ಬಾಂಗ್ಲಾದೇಶ | ಮಾಜಿ ಪ್ರಧಾನಿ ಹಸೀನಾ, ಇತರ 9 ಜನರ ವಿರುದ್ಧ ತನಿಖೆ ಆರಂಭ
x
ಮಾಜಿ ಪ್ರಧಾನಿ ಶೇಖ್ ಹಸೀನಾ

ಬಾಂಗ್ಲಾದೇಶ | ಮಾಜಿ ಪ್ರಧಾನಿ ಹಸೀನಾ, ಇತರ 9 ಜನರ ವಿರುದ್ಧ ತನಿಖೆ ಆರಂಭ

ತಾರತಮ್ಯ ವಿರೋಧಿ ಆಂದೋಲನದ ಸಂದರ್ಭದಲ್ಲಿ ಹತ್ಯೆಗೀಡಾದ 9 ನೇ ತರಗತಿ ವಿದ್ಯಾರ್ಥಿ ಆರಿಫ್ ಅಹ್ಮದ್ ಸಿಯಾಮ್ ಅವರ ತಂದೆ ಬುಲ್ಬುಲ್ ಕಬೀರ್ ಅವರು ಅರ್ಜಿ ಸಲ್ಲಿಸಿದ್ದಾರೆ.


Click the Play button to hear this message in audio format

ಜುಲೈ 2024ರಲ್ಲಿ ನಡೆದ ಮೀಸಲಾತಿ ವಿರೋಧಿ ವಿದ್ಯಾರ್ಥಿ ಸಂಘಟನೆಗಳ ಹಿಂಸಾತ್ಮಕ ಹೋರಾಟದಲ್ಲಿ ವ್ಯಕ್ತಿಯೊಬ್ಬನ ಹತ್ಯೆ ಹಾಗೂ ಮಾನವೀಯತೆಯ ವಿರುದ್ಧದ ಅಪರಾಧಗಳ ಆರೋಪದ ಮೇಲೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಮತ್ತು ಇತರ ಒಂಬತ್ತು ಜನರ ವಿರುದ್ಧ ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ ತನಿಖೆಯನ್ನು ಪ್ರಾರಂಭಿಸಿದೆ.

ಮಾಜಿ ಪ್ರಧಾನಿ ಶೇಖ್ ಹಸೀನಾ, ಅವಾಮಿ ಲೀಗ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಮತ್ತು ರಸ್ತೆ ಸಾರಿಗೆ ಮತ್ತು ಸೇತುವೆಗಳ ಮಾಜಿ ಸಚಿವ ಒಬೈದುಲ್ ಕ್ವಾಡರ್, ಮಾಜಿ ಗೃಹ ಸಚಿವ ಅಸಾದುಝಮಾನ್ ಖಾನ್ ಕಮಾಲ್ ಮತ್ತು ಪಕ್ಷದೊಳಗಿನ ಹಲವಾರು ಪ್ರಮುಖ ವ್ಯಕ್ತಿಗಳ ವಿರುದ್ಧ ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯ ತನಿಖಾ ಸಂಸ್ಥೆಗೆ ಬುಧವಾರ ದೂರು ನೀಡಿದ್ದಾರೆ.

ಟ್ರಿಬ್ಯೂನಲ್ ತನಿಖೆಯನ್ನು ಪ್ರಾರಂಭಿಸಿದೆ ಎಂದು ದೂರುದಾರರ ವಕೀಲ ಗಾಜಿ ಎಂಎಚ್ ತಮೀಮ್ ಗುರುವಾರ ದೃಢಪಡಿಸಿದ್ದಾರೆ ಎಂದು ದಿ ಢಾಕಾ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ. ತನಿಖಾ ಸಂಸ್ಥೆ ಬುಧವಾರ ರಾತ್ರಿಯೇ ತನಿಖೆ ಆರಂಭಿಸಿದೆ ಎಂದು ಅವರು ಹೇಳಿದ್ದಾರೆ. ಹಸೀನಾ ನೇತೃತ್ವದ ಅವಾಮಿ ಲೀಗ್ ಮತ್ತು ಅದರ ಅಂಗಸಂಸ್ಥೆಗಳ ಹೆಸರನ್ನು ಸಹ ಅರ್ಜಿಯಲ್ಲಿ ಹೆಸರಿಸಲಾಗಿದೆ.

ಮೀಸಲಾತಿ ವಿರೋಧಿಆಂದೋಲನದ ಸಂದರ್ಭದಲ್ಲಿ ಹತ್ಯೆಗೀಡಾದ 9 ನೇ ತರಗತಿ ವಿದ್ಯಾರ್ಥಿ ಆರಿಫ್ ಅಹ್ಮದ್ ಸಿಯಾಮ್ ಅವರ ತಂದೆ ಬುಲ್ಬುಲ್ ಕಬೀರ್ ಅವರು ಅರ್ಜಿ ಸಲ್ಲಿಸಿದ್ದಾರೆ. ಕಬೀರ್ ಅವರ ಅರ್ಜಿಯು ಹಸೀನಾ ಮತ್ತು ಇತರರು ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲೆ ಹಿಂಸಾತ್ಮಕ ದಮನವನ್ನು ಆಯೋಜಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದರ ಪರಿಣಾಮವಾಗಿ ವ್ಯಾಪಕ ಸಾವುನೋವುಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಜುಲೈ 1 ರಿಂದ ಆಗಸ್ಟ್ 5 ರವರೆಗಿನ ಅವಧಿಯಲ್ಲಿ ನಡೆದ ಕೊಲೆಗಳನ್ನು ಅಂತರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯು ವಿಚಾರಣೆಗೆ ಒಳಪಡಿಸುತ್ತದೆ ಎಂದು ಮಧ್ಯಂತರ ಸರ್ಕಾರ ಹೇಳಿದ ದಿನದಂದು ದೂರು ಬಂದಿದೆ. ಪ್ರತ್ಯೇಕವಾಗಿ 2015 ರಲ್ಲಿ ವಕೀಲರನ್ನು ಅಪಹರಿಸಿದ ಆರೋಪದ ಮೇಲೆ ಹಸೀನಾ ಮತ್ತು ಅವರ ಸಂಪುಟದ ಮಾಜಿ ಸಚಿವರು ಸೇರಿದಂತೆ ಹಲವರ ವಿರುದ್ಧ ಬುಧವಾರ ಬಲವಂತದ ನಾಪತ್ತೆ ಪ್ರಕರಣವನ್ನು ದಾಖಲಿಸಲಾಗಿದೆ.

ಮಂಗಳವಾರ ಹಸೀನಾ ಮತ್ತು ಇತರ ಆರು ಮಂದಿಯ ವಿರುದ್ಧ ಕಳೆದ ತಿಂಗಳ ಹಿಂಸಾತ್ಮಕ ಘರ್ಷಣೆಯ ಸಮಯದಲ್ಲಿ ಕಿರಾಣಿ ಅಂಗಡಿಯ ಮಾಲೀಕನ ಸಾವಿನ ಬಗ್ಗೆ ಕೊಲೆ ಪ್ರಕರಣವನ್ನು ದಾಖಲಿಸಲಾಗಿತ್ತು. ಅದು ಅವರ ಸರ್ಕಾರದ ಪತನಕ್ಕೆ ಕಾರಣವಾಯಿತು.ಈ ಮಧ್ಯೆ ಜುಲೈ 19 ರಂದು ಮೀಸಲಾತಿ ವಿರೋಧಿ ಪ್ರತಿಭಟನೆಯ ವೇಳೆ ರಾಜಧಾನಿಯ ಮೊಹಮ್ಮದ್ಪುರ ಪ್ರದೇಶದಲ್ಲಿ ಪೊಲೀಸ್ ಗೋಲಿಬಾರ್ನಲ್ಲಿ ಕಿರಾಣಿ ಅಂಗಡಿ ಮಾಲೀಕ ಅಬು ಸಯೀದ್ ಸಾವನ್ನಪ್ಪಿದ ಕುರಿತು ಹಸೀನಾ ಮತ್ತು ಇತರ ಆರು ಮಂದಿ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖಾ ವರದಿಯನ್ನು ಸೆಪ್ಟೆಂಬರ್ 15 ರೊಳಗೆ ಸಲ್ಲಿಸುವಂತೆ ಢಾಕಾ ನ್ಯಾಯಾಲಯ ಗುರುವಾರ ಪೊಲೀಸರಿಗೆ ಸೂಚಿಸಿದೆ.

ಮೀಸಲಾತಿ ವಿರೋಧಿ ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆಗಳು ಆಗಸ್ಟ್ ಆರಂಭದಲ್ಲಿ ಸರ್ಕಾರವನ್ನು ಉರುಳಿಸುವ ಚಳುವಳಿಯಾಗಿ ವಿಕಸನಗೊಂಡಿತು. ಆಗಸ್ಟ್ 5 ರಂದು ಹಸೀನಾ ಸರ್ಕಾರದ ಪತನದ ನಂತರ ದೇಶಾದ್ಯಂತ ಭುಗಿಲೆದ್ದ ಹಿಂಸಾಚಾರದ ಘಟನೆಗಳಲ್ಲಿ ಬಾಂಗ್ಲಾದೇಶದಲ್ಲಿ 230 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಮೂರು ವಾರಗಳ ಹಿಂಸಾಚಾರದಲ್ಲಿ ಸತ್ತವರ ಸಂಖ್ಯೆ 560 ಕ್ಕೆ ತಲುಪಿದೆ.

ಹಸೀನಾ ಅವರ ರಾಜೀನಾಮೆಯ ನಂತರ ದೇಶದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ನೇತೃತ್ವದ ಉಸ್ತುವಾರಿ ಸರ್ಕಾರವನ್ನು ರಚಿಸಲಾಯಿತು. ಆಡಳಿತಾತ್ಮಕ ಮತ್ತು ರಾಜಕೀಯ ಸುಧಾರಣೆಗಳನ್ನು ಪರಿಹರಿಸಲು ಮತ್ತು ಹಿಂಸಾಚಾರದಲ್ಲಿ ಭಾಗಿಯಾದವರನ್ನು ಹೊಣೆಗಾರರನ್ನಾಗಿ ಮಾಡಲು ಭರವಸೆ ನೀಡಿದರು.

Read More
Next Story