ಹೊಸ ಕಾರ್ಮಿಕ ಸಂಹಿತೆ, ಖಾಸಗೀಕರಣ ವಿರೋಧಿಸಿ ದೇಶವ್ಯಾಪಿ ಇಂದು ಬೃಹತ್ ಮುಷ್ಕರ
x

ಜೆಹಾನಾಬಾದ್ ರೈಲು ನಿಲ್ದಾಣದಲ್ಲಿ ಆರ್‌ಜೆಡಿಯ ವಿದ್ಯಾರ್ಥಿ ವಿಭಾಗದ ಸದಸ್ಯರು ರೈಲು ಹಳಿಗಳನ್ನು ತಡೆದು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.

ಹೊಸ ಕಾರ್ಮಿಕ ಸಂಹಿತೆ, ಖಾಸಗೀಕರಣ ವಿರೋಧಿಸಿ ದೇಶವ್ಯಾಪಿ ಇಂದು ಬೃಹತ್ ಮುಷ್ಕರ

ಬುಧವಾರ ಬೆಳಗಿನ ಜಾವದಿಂದಲೇ ದೇಶದ ಹಲವು ಪ್ರಮುಖ ನಗರಗಳಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಕಂಡುಬಂದಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಭದ್ರತೆಯನ್ನು ಹೆಚ್ಚಿಸಲಾಗಿದೆ.


ಹೊಸ ಕಾರ್ಮಿಕ ನೀತಿ ಮತ್ತು ಸರ್ಕಾರದ ಖಾಸಗೀಕರಣ ಧೋರಣೆ ವಿರೋಧಿಸಿ, ದೇಶದಾದ್ಯಂತ 25 ಕೋಟಿಗೂ ಹೆಚ್ಚು ಕಾರ್ಮಿಕರು ಮತ್ತು 10 ಕೇಂದ್ರ ವಲಯದ ಕಾರ್ಮಿಕ ಸಂಘಟನೆಗಳ ನೇತರತ್ವದಲ್ಲಿ ಇಂದು (ಬುಧವಾರ, ಜುಲೈ 9) ಬೃಹತ್ ಮುಷ್ಕರಕ್ಕೆ ಕರೆ ನೀಡಲಾಗಿದೆ.

ಕನಿಷ್ಠ 26,000 ರೂ.ವೇತನ ಮತ್ತು ಹಳೆಯ ಪಿಂಚಣಿ ಯೋಜನೆಯ ಮರುಸ್ಥಾಪನೆಯಂತಹ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಈ ಮುಷ್ಕರ ನಡೆಯುತ್ತಿದೆ.

ಬುಧವಾರ ಬೆಳಗಿನ ಜಾವದಿಂದಲೇ ದೇಶದ ಹಲವು ಪ್ರಮುಖ ನಗರಗಳಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಕಂಡುಬಂದಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಭದ್ರತೆ ಹೆಚ್ಚಿಸಲಾಗಿದೆ. ಪಶ್ಚಿಮ ಬಂಗಾಳ ಮತ್ತು ಬಿಹಾರ ರಾಜ್ಯಗಳಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆಗಳು ನಡೆದ ಬಗ್ಗೆ ವರದಿಯಾಗಿದೆ.

ಕಾರ್ಮಿಕರು ಬೀದಿಗಿಳಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ಮುಷ್ಕರಕ್ಕೆ ಕರೆ ನೀಡಿದವರು ಯಾರು?

ಮುಷ್ಕರಕ್ಕೆ ಕರೆ ನೀಡಿದ 10 ಪ್ರಮುಖ ಕಾರ್ಮಿಕ ಸಂಘಟನೆಗಳು - INTUC, AITUC, CITU, HMS, SEWA, AIUTUC, AICCTU, LPF, UTUC, ಮತ್ತು TUCC.

ಕಾರ್ಮಿಕ ಸಂಘಟನೆಗಳು ಏಕೆ ಪ್ರತಿಭಟಿಸುತ್ತಿವೆ?

ಹೊಸ ಕಾರ್ಮಿಕ ಸಂಹಿತೆಯು ಕಾರ್ಮಿಕರ ಹಕ್ಕುಗಳನ್ನು ದುರ್ಬಲಗೊಳಿಸುತ್ತವೆ. ಕೆಲಸದ ಸಮಯ ಹೆಚ್ಚಿಸುತ್ತವೆ ಮತ್ತು ಸಂಘಟನೆಗಳನ್ನು ನಿಷ್ಪ್ರಯೋಜಕವಾಗಿಸುತ್ತವೆ ಎಂದು ಆರೋಪಿಸಿ ಕಾರ್ಮಿಕ ಸಂಘಟನೆಗಳು ಪ್ರತಿಭಟಿಸುತ್ತಿವೆ. ಕಾರ್ಮಿಕ ಸಂಘಗಳು ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸುವಂತೆ ಬೇಡಿಕೆ ಇಟ್ಟಿರುವುದರ ಜೊತೆಗೆ, ಗುತ್ತಿಗೆ ಪದ್ಧತಿ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ ನಡೆಸುತ್ತಿವೆ.

17 ಅಂಶಗಳ ಬೇಡಿಕೆಗಳೇನು?

ಭಾರತದ ಪ್ರಮುಖ 10 ಟ್ರೇಡ್ ಯೂನಿಯನ್‌ಗಳ ವೇದಿಕೆಯು ಸರ್ಕಾರಕ್ಕೆ 17 ಅಂಶಗಳ ಬೇಡಿಕೆಗಳನ್ನು ಇಟ್ಟಿದ್ದು, ನಿಶ್ಚಿತಾವಧಿ ಉದ್ಯೋಗವನ್ನು ಹಿಂತೆಗೆದುಕೊಳ್ಳುವುದು, ವಿವಾದಾತ್ಮಕ ಅಗ್ನಿಪಥ್ ಯೋಜನೆಯನ್ನು ರದ್ದುಗೊಳಿಸುವುದು, ಎಂಟು ಗಂಟೆಗಳ ಕೆಲಸದ ಅವಧಿ, ಹಳೆಯ ಪಿಂಚಣಿ ಯೋಜನೆಯ ಮರುಪ್ರಾರಂಭ (ಕೊಡುಗೆ ರಹಿತ) ಮತ್ತು EPFO ​​ಚಂದಾದಾರರಿಗೆ ಕನಿಷ್ಠ 9,000 ರೂ. ಪಿಂಚಣಿ ಸೇರಿದಂತೆ ಹಲವು ಮಹತ್ವದ ಬೇಡಿಕೆಗಳನ್ನು ಮುಂದಿಟ್ಟಿದೆ.

ಆರ್ಥಿಕ ನೀತಿಗಳು, ನಿರುದ್ಯೋಗ, ಅಗತ್ಯ ವಸ್ತುಗಳ ಬೆಲೆ ಏರಿಕೆ, ವೇತನದಲ್ಲಿ ಕುಸಿತ, ಶಿಕ್ಷಣ, ಆರೋಗ್ಯ, ಮೂಲಭೂತ ನಾಗರಿಕ ಸೌಲಭ್ಯಗಳಲ್ಲಿ ಸಾಮಾಜಿಕ ವಲಯದ ವೆಚ್ಚ ಕಡಿತಕ್ಕೆ ಕಾರಣವಾಗುತ್ತಿವೆ ಎಂದು ವೇದಿಕೆ ಆರೋಪಿಸಿದೆ. ಇವೆಲ್ಲವೂ ಬಡವರು, ಕಡಿಮೆ ಆದಾಯದ ಗುಂಪು ಮತ್ತು ಮಧ್ಯಮ ವರ್ಗದ ಜನರಿಗೆ ಹೆಚ್ಚು ಅಸಮಾನತೆಗಳು ಮತ್ತು ಸಂಕಷ್ಟಗಳಿಗೆ ಕಾರಣವಾಗುತ್ತಿವೆ ಎಂದು ಅದು ಹೇಳಿದೆ.

ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ಟ್ರೇಡ್ ಯೂನಿಯನ್ ಚಳುವಳಿಯನ್ನು ಹತ್ತಿಕ್ಕಲು ಮತ್ತು ದುರ್ಬಲಗೊಳಿಸಲು, ಕೆಲಸದ ಸಮಯವನ್ನು ಹೆಚ್ಚಿಸಲು, ಕಾರ್ಮಿಕರ ಸಾಮೂಹಿಕ ಚೌಕಾಸಿಯ ಹಕ್ಕು, ಮುಷ್ಕರ ಮಾಡುವ ಹಕ್ಕು ಮತ್ತು ಉದ್ಯೋಗದಾತರಿಂದ ಕಾರ್ಮಿಕ ಕಾನೂನುಗಳ ಉಲ್ಲಂಘನೆಯನ್ನು ಅಪರಾಧೀಕರಣಗೊಳಿಸದಿರಲು ಉದ್ದೇಶಿಸಿವೆ ಎಂದು ಒಕ್ಕೂಟ ತಿಳಿಸಿದೆ.

ಅಂಗನವಾಡಿ, ಆಶಾ ಮತ್ತು ಮಧ್ಯಾಹ್ನ ಬಿಸಿಯೂಟ, ಆಶಾ ಕಿರಣ್ ಮುಂತಾದ ಯೋಜನೆಗಳ ಕಾರ್ಮಿಕರಿಗೆ ಕಾರ್ಮಿಕರ ಸ್ಥಾನಮಾನವನ್ನು ನೀಡಲು ಮತ್ತು ಅವರಿಗೆ ESIC ವ್ಯಾಪ್ತಿಯನ್ನು ನೀಡಲು ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸುಗಳನ್ನು ಜಾರಿಗೊಳಿಸುವಂತೆ ವೇದಿಕೆ ಒತ್ತಾಯಿಸಿದೆ.

ಶಾಖದ ಅಲೆ, ಪ್ರವಾಹ, ಚಂಡಮಾರುತಗಳು, ಅಕಾಲಿಕ ಮಳೆ ಮತ್ತು ಮುಂತಾದ ತೀವ್ರ ಹವಾಮಾನ ಪರಿಸ್ಥಿತಿಗಳಿಂದ ಉಂಟಾಗುವ ಅಪಾಯಗಳು ಮತ್ತು ಹಾನಿಗಳನ್ನು ಭರಿಸಲು ಹವಾಮಾನ ಸ್ಥಿತಿಸ್ಥಾಪಕತ್ವ ನಿಧಿಯನ್ನು ತುರ್ತಾಗಿ ರಚಿಸಬೇಕು ಎಂದು ತನ್ನ ಬೇಡಿಕೆಯಲ್ಲಿ ತಿಳಿಸಿದೆ.

ಇದರ ಜೊತೆಗೆ, ಭಾರತೀಯ ರೈಲ್ವೆ, ರಸ್ತೆ ಸಾರಿಗೆ, ಕಲ್ಲಿದ್ದಲು ಗಣಿಗಳು ಮತ್ತು ಇತರ ಕಲ್ಲಿದ್ದಲು ರಹಿತ ಗಣಿಗಳು, ಬಂದರು ಮತ್ತು ಡಾಕ್, ರಕ್ಷಣೆ, ವಿದ್ಯುತ್, ಅಂಚೆ, ದೂರಸಂಪರ್ಕ, ಬ್ಯಾಂಕುಗಳು ಮತ್ತು ವಿಮಾ ವಲಯ ಮುಂತಾದವುಗಳ ಖಾಸಗೀಕರಣವನ್ನು ತಕ್ಷಣವೇ ನಿಲ್ಲಿಸುವಂತೆ ಒಕ್ಕೂಟಗಳು ಒತ್ತಾಯಿಸಿವೆ.

ಭಾರತ್‌ ಬಂದ್‌ ಬೆಂಬಲಿಸಿದ ಸಂಘಟನೆಗಳು

ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮತ್ತು ನರೇಗಾ ಸಂಗ್ರಾಮ ಮೋರ್ಚಾದಂತಹ ವಲಯ ಸಂಸ್ಥೆಗಳು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ತಮ್ಮ ಬೆಂಬಲವನ್ನು ನೀಡಿವೆ. ಆರ್‌ಎಸ್‌ಎಸ್-ಸಂಯೋಜಿತ ಭಾರತೀಯ ಮಜ್ದೂರ್ ಸಂಘ್ (ಬಿಎಂಎಸ್) ಮಾತ್ರ ಸಾಮಾನ್ಯ ಮುಷ್ಕರದಲ್ಲಿ ಭಾಗವಹಿಸುವುದಿಲ್ಲ ಮತ್ತು ಅದನ್ನು ʻರಾಜಕೀಯ ಪ್ರೇರಿತʼ ಪ್ರತಿಭಟನೆ ಎಂದು ಕರೆದಿದೆ.

ಪಶ್ವಿಮ ಬಂಗಾಳದಲ್ಲಿ ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾದ ಮುಷ್ಕರದ ಬೆಂಬಲಿಗರು ಈಸ್ಟರ್ನ್ ರೈಲ್ವೆಯ ಸೀಲ್ದಾ ವಿಭಾಗದ ಸೀಲ್ದಾ ಸೌತ್ ವಿಭಾಗದ ಡೈಮಂಡ್ ಹಾರ್ಬರ್ ಮತ್ತು ಉತ್ತರ ವಿಭಾಗದ ಶ್ಯಾಮ್‌ನಗರದಲ್ಲಿ ರೈಲು ಸಂಚಾರವನ್ನು ತಡೆಯಲು ಪ್ರಯತ್ನಿಸಿದರು. ಜಲ್ಪೈಗುರಿ, ಅಸನ್ಸೋಲ್ ಮತ್ತು ಬಂಕುರಾ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ರಸ್ತೆಗಳನ್ನು ತಡೆಯಲು ಪ್ರಯತ್ನಿಸಿದರು.

ಬಿಹಾರದಲ್ಲಿ, ಆರ್‌ಜೆಡಿಯ ವಿದ್ಯಾರ್ಥಿ ಘಟಕದ ಸದಸ್ಯರು ಮುಷ್ಕರಕ್ಕೆ ಬೆಂಬಲವಾಗಿ ಜೆಹಾನಾಬಾದ್ ರೈಲು ನಿಲ್ದಾಣದಲ್ಲಿ ರೈಲು ಹಳಿಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ಕೇಂದ್ರ ಕಾರ್ಮಿಕ ಸಂಘಗಳ ಪ್ರಕಾರ, 1991ರಲ್ಲಿ ಭಾರತದಲ್ಲಿ ನೂತನ ಆರ್ಥಿಕ ನೀತಿಗಳು ಜಾರಿಗೆ ಬಂದಾಗಿನಿಂದ ಇದು 22ನೇ ಸಾರ್ವತ್ರಿಕ ಮುಷ್ಕರವಾಗಿದೆ. ಈ ಮುಷ್ಕರವನ್ನು ಆರಂಭದಲ್ಲಿ ಮೇ 20ಕ್ಕೆ ಕರೆಯಲಾಗಿತ್ತು, ಆದರೆ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ನಂತರದ ಆಪರೇಷನ್ ಸಿಂಧೂರ್ ಕಾರಣದಿಂದಾಗಿ ಅದನ್ನು ಮುಂದೂಡಲಾಯಿತು.

Read More
Next Story