
ಕಾರು ಪಲ್ಟಿಯಾಗಿ ಜಖಂಗೊಂಡಿರುವುದು.
ತಿರುಪತಿಗೆ ತೆರಳುತ್ತಿದ್ದ ಬೆಂಗಳೂರಿನ ಕುಟುಂಬದ ಕಾರು ಅಪಘಾತ: ಇಬ್ಬರು ಸಾವು, ನಾಲ್ವರಿಗೆ ಗಾಯ
ಕಾಶಿಪೆಂಟ್ಲಾ ಹೆರಿಟೇಜ್ ರಸ್ತೆಯು ತಿರುಪತಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಭಾಗವಾಗಿದ್ದು, ಈ ಪ್ರದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಲವಾರು ಅಪಘಾತಗಳು ಸಂಭವಿಸಿವೆ.
ಬೆಂಗಳೂರಿನಿಂದ ತಿರುಮಲ ತಿರುಪತಿ ದೇವಸ್ಥಾನಕ್ಕೆ ದರ್ಶನಕ್ಕಾಗಿ ತೆರಳುತ್ತಿದ್ದ ಒಂದೇ ಕುಟುಂಬದ ಆರು ಜನರಿದ್ದ ಕಾರು ಅಪಘಾತಕ್ಕೀಡಾಗಿ ಇಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದುರ್ಘಟನೆ ಚಿತ್ತೂರು ಜಿಲ್ಲೆಯ ಕಾಶಿಪೆಂಟ್ಲಾ ಹೆರಿಟೇಜ್ ರಸ್ತೆಯಲ್ಲಿ ಸಂಭವಿಸಿದೆ. ಕಾರು ವೇಗದಲ್ಲಿ ಸಾಗುತ್ತಿದ್ದಾಗ ಪಲ್ಟಿಯಾಗಿ ಅಪಘಾತ ಸಂಭವಿಸಿದೆ.
ಮೃತರನ್ನು ಬೆಂಗಳೂರಿನ ನಿವಾಸಿಗಳಾದ ವಿಜಯಲಕ್ಷ್ಮಿ (50), ಸಹನಾ ಬಿ ಎಸ್ (34) ಎಂದು ಗುರುತಿಸಲಾಗಿದೆ. ರಜನಿ ಎಸ್ ಆರ್ (27), ಆರ್ ಲೇಖನ್ ಗೌಡ (11), ಹೊಸೂರಿನ ಚಾಲಕ ತ್ಯಾಗರಾಜನ್ (48), ತ್ಯಾಗರಾಜನ್ ಅವರ ಪುತ್ರ ಕ್ರಿಸ್ವಿನ್ (15) ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ತಿರುಪತಿಯ ಎಸ್‌ವಿಆರ್ ರುಯಿಯಾ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಚಂದ್ರಗಿರಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಪ್ರಸಾದ್ ತಿಳಿಸಿದ್ದಾರೆ.
ಕಾಶಿಪೆಂಟ್ಲಾ ಹೆರಿಟೇಜ್ ರಸ್ತೆಯು ತಿರುಪತಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಭಾಗವಾಗಿದ್ದು, ಈ ಪ್ರದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಲವಾರು ಅಪಘಾತಗಳು ಸಂಭವಿಸಿವೆ. ಈ ಹಿಂದೆಯೂ (ಏಪ್ರಿಲ್ 28, 2025) ಇದೇ ಮಾರ್ಗದ ತೋತಾಪಲ್ಲಿ ಗ್ರಾಮದಲ್ಲಿ ಸಂಭವಿಸಿದ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದರು. ಈ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರ ಹೆಚ್ಚಾಗಿದ್ದು, ಸುರಕ್ಷತಾ ಕ್ರಮಗಳ ಕೊರತೆ ಮತ್ತು ರಸ್ತೆ ವಿಸ್ತರಣೆಯ ಅಗತ್ಯತೆಯ ಬಗ್ಗೆ ಸ್ಥಳೀಯರು ಮತ್ತು ಪ್ರಯಾಣಿಕರು ಕಳವಳ ವ್ಯಕ್ತಪಡಿಸಿದ್ದಾರೆ.