Naxal Encounter: ಛತ್ತೀಸ್‌ಗಢದಲ್ಲಿ ಮತ್ತೊಂದು ಎನ್‌ಕೌಂಟರ್: 14 ನಕ್ಸಲರ ಹತ್ಯೆ
x
ಸಾಂದರ್ಭಿಕ ಚಿತ್ರ.

Naxal Encounter: ಛತ್ತೀಸ್‌ಗಢದಲ್ಲಿ ಮತ್ತೊಂದು ಎನ್‌ಕೌಂಟರ್: 14 ನಕ್ಸಲರ ಹತ್ಯೆ

Naxal Encounter: ಒಡಿಶಾದ ನುವಾಪದಾ ಜಿಲ್ಲೆಯ ಗಡಿಯಿಂದ ಕೇವಲ 5 ಕಿ.ಮೀ. ದೂರದಲ್ಲಿರುವ ಕುಲಾರಿಘಾಟ್ ಮೀಸಲು ಅರಣ್ಯದಲ್ಲಿ ನಕ್ಸಲರು ಇರುವ ಬಗ್ಗೆ ಗುಪ್ತಚರ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ನಡೆದಿದೆ.


ನವದೆಹಲಿ: ಛತ್ತೀಸ್‌ಗಢದಲ್ಲಿ ಸೋಮವಾರ ತಡರಾತ್ರಿ ನಡೆದ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ 14 ಮಂದಿ ಮಾವೋವಾದಿಗಳನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಹತಗ ನಕ್ಸಲರ ಪೈಕಿ 1 ಕೋಟಿ ರೂ.ಗಳ ಬಹುಮಾನ ಹೊತ್ತಿದ್ದ ಮಾವೋವಾದಿ ಕೇಂದ್ರ ಕಮಿಟಿ ಸದಸ್ಯ ಜಯರಾಮ್ ಅಲಿಯಾಸ್ ಛಲಪತಿಯೂ ಸೇರಿದ್ದಾನೆ.

ಛತ್ತೀಸ್‌ಗಢ-ಒಡಿಶಾ ಗಡಿಯಲ್ಲಿ ಬರುವ ಗರಿಯಾಬಂದ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಈ ಎನ್‌ಕೌಂಟರ್ ನಡೆದಿದೆ. ಜಿಲ್ಲಾ ಮೀಸಲು ಪಡೆ(ಡಿಆರ್‌ಜಿ), ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್), ಛತ್ತೀಸ್‌ಗಢದ ಕೋಬ್ರಾ ಮತ್ತು ಒಡಿಶಾದ ವಿಶೇಷ ಕಾರ್ಯಾಚರಣಾ ಪಡೆಗಳು ಜಂಟಿ ಆಪರೇಷನ್‌ ಇದಾಗಿದೆ. ಸೋಮವಾರ ತಡರಾತ್ರಿ ಆರಂಭವಾದ ಗುಂಡಿನ ಚಕಮಕಿ ಮಂಗಳವಾರ ಮುಂಜಾನೆಯವರೆಗೂ ನಡೆಯಿತು.

ಒಡಿಶಾದ ನುವಾಪದಾ ಜಿಲ್ಲೆಯ ಗಡಿಯಿಂದ ಕೇವಲ 5 ಕಿ.ಮೀ. ದೂರದಲ್ಲಿರುವ ಕುಲಾರಿಘಾಟ್ ಮೀಸಲು ಅರಣ್ಯದಲ್ಲಿ ನಕ್ಸಲರು ಇರುವ ಬಗ್ಗೆ ಗುಪ್ತಚರ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ನಡೆದಿದೆ. ಕೊನೆಗೆ ಜಯರಾಮ್ ಸೇರಿದಂತೆ 14 ಮಂದಿ ನಕ್ಸಲರನ್ನು ಹತ್ಯೆಗೈಯ್ಯಲಾಗಿದೆ.

ಹತ ನಕ್ಸಲರ ಬಳಿಯಿದ್ದ ಸೆಲ್ಫ್-ಲೋಡಿಂಗ್ ರೈಫಲ್, ಸುಧಾರಿತ ಸ್ಫೋಟಕಗಳು ಸೇರಿದಂತೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎನ್ ಕೌಂಟರ್ ಸ್ಥಳದಲ್ಲಿ ಶೋಧ ಕಾರ್ಯ ಮುಂದುವರಿದಿದೆ.

ಕಳೆದ ವರ್ಷ 200 ನಕ್ಸಲರ ಹತ್ಯೆ

ಕಳೆದ ವರ್ಷ ಅಂದರೆ 2024ರಲ್ಲಿ ಭದ್ರತಾ ಪಡೆಗಳು ಛತ್ತೀಸ್‌ಗಢವೊಂದರಲ್ಲೇ 200ಕ್ಕೂ ಅಧಿಕ ನಕ್ಸಲರನ್ನು ಹತ್ಯೆಗೈದಿವೆ. ಒಟ್ಟು 219 ನಕ್ಸಲರು ಹತರಾಗಿದ್ದು, ಈ ಪೈಕಿ ಬಸ್ತಾರ್ ಪ್ರದೇಶವೊಂದರಲ್ಲೇ 217 ಮಂದಿಯನ್ನು ಕೊಲ್ಲಲಾಗಿದೆ. ಇದರ ಜೊತೆಗೆ, 800 ಮಾವೋವಾದಿಗಳನ್ನು ಬಂಧಿಸಲಾಗಿದೆ. ಸುಮಾರು 802 ಮಂದಿ ಶಸ್ತ್ರತ್ಯಾಗ ಮಾಡಿ ಶರಣಾಗಿದ್ದಾರೆ. ನಕ್ಸಲ್ ನಿಗ್ರಹ ಕಾರ್ಯಾಚರಣೆ ವೇಳೆ 18 ಮಂದಿ ಭದ್ರತಾ ಪಡೆ ಸಿಬ್ಬಂದಿ ಹುತಾತ್ಮರಾಗಿದ್ದು, 65 ನಾಗರಿಕರು ಕೂಡ ಮೃತಪಟ್ಟಿದ್ದಾರೆ.

Read More
Next Story