US Consulate: ಬೆಂಗಳೂರಿಗರ ಬಹುದಿನ ಕನಸು ನನಸು; ಜನವರಿ 17ರಂದು ಅಮೆರಿಕ ಕಾನ್ಸುಲೇಟ್ ಆರಂಭ
US Consulate : ಬೆಂಗಳೂರು, ಜನವರಿ 13: ಬೆಂಗಳೂರಿನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಸಮರ್ಪಣಾ ಸಮಾರಂಭ ಜನವರಿ 17ರಂದು ನಡೆಯಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಬೆಂಗಳೂರಿನಲ್ಲಿ ಅಮೆರಿಕದ ಕಾನ್ಸುಲೇಟ್ ಕಚೇರಿ ಜನವರಿ 17ರಿಂದ ಆರಂಭವಾಗಲಿದೆ. ಈ ಮೂಲಕ ಐಟಿ ಮತ್ತು ಬಿಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಕರ್ನಾಟಕದ ಜನರ ಹಲವು ವರ್ಷಗಳ ಕನಸು ನನಸಾಗಲಿದೆ. ಕಚೇರಿಯೊಂದು ಸ್ಥಾಪನೆಯಾಗುವ ಕುರಿತು ನಾವು ಖಚಿತಪಡಿಸಬಲ್ಲೆವು. ಆದರೆ ಎಲ್ಲಿ ಆರಂಭವಾಗಲಿದೆ ಎಂಬುದನ್ನು ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ಕಾನ್ಸುಲೇಟ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಂದ ಹಾಗೆ ಹೊಸ ರಾಯಭಾರ ಕಚೇರಿಯು ತಾತ್ಕಾಲಿಕ ಸ್ಥಳದಲ್ಲಿ ಆರಂಭವಾಗಲಿದೆ ಎಂಬುದಾಗಿ ಅಧಿಕಾರಿ ಹೇಳಿದ್ದಾರೆ. ಪ್ರಸ್ತುತ ಯನೈಟೆಡ್ ಸ್ಟೇಟ್ ಕಮರ್ಷಿಯಲ್ ಸರ್ವಿಸ್ (USCS) ಬೆಂಗಳೂರಿನ ಜೆಡಬ್ಲ್ಯು ಮ್ಯಾರಿಯೆಟ್ ಹೋಟೆಲ್‌ನಲ್ಲಿ ಕಾರ್ಯಾಚರಿಸುತ್ತಿದೆ. ಅದೇ ಸ್ಥಳದಲ್ಲಿ ಕಾನ್ಸುಲೇಟ್ ಕೂಡ ಆರಂಭವಾಗಬಹುದು ಎಂದು ಅಂದಾಜಿಸಲಾಗಿದೆ.
ಬೆಂಗಳೂರಿನ ವೈಟ್‌ಫೀಲ್ಡ್ ಪ್ರದೇಶದಲ್ಲಿ ಐಟಿ ಪಾರ್ಕ್‌ಗಳು, ಐಟಿ ಕಂಪನಿಗಳು ಹಾಗೂ ಬ್ಯುಸಿನೆಸ್ ಪಾರ್ಕ್‌ಗಳಿವೆ. ಹೀಗಾಗಿ ಈ ಪ್ರದೇಶದಲ್ಲಿಯೇ ಕಾನ್ಸುಲೇಟ್ ಆರಂಭವಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಅಧಿಕಾರಿ ಈ ಬಗ್ಗೆ ಯಾವುದೇ ಖಚಿತ ಹೇಳಿಕೆ ನೀಡಿಲ್ಲ.
ಕೈಗಾರಿಕ ಸಚಿವ ಎಂ.ಬಿ ಪಾಟೀಲ್ ಅವರು ಕೆಲವು ದಿನಗಳ ಹಿಂದೆ ಚೆನ್ನೈನಲ್ಲಿರುವ ಅಮೆರಿಕಾ ಕಾನ್ಸುಲೇಟ್ ಕಚೇರಿಯಲ್ಲಿ ಅಲ್ಲಿನ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ವೇಳೆ ಬೆಂಗಳೂರಿನಲ್ಲಿ ಕಾನ್ಸುಲೇಟ್ ಆರಂಭಿಸಲು ಮನವಿ ಮಾಡಿದ್ದರು.
ಇದಾದ ಬಳಿಕ ಭಾರತದಲ್ಲಿರುವ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ, ಬೆಂಗಳೂರಿನಲ್ಲಿ ಅಮೆರಿಕ ಕಾನ್ಸುಲೇಟ್ ತೆರೆಯುವ ನಿಟ್ಟಿನಲ್ಲಿ ನಾವು ಬದ್ಧರಾಗಿದ್ದೇವೆ ಎಂದು ಹೇಳಿಕೆ ನೀಡಿದ್ದರು.
ಬೆಂಗಳೂರಿನಲ್ಲಿ ಕಾನ್ಸುಲೇಟ್ ಕಚೇರಿ ಹೊಂದಿರದ ಏಕೈಕ ರಾಷ್ಟ್ರ ಬೆಂಗಳೂರು ಎಂಬ ವಿಚಾರವನ್ನುಬೊಟ್ಟು ಮಾಡಿ ಹೇಳಿದ್ದ ಎರಿಕ್ ಅವರು, ಈ ವಿಚಾರದಲ್ಲಿ ನಾವು ಪ್ರಯತ್ನಗಳನ್ನು ಸತತವಾಗಿ ನಡೆಸುತ್ತಿದ್ದೇವೆ. ಜನವರಿಯಲ್ಲಿ ಈ ಕುರಿತು ಶುಭ ಸುದ್ದಿಯನ್ನು ಹೊರಡಿಸಲಿದ್ದೇವೆ. ಬೆಂಗಳೂರಿನಲ್ಲಿ ಕಮರ್ಷಿಯಲ್ ಸೆಂಟರ್ ಇರುವ ಕಾರಣ ಕಾನ್ಸುಲೇಟ್ ತೆರೆಯುವ ವಿಚಾರದಲ್ಲಿ ಶುಭ ಸುದ್ದಿ ಸಿಗಲಿದೆ,ʼʼ ಎಂದು ಹೇಳಿದರು. ನವದೆಹಲಿಯಲ್ಲಿ ರಾಯಭಾರ ಕಚೇರಿ ಜೊತೆಗೆ ಮುಂಬೈ, ಕೋಲ್ಕತಾ, ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ ಯುಎಸ್ ದೂತಾವಾಸಗಳನ್ನು ಹೊಂದಿದೆ.
ಅಹ್ಮದಾಬಾದ್‌ನಲ್ಲಿಯೂ ಹೊಸ ದೂತವಾಸವನ್ನು ತೆರೆಯುವುದಾಗಿ ಅಮೆರಿಕ ಘೋಷಿಸಿದೆ.
ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ಸ್ಥಾಪನೆಯು ದೀರ್ಘಕಾಲದ ಬೇಡಿಕೆಯಾಗಿದೆ. ಇದು ಕರ್ನಾಟಕದ ನಿವಾಸಿಗಳಿಗೆ ವೀಸಾ ಅರ್ಜಿ ಪ್ರಕ್ರಿಯೆ ಸುಗಮಗೊಳಿಸುವ ನಿರೀಕ್ಷೆಯಿದೆ. ಅವರು ಸಲಹೆಗಾರರು ಇರುವ ಇತರ ರಾಜ್ಯಗಳ ನಗರಗಳಿಗೆ ಪ್ರಯಾಣಿಸುವ ಅಗತ್ಯವನ್ನು ನಿವಾರಿಸುತ್ತದೆ.