ಲೋಕಸಭೆ| ಬ್ಯಾಂಕಿಂಗ್ ಕಾನೂನುಗಳು(ತಿದ್ದುಪಡಿ) ಮಸೂದೆ ಮಂಡನೆ
ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬ್ಯಾಂಕಿಂಗ್ ಕಾನೂನು (ತಿದ್ದುಪಡಿ) ಮಸೂದೆ 2024 ನ್ನು ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಿದರು. ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗೆ ನಾಲ್ವರು ನಾಮಿನಿಗಳನ್ನು ನೇಮಿಸುವ ಅವಕಾಶವನ್ನು ಈ ಮಸೂದೆ ನೀಡುತ್ತದೆ.
ಮತ್ತೊಂದು ಪ್ರಸ್ತಾವಿತ ಬದಲಾವಣೆಯು ನಿರ್ದೇಶಕರ ಸ್ಥಾನಕ್ಕೆ 'ಗಣನೀಯ ಆಸಕ್ತಿ'ಯ ಮರುವ್ಯಾಖ್ಯಾನಕ್ಕೆ ಸಂಬಂಧಿಸಿದೆ. ಆರು ದಶಕಗಳ ಹಿಂದೆ ನಿಗದಿಪಡಿಸಿದ 5 ಲಕ್ಷ ರೂ. ಮಿತಿಯ ಬದಲಿಗೆ 2 ಕೋಟಿ ರೂ.ಗೆ ಹೆಚ್ಚಬಹುದು.
ಕಾಂಗ್ರೆಸ್ ಸದಸ್ಯ ಮನೀಶ್ ತಿವಾರಿ ಅವರು ಮಸೂದೆ ಮಂಡಿಸುವುದನ್ನು ವಿರೋಧಿಸಿದರು.ʻಸಹಕಾರ ಸಂಘಗಳಿಗೆ ಸಂಬಂಧಿಸಿದಂತೆ ಕಾನೂನು ಮಾಡುವ ಅಧಿಕಾರವು ರಾಜ್ಯ ಸರ್ಕಾರಗಳಿಗೆ ಇರುತ್ತದೆ,ʼ ಎಂದು ವಾದಿಸಿದರು.
ʻಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಮತ್ತು ಸಹಕಾರಿ ಬ್ಯಾಂಕ್‌ಗಳು ಸಂಬಂಧ ಹೊಂದಿವೆ. ಆದ್ದರಿಂದ ಈ ಮಾರ್ಗದ ಮೂಲಕವೇ ತಿದ್ದುಪಡಿಗಳನ್ನು ಮಾಡಬೇಕಾಗುತ್ತದೆ,ʼ ಎಂದು ಸೀತಾರಾಮನ್ ಹೇಳಿದರು.
ʻಸಹಕಾರಿಗಳನ್ನು ವಿಶೇಷವಾಗಿ, ಬ್ಯಾಂಕಿಂಗ್ ಹೊರತುಪಡಿಸಿ ಉಳಿದೆಲ್ಲ ವಹಿವಾಟು ನಡೆಸುವಂಥವನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುವುದಿಲ್ಲ. ಬ್ಯಾಂಕಿಂಗ್‌ಗೆ ಪರವಾನಗಿ ಹೊಂದಿರುವ ಸಹಕಾರಿ ಸಂಘಗಳು ನಿಯಮಗಳನ್ನು ಹೊಂದಿರಬೇಕು. ಆದ್ದರಿಂದ, ನಾವು ಈ ಮಸೂದೆ ಮಂಡಿಸಿದ್ದೇವೆ,ʼ ಎಂದು ಸಚಿವೆ ಹೇಳಿದರು.
ಈ ಮಸೂದೆಯು ಲೆಕ್ಕಪರಿಶೋಧಕರಿಗೆ ಪಾವತಿಸಬೇಕಾದ ಸಂಭಾವನೆಯನ್ನು ನಿರ್ಧರಿಸುವಲ್ಲಿ ಬ್ಯಾಂಕ್‌ಗಳಿಗೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡಲಿದೆ. ಬ್ಯಾಂಕ್‌ಗಳು ನಿಯಂತ್ರಣ ಅನುಸರಣೆಗಾಗಿ ವರದಿ ಮಾಡುವ ದಿನಾಂಕಗಳನ್ನು ಎರಡನೇ ಮತ್ತು ನಾಲ್ಕನೇ ಶುಕ್ರವಾರದ ಬದಲು ಪ್ರತಿ ತಿಂಗಳಿನ 15 ಮತ್ತು ಕೊನೆಯ ದಿನಕ್ಕೆ ಬದಲಿಸುವ ಪ್ರಸ್ತಾವವನ್ನು ಮಸೂದೆ ಒಳಗೊಂಡಿದೆ.
ಕೇಂದ್ರ ಸಚಿವ ಸಂಪುಟವು ಕಳೆದ ವಾರ ಅಂಗೀಕರಿಸಿದ ಈ ಮಸೂದೆಯು ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆ 1934, ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾಯಿದೆ 1955, ಬ್ಯಾಂಕಿಂಗ್ ಕಂಪನಿಗಳು (ಅಂಡರ್‌ಟೇಕಿಂಗ್‌ಗಳ ಸ್ವಾಧೀನ ಮತ್ತು ವರ್ಗಾವಣೆ) ಕಾಯಿದೆ 1970 ಮತ್ತು 1980ಗಳಿಗೆ ತಿದ್ದುಪಡಿ ತರಲಿದೆ.
ಹಣಕಾಸು ಸಚಿವೆ ತಮ್ಮ ಬಜೆಟ್ ಭಾಷಣದಲ್ಲಿ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆಗೆ ತಿದ್ದುಪಡಿ ತರುವ ಘೋಷಣೆ ಮಾಡಿದ್ದರು. ʻಬ್ಯಾಂಕ್ ಆಡಳಿತವನ್ನು ಸುಧಾರಿಸಲು ಮತ್ತು ಹೂಡಿಕೆದಾರರಿಗೆ ರಕ್ಷಣೆಯನ್ನು ಹೆಚ್ಚಿಸಲು, ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ, ಬ್ಯಾಂಕಿಂಗ್ ಕಂಪನಿಗಳ ಕಾಯಿದೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆಗೆ ಕೆಲವು ತಿದ್ದುಪಡಿಗಳನ್ನು ಪ್ರಸ್ತಾಪಿಸಲಾಗಿದೆʼ ಎಂದು ಅವರು ಬಜೆಟ್ ಭಾಷಣದಲ್ಲಿ ಹೇಳಿದ್ದರು.