
ತಮಿಳುನಾಡು ರಾಜ್ಯಪಾಲ ರವಿ
Tamil Nadu vs Governor: ತಮಿಳುನಾಡು ರಾಜ್ಯಪಾಲರಿಗೆ ಮುಖಭಂಗ: ವಿಧೇಯಕಗಳನ್ನು ಉಳಿಸಿಕೊಂಡಿದ್ದಕ್ಕೆ ತರಾಟೆ
ರಾಜ್ಯಪಾಲ ರವಿ ಅವರು ಸದ್ಭಾವನೆಯಿಂದ ವರ್ತಿಸಿಲ್ಲ. ರಾಜ್ಯ ವಿಧಾನಸಭೆಯಲ್ಲಿ ಮತ್ತೊಂದು ಬಾರಿ ಅಂಗೀಕಾರಗೊಂಡು ವಿಧೇಯಕಗಳು ಮರು ಸಲ್ಲಿಕೆಯಾದಾಗಲೇ ಅವರು ಅದಕ್ಕೆ ಅಂಕಿತ ಹಾಕಬೇಕಿತ್ತು ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಸರ್ಕಾರದ ಜತೆ ಸಮರಕ್ಕೆ ಇಳಿದಿದ್ದ ತಮಿಳುನಾಡಿನ ರಾಜ್ಯಪಾಲರಿಗೆ ತೀವ್ರ ಮುಖಭಂಗ ಉಂಟಾಗಿದೆ. 10 ಪ್ರಮುಖ ಮಸೂದೆಗಳಿಗೆ ಒಪ್ಪಿಗೆ ನೀಡದೇ ಸತಾಯಿಸಿದ ರಾಜ್ಯಪಾಲ ಆರ್.ಎನ್.ರವಿ ಅವರ ನಿರ್ಧಾರವು "ಕಾನೂನುಬಾಹಿರ" ಮತ್ತು "ನಿರಂಕುಶ" ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯವ್ಯಕ್ತಪಡಿಸಿದೆ. ಇದರೊಂದಿಗೆ ರಾಜ್ಯಪಾಲರ ವಿರುದ್ಧ ಕಾನೂನು ಹೋರಾಟ ಆರಂಭಿಸಿದ್ದ ಸಿಎಂ ಎಂ.ಕೆ. ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರಕ್ಕೆ ಗೆಲುವು ಸಿಕ್ಕಂತಾಗಿದೆ.
"ಹತ್ತು ಮಸೂದೆಗಳಿಗೆ ಅಂಕಿತ ಹಾಕದೇ ಅದನ್ನು ರಾಷ್ಟ್ರಪತಿಗಳ ಒಪ್ಪಿಗೆಗೆ ಕಾಯ್ದಿರಿಸಿದ ರಾಜ್ಯಪಾಲರ ಕ್ರಮವು ಕಾನೂನುಬಾಹಿರ ಮತ್ತು ನಿರಂಕುಶ. ಹೀಗಾಗಿ, ಈ ಮಸೂದೆಗಳಿಗೆ ಸಂಬಂಧಿಸಿ ರಾಜ್ಯಪಾಲರು ಕೈಗೊಂಡಿರುವ ಎಲ್ಲ ಕ್ರಮಗಳನ್ನೂ ವಜಾ ಮಾಡಲಾಗಿದೆ. ಈ ಮಸೂದೆಗಳನ್ನು ರಾಜ್ಯಪಾಲರಿಗೆ ಯಾವಾಗ ಮರು ಸಲ್ಲಿಸಲಾಯಿತೋ, ಅದೇ ದಿನಾಂಕದಂದೇ ಅವುಗಳಿಗೆ ಅಂಗೀಕಾರ ದೊರೆತಿವೆ ಎಂದು ಪರಿಗಣಿಸಲಾಗುತ್ತದೆ" ಎಂದು ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್.ಮಹಾದೇವನ್ ಅವರಿದ್ದ ನ್ಯಾಯಪೀಠ ಹೇಳಿದೆ.
ಜೊತೆಗೆ, ರಾಜ್ಯಪಾಲ ರವಿ ಅವರು ಸದ್ಭಾವನೆಯಿಂದ ವರ್ತಿಸಿಲ್ಲ. ರಾಜ್ಯ ವಿಧಾನಸಭೆಯಲ್ಲಿ ಮತ್ತೊಂದು ಬಾರಿ ಅಂಗೀಕಾರಗೊಂಡು ವಿಧೇಯಕಗಳು ಮರು ಸಲ್ಲಿಕೆಯಾದಾಗಲೇ ಅವರು ಅದಕ್ಕೆ ಅಂಕಿತ ಹಾಕಬೇಕಿತ್ತು ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಸಂವಿಧಾನದ ಅನುಚ್ಛೇದ 200 ರಾಜ್ಯ ಸದನವು ಅಂಗೀಕರಿಸಿದ ಮಸೂದೆಯನ್ನು ರಾಜ್ಯಪಾಲರ ಮುಂದೆ ಮಂಡಿಸಿದಾಗ ಅವರ ಮುಂದೆ ಇರುವ ಆಯ್ಕೆಗಳೇನು ಎಂಬುದನ್ನು ತಿಳಿಸುತ್ತದೆ. ಒಂದೋ ರಾಜ್ಯಪಾಲರು ಆ ಮಸೂದೆಗೆ ಒಪ್ಪಿಗೆ ನೀಡಬೇಕು ಅಥವಾ ಒಪ್ಪಿಗೆಯನ್ನು ತಡೆಹಿಡಿಯಬೇಕು ಅಥವಾ ಮಸೂದೆಯನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿರಿಸಬಹುದು. ಮಸೂದೆಯಲ್ಲಿನ ಕೆಲವು ನಿಬಂಧನೆಗಳ ಮರುಪರಿಶೀಲನೆಗಾಗಿ ರಾಜ್ಯಪಾಲರು ಮಸೂದೆಯನ್ನು ಸದನಕ್ಕೆ ವಾಪಸ್ ಕಳುಹಿಸಬಹುದು. ಸದನವು ಅದನ್ನು ಮತ್ತೆ ಅಂಗೀಕರಿಸಿ, ರಾಜ್ಯಪಾಲರಿಗೆ ಸಲ್ಲಿಸಿದರೆ ಆಗ ರಾಜ್ಯಪಾಲರು ತಮ್ಮ ಅಂಕಿತವನ್ನು ಹಾಕಲೇಬೇಕು. ಅದನ್ನು ಅವರು ಆಗ ತಡೆಹಿಡಿಯುವಂತಿಲ್ಲ ಎಂದು ಸಂವಿಧಾನದ ಈ ಅನುಚ್ಛೇದದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಮಸೂದೆಯು ಸಂವಿಧಾನಕ್ಕೆ ವಿರುದ್ಧವಾಗಿದೆ ಅಥವಾ ಸರ್ಕಾರದ ನೀತಿ ನಿರ್ದೇಶಕ ತತ್ವಗಳಿಗೆ ವಿರುದ್ಧವಾಗಿದೆ ಅಥವಾ ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯವಾಗಿದೆ ಎಂದು ರಾಜ್ಯಪಾಲರು ಭಾವಿಸಿದರೆ ಮಾತ್ರವೇ ಅವರು ಅದನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿರಿಸಬಹುದು ಎಂದು ಸಂವಿಧಾನ ಹೇಳುತ್ತದೆ.
ಕ್ರಮದ ಎಚ್ಚರಿಕೆ
ಈ ಆಯ್ಕೆಗಳನ್ನು ಚಲಾಯಿಸಲು ನ್ಯಾಯಾಲಯವು ನಿರ್ದಿಷ್ಟ ಕಾಲಮಿತಿಯನ್ನು ವಿಧಿಸಿವೆ. ಈ ಕಾಲಮಿತಿ ತಪ್ಪಿದರೆ ರಾಜ್ಯಪಾಲರ ಕ್ರಮದ ಮೇಲೆ ನ್ಯಾಯಾಂಗದ ಪರಿಶೀಲನೆ ನಡೆಸಬೇಕಾಗುತ್ತದೆ. ಮಸೂದೆಗೆ ಅಂಕಿತವನ್ನು ತಡೆಹಿಡಿಯಲು ಮತ್ತು ಸಚಿವ ಸಂಪುಟದ ನೆರವು ಮತ್ತು ಸಲಹೆಯೊಂದಿಗೆ ಅದನ್ನು ರಾಷ್ಟ್ರಪತಿಗಳ ಪರಿಶೀಲನೆಗೆ ಕಾಯ್ದಿರಿಸಲು ನ್ಯಾಯಾಲಯವು ರಾಜ್ಯಪಾಲರಿಗೆ ಒಂದು ತಿಂಗಳ ಗಡುವನ್ನು ನಿಗದಿಪಡಿಸಿದೆ. ಸಚಿವ ಸಂಪುಟದ ಸಹಾಯ ಮತ್ತು ಸಲಹೆಯಿಲ್ಲದೆ ಮಸೂದೆಯನ್ನು ಕಾಯ್ದಿರಿಸಿದಾಗ, ಈ ಗಡುವು ಮೂರು ತಿಂಗಳುಗಳಾಗಿರುತ್ತದೆ. ರಾಜ್ಯ ವಿಧಾನಸಭೆಯ ಮರುಪರಿಶೀಲನೆಯ ನಂತರ ಮಸೂದೆಯನ್ನು ರಾಜ್ಯಪಾಲರಿಗೆ ಸಲ್ಲಿಸಿದರೆ, ಅವರು ಅದನ್ನು ಒಂದು ತಿಂಗಳೊಳಗೆ ತೆರವುಗೊಳಿಸಬೇಕು. ಆರ್ಟಿಕಲ್ 200 ರ ಅಡಿಯಲ್ಲಿ ರಾಜ್ಯಪಾಲರ ಯಾವುದೇ ಕಾರ್ಯವು ನ್ಯಾಯಾಂಗ ಪರಿಶೀಲನೆಗೆ ಅರ್ಹವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಯಾವುದೇ ರೀತಿಯಲ್ಲಿ ರಾಜ್ಯಪಾಲರ ಅಧಿಕಾರವನ್ನು ದುರ್ಬಲಗೊಳಿಸುವ ನಿರ್ಧಾರ ಇದಲ್ಲ ಎಂದೂ ನ್ಯಾಯಾಲಯ ಇದೇ ವೇಳೆ ಸ್ಪಷ್ಟಪಡಿಸಿದೆ. "ರಾಜ್ಯಪಾಲರ ಎಲ್ಲಾ ಕ್ರಮಗಳು ಸಂಸದೀಯ ಪ್ರಜಾಪ್ರಭುತ್ವದ ತತ್ವಕ್ಕೆ ಅನುಗುಣವಾಗಿರಬೇಕು" ಎಂದು ಹೇಳಿದೆ. ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದ ತಮಿಳುನಾಡು ಸರ್ಕಾರ ನಿಟ್ಟುಸಿರು ಬಿಡುವಂತಾಗಿದೆ.