೆ ನಂತರ ಸರಿಪಡಿಸಬಹುದು. ಅಲ್ಲಿಯವರೆಗೆ ನಾವು ಯಾವುದೇ ಕ್ರಮ ಕೈಗೊಳ್ಳುವುದಿಲ್ಲʼ ಎಂದು ಸಾಲಿಸಿಟರ್ ಜನರಲ್ ಭರವಸೆ ನೀಡಿದರು. ಕಾಂಗ್ರೆಸ್ ಪರ ವಕೀಲ ಅಭಿಷೇಕ್ ಸಿಂಘ್ವಿ, ಸರ್ಕಾರದ ನಿಲುವನ್ನು ಶ್ಲಾಘಿಸಿದರು. ಮಾರ್ಚ್‌ನಲ್ಲಿ ಮತ್ತು ಆನಂತರ ಸುಮಾರು 3,500 ಕೋಟಿ ರೂ. ಬೇಡಿಕೆ ಎತ್ತಲಾಗಿದೆ ಎಂದರು.

ಈ ಸಂಬಂಧ 1,745 ಕೋಟಿ ರೂ. ತೆರಿಗೆ ಬೇಡಿಕೆಗೆ ಹೊಸ ನೋಟಿಸ್‌ ಸ್ವೀಕರಿಸಲಾಗಿದೆ ಎಂದು ಕಾಂಗ್ರೆಸ್ ಭಾನುವಾರ (ಏಪ್ರಿಲ್ 1) ಹೇಳಿದೆ. ಇದರಿಂದ ಒಟ್ಟು ಬೇಡಿಕೆ 3,567 ಕೋಟಿ ರೂ.ಆಗಲಿದೆ.

'ತೆರಿಗೆ ಭಯೋತ್ಪಾದನೆ': ಕಾಂಗ್ರೆಸ್‌ ಮಾರ್ಚ್ 29ರಂದು 1,823 ಕೋಟಿ ರೂ. ಪಾವತಿಸುವಂತೆ ಐಟಿ ಇಲಾಖೆಯಿಂದ ನೋಟಿಸ್‌ ಸ್ವೀಕರಿಸಿದೆ. ಹಿಂದಿನ ವರ್ಷಗಳ ತೆರಿಗೆ ಬೇಡಿಕೆಗೆ ಅಧಿಕಾರಿಗಳು ಪಕ್ಷದ ಖಾತೆಗಳಿಂದ 135 ಕೋಟಿ ರೂ.ಹಿಂಪಡೆದಿದ್ದಾರೆ. 3,567 ಕೋಟಿ ರೂ. ಆದಾಯ ತೆರಿಗೆ ಬೇಡಿಕೆ ʻತೆರಿಗೆ ಭಯೋತ್ಪಾದನೆʼ. ಬಿಜೆಪಿ ಪಕ್ಷವನ್ನು ಆರ್ಥಿಕವಾಗಿ ಉಸಿರುಗಟ್ಟಿಸುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

Read More
Next Story