Parliament Session | ಗೋದಾವರಿ - ಕಾವೇರಿ ನದಿಗಳ ಜೋಡಣೆ: ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಪ್ರತಿಪಾದನೆ
x

Parliament Session | ಗೋದಾವರಿ - ಕಾವೇರಿ ನದಿಗಳ ಜೋಡಣೆ: ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಪ್ರತಿಪಾದನೆ

HD Deve Gowda: ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ, ಸಣ್ಣ ಅತಿ ಸಣ್ಣ ಕೈಗಾರಿಕೆಗಳಿಗೆ ಬೆಂಬಲ ಹಾಗೂ ಅತ್ಯಂತ ಪ್ರಮುಖವಾದ ನೀರಿನ ಭದ್ರತೆಗೆ ಸರಕಾರದ ಕಡೆಯಿಂದ ತಕ್ಷಣದ ಉಪಕ್ರಮಗಳು ಆಗಬೇಕಿದೆ ಎಂದು ಅವರು ಪ್ರತಿಪಾದಿಸಿದರು.


ನವದೆಹಲಿ : ಜಲ ಸಂಪನ್ಮೂಲಗಳ ಸದ್ವಿನಿಯೋಗಕ್ಕೆ ಎಲ್ಲಾ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಹಾಗೂ ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ಕೊನೆಗಾಣಿಸಲು ಗೋದಾವರಿ ಹಾಗೂ ಕಾವೇರಿ ನದಿಗಳ ಜೋಡಣೆ ಆದ್ಯತೆ ನೀಡಬೇಕು ಎಂದು ಮಾಜಿ ಪ್ರಧಾನಿ ಎಚ್​​ ಡಿ ದೇವೇಗೌಡ ಅವರು ಅಭಿಪ್ರಾಯಪಟ್ಟಿದ್ದಾರೆ.


ರಾಜ್ಯಸಭೆಯಲ್ಲಿ ಗುರುವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಅವರು ನೀರಿನ ಬಳಕೆಯಲ್ಲಿನ ಸ್ಥಿರತೆಗೆ ಗಮನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಬೆಂಗಳೂರಿನಲ್ಲಿ ನೀರಿನ ಟ್ಯಾಂಕರ್‌ಗಳು ನಿವಾಸಿಗಳನ್ನು ಶೋಷಿಸುತ್ತಿವೆ ಎಂಬ ಅಂಶವನ್ನು ಸದನದ ಗಮನಕ್ಕೆ ತಂದ ಮಾಜಿ ಪ್ರಧಾನಿ, ಹಣಕಾಸು ಸಚಿವರು ಕುಡಿಯುವ ನೀರಿನ ಯೋಜನೆಗಳಿಗೆ ₹1,400 ಕೋಟಿ ಮಂಜೂರು ಮಾಡಿದ್ದಾರೆ. ಆದರೆ ದೀರ್ಘಾವಧಿ ನೀರಿನ ಭದ್ರತೆ ಖಚಿತಪಡಿಸಿಕೊಳ್ಳಲು ಗೋದಾವರಿ- ಕಾವೇರಿ ಜೋಡಣೆಗೆ ಆದ್ಯತೆ ನೀಡಬೇಕು ಎಂದು ಅವರು ಒತ್ತಿ ಹೇಳಿದರು.

ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ, ಸಣ್ಣ ಅತಿ ಸಣ್ಣ ಕೈಗಾರಿಕೆಗಳಿಗೆ ಬೆಂಬಲ ಹಾಗೂ ಅತ್ಯಂತ ಪ್ರಮುಖವಾದ ನೀರಿನ ಭದ್ರತೆಗೆ ಸರಕಾರದ ಕಡೆಯಿಂದ ತಕ್ಷಣದ ಉಪಕ್ರಮಗಳು ಆಗಬೇಕಿದೆ ಎಂದು ಅವರು ಪ್ರತಿಪಾದಿಸಿದರು.

ನಗರಗಳಿಗೆ ವಲಸೆ ಅಪಾಯಕಾರಿ

ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಿಂದ ಯುವಜನರು ನಗರಗಳಿಗೆ ವಲಸೆ ಬರುತ್ತಿದ್ದಾರೆ ಎಂದು ದೇವೇಗೌಡರು ಕಳವಳ ವ್ಯಕ್ತಪಡಿಸಿದರು. ಬೆಂಗಳೂರಿನ ಜನಸಂಖ್ಯೆ ಈಗ 1.4 ಕೋಟಿಗೆ ಮುಟ್ಟಿದೆ. ಯುವಕರು ತಮ್ಮ ವಿದ್ಯಾಭ್ಯಾಸ ಮುಗಿದ ತಕ್ಷಣ ಹಳ್ಳಿಗಳನ್ನು ತೊರೆದು ನಗರಗಳಿಗೆ ಬರುತ್ತಿದ್ದಾರೆ. ಇದು ಜೀವನೋಪಾಯದ ಅಸಮತೋಲನ ಸೃಷ್ಟಿಸಿದೆ. ಯುವಕರಿಗೆ ತಮ್ಮ ಪ್ರದೇಶಗಳಿಗಳಲ್ಲಿಯೇ ಹೆಚ್ಚೆಚ್ಚು ಉದ್ಯೋಗವಕಾಶ ಕಲ್ಪಿಸುವ ಅಗತ್ಯವಿದೆ ಎಂದು ಮಾಜಿ ಪ್ರಧಾನಿಗಳು ಸಲಹೆ ನೀಡಿದರು.

ಸಮತೋಲಿತ ಜೀವನೋಪಾಯ ಸೃಷ್ಟಿ ಮಾಡುವ ನಿಟ್ಟಿನಲ್ಲಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳನ್ನು (MSME) ಬೆಂಬಲಿಸಲು ಸೂಕ್ತ ಉಪಕ್ರಮಗಳನ್ನುಕೈಗೊಳ್ಳಬೇಕಾದ ಅಗತ್ಯವನ್ನು ಮಾಜಿ ಪ್ರಧಾನಿಗಳು ಒತ್ತಿ ಹೇಳಿದರು.

ಅತಿ ಸಣ್ಣ, ಸಣ್ಣ ಕೈಗಾರಿಕೆಗಳಿಗೆ ಸಾಲದ ಅನುಮೋದನೆ ನೀಡುವಾಗ ಸಿಬಿಲ್ (CIBIL) ಸ್ಕೋರ್‌ ಮಾನದಂಡವನ್ನು ಪರಿಗಣಿಸಬಾರದು. ಬಡ್ಡಿದರಗಳನ್ನು ಶೇ.7ರಿಂದ 8ಕ್ಕೆ ಇಳಿಸಬೇಕು ಮತ್ತು ಆರಂಭಿಕ ಸಾಲ ಮರುಪಾವತಿಗಾಗಿ ಸ್ವತ್ತುಗಳ ಮರುಸ್ವಾಧೀನ ದಂಡ ಪ್ರಯೋಗ ಕೈಬಿಡಬೇಕು ಎಂದು ದೇವೇಗೌಡರು ಸರಕಾರವನ್ನು ಒತ್ತಾಯಿಸಿದರು.

ಹಲಸಿನ ಹಣ್ಣು, ನೇರಳೆ, ಹುಣಸೆಹಣ್ಣು ಮಂಡಳಿ ರಚಿಸಿ

ಕೃಷಿ ಉತ್ಪನ್ನಗಳಿಗೆ ಹೆಚ್ಚು ಬೆಂಬಲ ನೀಡುವುದನ್ನು ಮುಂದುವರಿಸಬೇಕು. ಬಿಹಾರದಲ್ಲಿ ಮಖಾನಾ ಮಂಡಳಿ ರಚನೆ ಮಾಡಿರುವಂತೆಯೇ ರೀತಿ ಹಲಸಿನ ಹಣ್ಣು, ನೇರಳೆ, ಹುಣಸೆಹಣ್ಣು ಮಂಡಳಿ ರಚಿಸಬೇಕು ಎಂದು ಒತ್ತಾಯಿಸಿದರು.

ಅತಿ ಕಡಿಮೆ ಬಂಡವಾಳದಿಂದ ಮಖಾನಾ ಬೆಳೆಯಲಾಗುತ್ತಿದೆ. ಇದರಿಂದ ರೈತರಿಗೆ ಹೆಚ್ಚು ಅನುಕೂಲ ಆಗುತ್ತಿದೆ. ಮಂಡಳಿ ರಚನೆಯಿಂದ ಮತ್ತಷ್ಟು ಅನುಕೂಲ ಆಗುತ್ತದೆ. ಹೀಗಿದ್ದ ಮೇಲೆ ಕನಿಷ್ಠ ಬಂಡವಾಳದಿಂದ ನೈಸರ್ಗಿಕವಾಗಿ ಬೆಳೆಯಲಾಗುವ ಹಲಸಿನ ಹಣ್ಣು, ನೇರಳೆ ಹಾಗೂ ಹುಣಸೆಹಣ್ಣು ಮಂಡಳಿಯನ್ನೂ ರಚಿಸಬಹುದು ಮಾಜಿ ಪ್ರಧಾನಿಗಳು ಸಲಹೆ ನೀಡಿದರು.

Read More
Next Story