5 ದಿನಗಳ ವಾರ ಕೆಲಸ ಜಾರಿಗೆ ಒತ್ತಾಯ
ಬ್ಯಾಂಕಿಂಗ್ ವಲಯದಲ್ಲಿ ಐದು ದಿನಗಳ ಕೆಲಸದ ವಾರವನ್ನು ಜಾರಿಗೆ ತರಬೇಕೆಂದು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಒತ್ತಾಯಿಸಿದೆ.
ಕಳೆದ ಡಿಸೆಂಬರ್‌ನಲ್ಲಿ ಬ್ಯಾಂಕ್ ಒಕ್ಕೂಟಗಳು ಮತ್ತು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (ಐಬಿಎ) ನಡುವಿನ ಒಪ್ಪಂದದ ಬಗ್ಗೆ ಯುಎಫ್‌ಬಿಯು ಪ್ರಸ್ತಾಪಿಸಿದೆ. ಈ ಒಪ್ಪಂದದಿಂದ ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ವೇತನದಲ್ಲಿ ಶೇ.17 ರಷ್ಟು ಹೆಚ್ಚಳಕ್ಕೆ ಕಾರಣವಾಯಿತು.
ಯುಎಫ್‌ಬಿಯು ಒಂಬತ್ತು ಬ್ಯಾಂಕಿಂಗ್ ಯೂನಿಯನ್‌ಗಳ ಸಂಘಟನೆಯಾಗಿದ್ದು, ಐದು ದಿನಗಳ ಕೆಲಸದ ವಾರದ ಬೇಡಿಕೆಯನ್ನು ಪರಿಗಣಿಸುವಂತೆ ಸಚಿವೆಯನ್ನು ಒತ್ತಾಯಿಸಿದೆ. ʻಬ್ಯಾಂಕ್ ಉದ್ಯೋಗಿಗಳ ಮೇಲಿನ ಕೆಲಸದ ಒತ್ತಡದ ಬಗ್ಗೆ ನಿಮಗೆ ತಿಳಿದಿದೆ. ಹಾಗಾಗಿ ಶನಿವಾರಗಳನ್ನು ರಜೆ ಎಂದು ಘೋಷಿಸಬ ಹುದುʼ ಎಂದು ಪತ್ರದಲ್ಲಿ ತಿಳಿಸಿದೆ.
ʻ2015 ರ ಒಪ್ಪಂದದಂತೆ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳನ್ನು ರಜಾ ದಿನವಾಗಿ ಒಪ್ಪಿಗೆ ನೀಡಲಾಯಿತು. ಉಳಿದ ಶನಿವಾರಗಳನ್ನು ಕೂಡ ರಜೆಯೆಂದು ಘೋಷಿಸಬೇಕಿದೆ,ʼ ಎಂದು ಫೋರಂ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪೋಸ್ಟ್ ನಲ್ಲಿ ಕೋರಿದೆ.
ಪ್ರಸ್ತುತ, ದೇಶಾದ್ಯಂತ ತಿಂಗಳಿನ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕುಗಳು ಮುಚ್ಚಿರುತ್ತವೆ.