112 Helpline: ʼʼಕನ್ನಡದಲ್ಲೇ ಮಾತನಾಡಿʼʼ ; ಸ್ಪೇನ್ ಪ್ರಜೆಯ ತುರ್ತು ಕರೆಗೆ ಸ್ಪಂದಿಸದ ಸಹಾಯವಾಣಿ
112 Helpline: ಕಳ್ಳರು ಮನೆಗೆ ನುಗ್ಗಿದ್ದಾರೆ ಎಂದು ಹೇಳುವುದಕ್ಕೆ ಸ್ಪೇನ್ ಪ್ರಜೆ ಫೋನ್ ಮಾಡಿದಾಗ ಅಲ್ಲಿನ ಆಪರೇಟರ್ ಕನ್ನಡದಲ್ಲಿಯೇ ಮಾತನಾಡಿ ಎಂದು ಫೋನ್ ಕಟ್ ಮಾಡಿದ್ದಾರೆ. ನಿಯಮ ಪ್ರಕಾರ ವಾಪಸ್ ಫೋನ್ ಮಾಡಿಲ್ಲ.
ತುರ್ತು ನೆರವಿಗಾಗಿ ಇರುವ ಸಹಾಯವಾಣಿ 112ಕ್ಕೆ ಕರೆ ಮಾಡಿದ ಸ್ಪೇನ್ ಪ್ರಜೆಯೊಬ್ಬರಿಗೆ ಸಹಾಯವಾಣಿ ಸಿಬ್ಬಂದಿ ಕನ್ನಡದಲ್ಲೇ ಮಾತನಾಡಿ ಎಂದು ಕರೆ ಸ್ಥಗಿತಗೊಳಿಸಿದ ಪ್ರಕರಣವೊಂದು ವರದಿಯಾಗಿದೆ. ತಮ್ಮ ಫ್ಲ್ಯಾಟ್‌ಗೆ ಕಳ್ಳರು ನುಗ್ಗಿದ್ದಾರೆ ಎಂದು ಹೇಳುವುದಕ್ಕೆ ಸ್ಪೇನ್ ಪ್ರಜೆ ಸಹಾಯವಾಣಿಗೆ ಕರೆ ಮಾಡಿದ್ದರು. ಆದಾಗ್ಯೂ ಅವರಿಗೆ ಯಾವುದೇ ನೆರವು ಸಿಕ್ಕಿರಲಿಲ್ಲ.
ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿರುವ ನೈಡಸ್ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ. ಸ್ಪೇನ್ ಪ್ರಜೆ ಜೀಸಸ್ ಅಬ್ರಿಯೆಲ್ ಅಲ್ಲಿ ವಾಸಿಸುತ್ತಿದ್ದಾರೆ. ಮುಂಜಾನೆ 2 ಗಂಟೆ ಸುಮಾರಿಗೆ ಕಳ್ಳರು ಸ್ನಾನಗೃಹದ ಕಿಟಕಿಯ ಗಾಜುಗಳನ್ನು ತೆಗೆದು ಒಳ ನುಗ್ಗಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಶಬ್ದ ಕೇಳಿದ ಅಬ್ರಿಯಲ್ ತಕ್ಷಣ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿದ್ದರು. ಘಟನೆಯನ್ನು ಇಂಗ್ಲಿಷ್ ಮತ್ತು ಸ್ಪ್ಯಾನಿಷ್ ಭಾಷೆಯಲ್ಲಿ ಹೇಳಿದ್ದರು. ಆದರೆ, ಸಹಾಯವಾಣಿ ಸಿಬ್ಬಂದಿ ಕನ್ನಡದಲ್ಲಿ ಮಾತನಾಡಿ ಎಂದು ಹೇಳಿದರು. ಕನ್ನಡ ಗೊತ್ತಿಲ್ಲ ಎಂದು ಹೇಳಿದಾಗ ಕ ಕಡಿತ ಮಾಡಿದ್ದರು.
ಫ್ಲ್ಯಾಟ್ ನಲ್ಲಿ 30 ನಿಮಿಷ ಕಳೆದ ಕಳ್ಳರು
ಕಳ್ಳರು ಫ್ಲ್ಯಾಟ್‌ಗೆ ನುಗ್ಗಿ 30 ನಿಮಿಷ ಕಳೆದಿದ್ದರು. ಬೆದರಿದ ಅಬ್ರಿಯೆಲ್ ಬೆಡ್‌ರೂಮ್‌ನಲ್ಲೇ ಬಾಗಿಲು ಹಾಕಿಕೊಂಡು ಕುಳಿತಿದ್ದರು. ಕಳ್ಳರು ಹೋಗುವಾ ಲ್ಯಾಪ್‌ಟಾಪ್ , ಪ್ಲಾಟಿನಂ ರಿಂಗ್, ಹೆಡ್‌ಫೋನ್, 10,000 ರೂಪಾಯಿ ಇದ್ದ ಪರ್ಸ್, , ಡೆಬಿಟ್ ಕಾರ್ಡ್‌ಗಳು ಮತ್ತು ಸ್ಪ್ಯಾನಿಷ್ ಐಡಿ ಸೇರಿದಂತೆ 82,000 ರೂ.ಗಳ ವಸ್ತುಗಳನ್ನು ಕದ್ದಿದ್ದಾರೆ.
ಆಘಾತಕ್ಕೊಳಗಾದ ಅಬ್ರಿಯೆಲ್ ಬೇರೆ ಯಾರನ್ನೂ ಸಂಪರ್ಕಿಸದೆ ಸುಮಾರು 6 ಗಂಟೆಗಳ ಕಾಲ ತನ್ನ ಕೋಣೆಯಲ್ಲಿಯೇ ಉಳಿದಿದ್ದರು. ಬೆಳಗ್ಗೆ 8.30ರ ಸುಮಾರಿಗೆ ಮನೆಯ ಮಾಲೀಕ ಸುದೀಪ್ ಅವರಿಗೆ ಕರೆ ಮಾಡಿ ಕರೆಸಿ ದೂರು ನೀಡಿದ್ದರು .
ಸಿಸಿಟಿವಿ ಇಲ್ಲ
ಅಪಾರ್ಟ್‌ಮೆಂಟ್‌ನಲ್ಲಿ ಸಿಸಿಟಿವಿ ಇಲ್ಲ. ಅದೇ ರೀತಿ ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿ ಈ ಘಟನೆಯನ್ನು ಗಮನಿಸಲಿಲ್ಲ. ಕಳ್ಳತದನದಲ್ಲಿ ಹತ್ತಿರದ ಸ್ಥಳಗಳ ನಿರ್ಮಾಣ ಕಾರ್ಮಿಕರು ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪಕ್ಕದ ಕಟ್ಟಡಗಳು ಮತ್ತು ರಸ್ತೆಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ತುರ್ತು ಸಹಾಯವಾಣಿ ಸಮಸ್ಯೆಗಳು
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಸಹಾಯವಾಣಿಗೆ ಪ್ರತಿದಿನ 15,000-20,000 ಕರೆಗಳು ಬರುತ್ತವೆ, ಅದರಲ್ಲಿ 1,500 ಮಾತ್ರ ನಿಜವಾಗಿರುತ್ತವೆ ಎಂದು ಪೊಲೀಸರು ಹೇಳಿದ್ದಾರೆ. ಹೀಗಾಗಿ ಕರೆ ತೆಗೆದುಕೊಂಡಿರುವ ಆಪರೇಟರ್ ಮುರಿದ ಅರೆಬರೆ ಸ್ಪಾನಿಷ್ ಹಾಗೂ ಇಂಗ್ಲಿಷ್ ಭಾಷೆಯನ್ನು ಕೇಳಿಸಿಕೊಂಡು ಕುಡಿದ ಕರೆ ಮಾಡಿದ್ದಾರೆ ಎಂದು ಅಂದುಕೊಂಡಿದ್ದರು. ನಿಯಮ ಪ್ರಕಾರ ಆಪರೇಟರ್ ಗಳು ಮತ್ತೆ ಕರೆ ಮಾಡಿ ಪ್ರತಿ ಪರಿಸ್ಥಿತಿ ಪರಿಶೀಲಿಸಬೇಕು. ಆ ವಿಚಾರದಲ್ಲಿ ನಿರ್ಲಕ್ಷ್ಯ ತೋರಲಾಗಿದೆ.