13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬ್ಯಾಂಕ್ ವಂಚನೆ ಪ್ರಕರಣದ ಆರೋಪಿ ಸಿಬಿಐ ಬಲೆಗೆ
x

13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬ್ಯಾಂಕ್ ವಂಚನೆ ಪ್ರಕರಣದ ಆರೋಪಿ ಸಿಬಿಐ ಬಲೆಗೆ

ಪ್ರಕರಣ ಸಂಬಂಧ ಸಿಬಿಐ, ಮೊಹಾಲಿಯ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸುರೇಂದ್ರನ್ ಮತ್ತು ಇತರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಆದರೆ, ವಿಚಾರಣೆಗೆ ಹಾಜರಾಗದೆ ಸುರೇಂದ್ರನ್ ತಲೆಮರೆಸಿಕೊಂಡಿದ್ದ.


ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್‌ಗೆ 1.5 ಕೋಟಿ ರೂಪಾಯಿ ವಂಚಿಸಿ, ಕಳೆದ 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಘೋಷಿತ ಅಪರಾಧಿಯನ್ನು ಕೇಂದ್ರ ತನಿಖಾ ದಳ (ಸಿಬಿಐ) ಕೇರಳದಲ್ಲಿ ಬಂಧಿಸಿದೆ. ಕೇರಳದ ಕೊಲ್ಲಂ ಜಿಲ್ಲೆಯ ನಿವಾಸಿ ಸುರೇಂದ್ರನ್ ಜೆ. ಬಂಧಿತ ಆರೋಪಿ.

2010ರ ಜುಲೈ 21ರಂದು ಸಿಬಿಐ ಈ ಪ್ರಕರಣವನ್ನು ದಾಖಲಿಸಿಕೊಂಡಿತ್ತು. ಕೊಲ್ಲಂನ 'ಮೆಸರ್ಸ್ ಸ್ಟಿಚ್ ಅಂಡ್ ಶಿಪ್' ಸಂಸ್ಥೆಯ ಮಾಲೀಕನಾಗಿದ್ದ ಸುರೇಂದ್ರನ್, ಇತರರೊಂದಿಗೆ ಸೇರಿಕೊಂಡು ಬ್ಯಾಂಕ್ ಆಫ್ ಇಂಡಿಯಾದ ಲುಧಿಯಾನ ಶಾಖೆಯಿಂದ 1.5 ಕೋಟಿ ರೂಪಾಯಿ ವಿದೇಶಿ ಬಿಲ್ ಖರೀದಿ ಸಾಲವನ್ನು ಪಡೆದಿದ್ದ. ಇದಕ್ಕಾಗಿ ನಕಲಿ ದಾಖಲೆಗಳನ್ನು ಬಳಸಿದ್ದ ಎಂದು ಆರೋಪಿಸಲಾಗಿತ್ತು. ಈ ವಂಚನೆಯ ಸಂಚಿನಲ್ಲಿ ಸುರೇಂದ್ರನ್ ಪ್ರಮುಖ ಪಾತ್ರ ವಹಿಸಿದ್ದ.

ಪ್ರಕರಣ ಸಂಬಂಧ ಸಿಬಿಐ, ಮೊಹಾಲಿಯ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸುರೇಂದ್ರನ್ ಮತ್ತು ಇತರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಆದರೆ, ವಿಚಾರಣೆಗೆ ಹಾಜರಾಗದೆ ಸುರೇಂದ್ರನ್ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ 2012ರಲ್ಲಿ ನ್ಯಾಯಾಲಯವು ಆತನನ್ನು 'ಘೋಷಿತ ಅಪರಾಧಿ' ಎಂದು ಪ್ರಕಟಿಸಿತ್ತು.

ಹಲವು ವರ್ಷಗಳ ನಿರಂತರ ಪ್ರಯತ್ನದ ಬಳಿಕ, ಇತ್ತೀಚೆಗೆ ತಾಂತ್ರಿಕ ಗುಪ್ತಚರ ಮಾಹಿತಿ ಮತ್ತು ಸ್ಥಳೀಯ ಪರಿಶೀಲನೆ ಮೂಲಕ ಆರೋಪಿಯ ಚಲನವಲನವನ್ನು ಪತ್ತೆಹಚ್ಚಿದ ಸಿಬಿಐ ತಂಡ, ಸೆಪ್ಟೆಂಬರ್ 18, 2025 ರಂದು ಆತನನ್ನು ಕೊಲ್ಲಂನಲ್ಲಿ ಯಶಸ್ವಿಯಾಗಿ ಬಂಧಿಸಿತು.

ಬಂಧಿತ ಆರೋಪಿಯನ್ನು ಸೆಪ್ಟೆಂಬರ್ 19ರಂದು ತಿರುವನಂತಪುರಂನ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿ, ಮೊಹಾಲಿ ನ್ಯಾಯಾಲಯಕ್ಕೆ ಕರೆದೊಯ್ಯಲು ರಿಮಾಂಡ್ ಪಡೆದುಕೊಂಡಿದ್ದಾರೆ. . ನಂತರ, ಸೆಪ್ಟೆಂಬರ್ 20ರಂದು ಮೊಹಾಲಿಯ ಎಸ್‌ಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Read More
Next Story