
ನ್ಯಾ. ಬಿ. ಸುದರ್ಶನ್ ರೆಡ್ಡಿ: ರಾಜಕೀಯವನ್ನು ನ್ಯಾಯಾಂಗದಿಂದ ದೂರವಿಟ್ಟ ಅಪರೂಪದ ನ್ಯಾಯಮೂರ್ತಿ
ನ್ಯಾಯ ನಿಯಮದಲ್ಲಿ ಅಚಲವಾದ ನಿಷ್ಠೆಯನ್ನು ಹೊಂದಿರುವ ನ್ಯಾ.ಸುದರ್ಶನ್ ರೆಡ್ಡಿ ಅವರು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಸದಾ ಎತ್ತಿಹಿಡಿದವರು. ಸಾಲ್ವಾ ಜುದಮ್ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಅವರು ನೀಡಿದ ತೀರ್ಪುಗಳು ಐತಿಹಾಸಿಕವಾದವು.
ಉಪರಾಷ್ಟ್ರಪತಿ ಸ್ಥಾನಕ್ಕೆ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಅವರನ್ನು ಇಂಡಿಯಾ ಒಕ್ಕೂಟ ತಮ್ಮ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡುವ ಮೂಲಕ ಶ್ಲಾಘನೀಯ ಕೆಲಸ ಮಾಡಿದೆ.
ಯಾವುದೇ ದೃಷ್ಟಿಕೋನದಿಂದ ಪರಿಗಣಿಸಿದರೂ ಕೂಡ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ ಅವರು ಈ ಸಾಂವಿಧಾನಿಕ ಸ್ಥಾನಕ್ಕೆ ಸಂಪೂರ್ಣ ಅರ್ಹರಾಗಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ. ಒಬ್ಬ ನ್ಯಾಯಾಧೀಶರಾಗಿ ನ್ಯಾಯ ನಿಯಮಕ್ಕೆ ಅವರ ಬದ್ಧತೆ ಗಮನಾರ್ಹವಾದುದು. ಭಾರತೀಯ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯಲು ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ.
ಭಾರತದ ಸಂವಿಧಾನದ ಆಧಾರಸ್ತಂಭಗಳಲ್ಲಿ, ನ್ಯಾಯಾಂಗದ ಪಾತ್ರ ನಿರ್ಣಾಯಕವಾದುದು. ನ್ಯಾಯಾಧೀಶರಲ್ಲಿ ಕೆಲವರು ತಮ್ಮ ಅಚಲ ನಿಷ್ಠೆ, ವಿಶಿಷ್ಟ ದೃಷ್ಟಿಕೋನ ಮತ್ತು ಪ್ರಜಾಸತ್ತಾತ್ಮಕ ಸಿದ್ಧಾಂತಗಳಲ್ಲಿ ನಂಬಿಕೆಯನ್ನಿಡುವ ಮೂಲಕ ಇತಿಹಾಸದಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಅವರು ಅಂತಹ ಕೆಲವೇ ಕೆಲವು ಅಗ್ರಮಾನ್ಯರಲ್ಲಿ ಒಬ್ಬರು ಎನ್ನುವುದು ನಿಶ್ಚಿತ.
ಕಾನೂನು ಶಿಕ್ಷಣದ ಪಯಣ
1948ರಲ್ಲಿ ಜನಿಸಿದ ನ್ಯಾ| ಸುದರ್ಶನ್ ರೆಡ್ಡಿ ಅವರು ತಮ್ಮ ಕಾನೂನು ಶಿಕ್ಷಣವನ್ನು ಪಡೆದಿದ್ದು ಹೈದರಾಬಾದ್ನಲ್ಲಿ. ಕಾನೂನು ಕಾಲೇಜಿನಿಂದ ಕಾನೂನು ಪದವಿ ಗಳಿಸಿದರು. ವಿದ್ಯಾರ್ಥಿ ದಿನಗಳಲ್ಲಿಯೇ ಅವರು ಕಾನೂನು ವ್ಯವಸ್ಥೆಗೆ ದೃಢವಾದ ಬದ್ಧತೆ ತೋರಿಸಿದವರು. ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಆಳವಾದ ತಿಳುವಳಿಕೆ ಮತ್ತು ಸಾಮಾಜಿಕ ನ್ಯಾಯಕ್ಕೆ ತಮ್ಮನ್ನೇ ಸಮರ್ಪಿಸಿಕೊಂಡಿರುವುದು ಅವರ ಅಗ್ಗಳಿಕೆ.
ಅವರು ತಮ್ಮ ಕಾನೂನು ವೃತ್ತಿಜೀವನವನ್ನು ಆರಂಭಿಸಿದ್ದು 1971ರಲ್ಲಿ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಎರಡರಲ್ಲೂ ಸಾಂವಿಧಾನಿಕ ವಿಚಾರಗಳ ಬಗ್ಗೆ ವಕಾಲತ್ತು ಆರಂಭಿಸಿದರು. ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳು ಮತ್ತು ಸಾಂವಿಧಾನಿಕ ವಿಚಾರಗಳಲ್ಲಿ ಅವರು ಮಾಡುತ್ತಿದ್ದ ನಿರ್ಭೀತ ವಾದಗಳು ಅವರಿಗೆ ಬಹುಬೇಗ ಮಾನ್ಯತೆಯನ್ನು ತಂದುಕೊಟ್ಟವು.
1995ರಲ್ಲಿ ಅವರನ್ನು ಆಂಧ್ರ ಪ್ರದೇಶ ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕ ಮಾಡಲಾಯಿತು. ಆ ಬಳಿಕ 2007ರಲ್ಲಿ ಅವರು ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡರು. ಅವರು ನೀಡುತ್ತಿದ್ದ ತೀರ್ಪುಗಳು ಸಂವಿಧಾನದ ಗೌರವ, ಜನರ ಹಕ್ಕುಗಳ ರಕ್ಷಣೆ ಮತ್ತು ಪಾರದರ್ಶಕ ಆಡಳಿತಕ್ಕೆ ಬಲವಾದ ಬದ್ಧತೆಗೆ ಸಾಕ್ಷಿಯಾಗಿದ್ದವು.
ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ ಅವರು ಸಾಮಾನ್ಯ ಜನರಿಗೆ ನ್ಯಾಯ ದೊರೆಯುವಂತೆ ಮಾಡುವಲ್ಲಿ ಅನೇಕ ಉಪಕ್ರಮಗಳನ್ನು ಕೈಗೊಂಡರು.
ರಾಜಕೀಯ ಪ್ರಭಾವದಿಂದ ದೂರ
ನ್ಯಾಯಾಂಗವು ಯಾವತ್ತೂ ರಾಜಕೀಯ ಪ್ರಭಾವದಿಂದ ದೂರವಿರಬೇಕು ಎಂದು ನಂಬಿದ್ದ ನ್ಯಾಯಮೂರ್ತಿ ರೆಡ್ಡಿಯವರು ತಮ್ಮ ವೃತ್ತಿಜೀವನದ ಉದ್ದಕ್ಕೂ ಅದನ್ನು ಕಾಯ್ದುಕೊಂಡು ಬಂದಿದ್ದು ಹೆಗ್ಗಳಿಕೆಯ ಮಾತಾಗಿದೆ. ಆ ನಿಟ್ಟಿನಲ್ಲಿ ಅವರು ನೀಡಿದ ಐತಿಹಾಸಿಕ ತೀರ್ಪುಗಳು ಮುಂದಿನ ತಲೆಮಾರಿನ ಕಾನೂನು ವೃತ್ತಿಪರರಿಗೆ ಯಾವತ್ತೂ ಮಾರ್ಗದರ್ಶಿಯಾಗಿವೆ. ರಾಷ್ಟ್ರೀಯ ಮಹತ್ವದ ವಿಚಾರಗಳ ಬಗ್ಗೆ ಅವರು ನೀಡಿದ ಆದೇಶಗಳು ಸಮಾಜದ ಮೇಲೆ ಬೀರಿದ ಪರಿಣಾಮ ದೊಡ್ಡದು.
ಇಂದಿನ ರಾಜಕೀಯ ಅಸ್ಥಿರ ವಾತಾವರಣದಲ್ಲಿ, ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ ಅವರಂತಹ ವ್ಯಕ್ತಿಯನ್ನು ನಾಮನಿರ್ದೇಶನ ಮಾಡುವುದು ನೈತಿಕತೆ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿದಂತೆ. ಇಂಡಿಯಾ ಒಕ್ಕೂಟದ ಈ ನಿರ್ಧಾರವು ನ್ಯಾಯಾಂಗದ ಸಮಗ್ರತೆ ಮತ್ತು ಸಾಂವಿಧಾನಿಕ ಹುದ್ದೆಗಳ ಘನತೆಯ ಮೇಲಿರುವ ಅವರ ಗೌರವದ ದ್ಯೋತಕ.
ಪ್ರಜಾಪ್ರಭುತ್ವಕ್ಕೆ ನ್ಯಾಯಮೂರ್ತಿ ಸುದರ್ಶನ ರೆಡ್ಡಿ ಅವರ ಬದ್ಧತೆಯು ಪ್ರಶಂಸನೀಯ ಎಂದರೆ ಕ್ಲೀಷೆಯಾದೀತು. ಭಾರತದ ಉಪರಾಷ್ಟ್ರಪತಿ ಹುದ್ದೆಯಲ್ಲಿ ಅವರ ಉಪಸ್ಥಿತಿಯು ಸಂವಿಧಾನದ ಸ್ಥಾನಮಾನವನ್ನು ಹೆಚ್ಚಿಸುತ್ತದೆ ಮತ್ತು ನೈತಿಕ ಮೌಲ್ಯಗಳನ್ನು ಎತ್ತಿಹಿಡಿಯುತ್ತದೆ. ಈ ಪಾತ್ರವು, ನ್ಯಾಯಕ್ಕಾಗಿ ಸಮರ್ಪಿತವಾದ ಅವರ ಜೀವನಕ್ಕೆ ನೀಡುವ ಸೂಕ್ತ ಗೌರವವಾಗಿದೆ.
ಐತಿಹಾಸಿಕ ಸಾಲ್ವಾ ಜುದುಮ್ ತೀರ್ಪು
ನಿರ್ದಿಷ್ಟವಾಗಿ ಹೇಳುವುದಾದರೆ, ಸಾಲ್ವಾ ಜುದುಮ್ ಪ್ರಕರಣದಲ್ಲಿ ಅವರ ಐತಿಹಾಸಿಕ ತೀರ್ಪು ಭಾರತೀಯ ನ್ಯಾಯಾಂಗ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಅವರ ಆ ತೀರ್ಪು ನಾಗರಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸುವಲ್ಲಿ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಛತ್ತೀಸ್ಗಢ ರಾಜ್ಯದ ನಂದಿನಿ ಸುಂದರ್ ಮತ್ತು ಇತರರು ವಿರುದ್ಧದ ಪ್ರಕರಣದಲ್ಲಿ, ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಅವರು ನ್ಯಾಯಮೂರ್ತಿ ಎಸ್.ಎಸ್. ನಿಜ್ಜಾರ್ ಅವರ ಜೊತೆ ಸೇರಿ ಜುಲೈ 5, 2011 ರಂದು ನೀಡಿದ ತೀರ್ಪು ಐತಿಹಾಸಿಕವಾಗಿತ್ತು. ಈ ತೀರ್ಪು ಒಂದು ಇಡೀ ಪುಸ್ತಕ ಪ್ರಕಟಣೆಗೆ ಅರ್ಹವಾಗಿದೆ (ಲೇಖಕರು ಇದನ್ನು ಅನುವಾದಿಸುವ ಸುಯೋಗ ಪಡೆದಿದ್ದರು ಮತ್ತು ಇದನ್ನು ಮಲುಪು ಪ್ರಕಾಶನ ಪ್ರಕಟಿಸಿದೆ).
ಮಾವೋವಾದಿಗಳ ವಿರುದ್ಧ ಹೋರಾಡಲು ಛತ್ತೀಸ್ಗಢ ಸರ್ಕಾರವು ಸಾಲ್ವಾ ಜುದುಮ್ ಹೆಸರಿನಲ್ಲಿ ಬುಡಕಟ್ಟು ಯುವಕರಿಗೆ ಶಸ್ತ್ರಾಸ್ತ್ರಗಳನ್ನು ನೀಡಿದ ಪ್ರಕರಣ ಇದಾಗಿತ್ತು. ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಬುಡಕಟ್ಟು ಸಮುದಾಯದ ಯುವಕರನ್ನು ಒಳಗೊಂಡ ವಿಶೇಷ ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಳ್ಳುವ ಸರ್ಕಾರದ ಬಂಡಾಯ ವಿರೋಧಿ ತಂತ್ರದ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಪರಿಶೀಲಿಸಿತು.
ತೀರ್ಪಿನ ಪ್ರಮುಖ ಅಂಶಗಳು ಹೀಗಿವೆ
ಸಾಲ್ವಾ ಜುದುಮ್ ಸಂಪೂರ್ಣ ಅಸಂವಿಧಾನಿಕ ಎಂದು ಘೋಷಿಸಲಾಯಿತು: ಮಾವೋವಾದಿಗಳ ವಿರುದ್ಧ ಹೋರಾಡಲು ಬುಡಕಟ್ಟು ನಾಗರಿಕರಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸುವ ಸರ್ಕಾರದ ಕ್ರಮ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಹೇಳಿತು.
ನಾಗರಿಕರಿಗೆ ಶಸ್ತ್ರಾಸ್ತ್ರ ನೀಡುವುದು ಅನೈತಿಕ ಮತ್ತು ಅಪಾಯಕಾರಿ: ತರಬೇತಿಯೇ ಇಲ್ಲದ ಗ್ರಾಮಸ್ಥರನ್ನು ವಿಶೇಷ ಪೊಲೀಸ್ ಅಧಿಕಾರಿಗಳಾಗಿ ನೇಮಿಸಿ ಅವರಿಗೆ ಶಸ್ತ್ರಾಸ್ತ್ರಗಳನ್ನು ನೀಡುವುದು ಅತ್ಯಂತ ಅನೈತಿಕ ಮತ್ತು ಅಪಾಯಕಾರಿ ಎಂದು ತೀರ್ಮಾನಿಸಲಾಯಿತು.
ಮೂಲಭೂತ ಹಕ್ಕುಗಳ ಉಲ್ಲಂಘನೆ: ಇಂತಹ ನೀತಿಯು ಸಂವಿಧಾನದ 14ನೇ ವಿಧಿ (ಸಮಾನತೆಯ ಹಕ್ಕು) ಮತ್ತು 21ನೇ ವಿಧಿ (ಜೀವನದ ಹಕ್ಕು)ಯ ಉಲ್ಲಂಘನೆ ಎಂದು ಪರಿಗಣಿಸಲಾಯಿತು.
ತಕ್ಷಣ ವಿಸರ್ಜಿಸಲು ಆದೇಶ: ಸಾಲ್ವಾ ಜುದುಮ್ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸಲು ಮತ್ತು ನಾಗರಿಕರಿಗೆ ನೀಡಲಾದ ಶಸ್ತ್ರಾಸ್ತ್ರಗಳನ್ನು ಹಿಂಪಡೆಯಬೇಕು ಎಂದು ನ್ಯಾಯಾಲಯ ಆದೇಶಿಸಿತು.
ನಾಗರಿಕರ ಸುರಕ್ಷತೆ ಖಚಿತಪಡಿಸಿ
ಮಾವೋವಾದಿ ಸಮಸ್ಯೆಯನ್ನು ಕಾನೂನುಬದ್ಧ ಮತ್ತು ಸುರಕ್ಷಿತ ವಿಧಾನಗಳ ಮೂಲಕ ಸರ್ಕಾರ ಬಗೆಹರಿಸಬೇಕು, ನಾಗರಿಕರನ್ನೇ ಹೋರಾಟಗಾರರನ್ನಾಗಿ ಪರಿವರ್ತಿಸುವುದರ ಮೂಲಕ ಅಲ್ಲ ಎಂದು ತೀರ್ಪು ಪ್ರತಿಪಾದಿಸಿತು.
ಇಂತಹುದೊಂದು ಐತಿಹಾಸಿಕ ತೀರ್ಪಿನ ಮೂಲಕ, ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ ಅವರು ನಾಗರಿಕರ ಹಕ್ಕುಗಳ ರಕ್ಷಣೆಯ ಕುರಿತು ಸರ್ಕಾರಕ್ಕೆ ಸ್ಪಷ್ಟ ಮತ್ತು ಪ್ರಬಲ ಸಂದೇಶವನ್ನು ರವಾನಿಸಿದರು. ಇದು ಮಾನವ ಹಕ್ಕುಗಳು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸುವಲ್ಲಿ ಒಂದು ಮಹತ್ವದ ಹೆಜ್ಜೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಈ ತೀರ್ಪು ಭಾರತೀಯ ಕಾನೂನು ಇತಿಹಾಸದಲ್ಲಿ "ನ್ಯಾಯಾಂಗ ಮಾನವತಾವಾದ"ಕ್ಕೆ ಉತ್ತಮ ಉದಾಹರಣೆಯಾಗಿದೆ.
'ಸಂವಿಧಾನದ ಪೀಠಿಕೆ' (Preamble of the Constitution -ಲೇಖಕರು ಬರೆದ ಪುಸ್ತಕ) ಎಂಬ ಪುಸ್ತಕಕ್ಕೆ ಸಂಬಂಧಿಸಿದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ ಅವರು, ಭಾರತದ ಸಂವಿಧಾನವು ನಿಜವಾಗಿಯೂ ಭಾರತಕ್ಕೆ ಸೇರಿದ್ದಲ್ಲ ಎಂದು ವಾದಿಸುವ ಕೆಲವು ಹಿರಿಯ ವ್ಯಕ್ತಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು ಎಂಬುದನ್ನು ನೆನಪು ಮಾಡಿಕೊಳ್ಳಬೇಕು.
ಸಂವಿಧಾನ ರಚನಾ ಸಭೆಯು ಸಂವಿಧಾನವನ್ನು ರಚಿಸಿದ ದಿನದಂದೂ, ಆರ್ಗನೈಸರ್ ಪತ್ರಿಕೆಯ ಸಂಪಾದಕೀಯವು ತ್ರಿವರ್ಣ ಧ್ವಜ ಮತ್ತು ಸಂವಿಧಾನವನ್ನು ಮಾನ್ಯಮಾಡಲು ಬಹಿರಂಗವಾಗಿ ನಿರಾಕರಿಸಿತ್ತು. ಅದನ್ನು ಒಪ್ಪಿಕೊಳ್ಳುವುದೂ ಇಲ್ಲ ಮತ್ತು ಅನುಸರಿಸುವುದೂ ಇಲ್ಲ ಎಂದು ಎಂದು ಘೋಷಿಸಿದ್ದರು ಎಂಬುದನ್ನು ಅವರು ಉಲ್ಲೇಖಿಸಿದರು.
ಅಂಬೇಡ್ಕರ್ ವಿಚಾರಧಾರೆ
ಬುದ್ಧಿಜೀವಿಗಳನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ರೆಡ್ಡಿ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಪ್ರತಿಕ್ರಿಯೆಯನ್ನು ಪ್ರಸ್ತಾಪಿಸಿದ್ದರು. ಭಾರತದ ಸಂವಿಧಾನವು ಜಗತ್ತಿನ ಅನೇಕ ಮೂಲಗಳಿಂದ ಎರವಲು ಪಡೆದಿದ್ದರೆ, ಅದರಲ್ಲಿ ಯಾವುದೇ ನಾಚಿಕೆಪಡುವಂತಹುದು ಏನೂ ಇಲ್ಲ ಎಂದು ಅಂಬೇಡ್ಕರ್ ಹೆಮ್ಮೆಯಿಂದ ಹೇಳಿದ್ದರು. "ಒಳ್ಳೆಯ ವಿಚಾರಗಳು ಎಲ್ಲಿಂದ ಬಂದರೂ ಅವುಗಳನ್ನು ಅಳವಡಿಸಿಕೊಳ್ಳುವುದು ವಿವೇಕಯುತ," ಎಂದು ಅವರು ಹೇಳಿದ್ದನ್ನು ನಮಗೆ ಮನವರಿಕೆ ಮಾಡಿಕೊಟ್ಟಿದ್ದರು.
ಸಂವಿಧಾನ ಜಾರಿಗೆ ಬರುವುದಕ್ಕೂ ಮೊದಲು, ಜವಾಹರಲಾಲ್ ನೆಹರು ಅವರು ಪ್ರಸ್ತಾವನೆಯ ಮುನ್ನುಡಿಯಾದ objectives resolution (ಉದ್ದೇಶಿತ ನಿರ್ಣಯ)ವನ್ನು ಸಿದ್ಧಪಡಿಸಿದ್ದರು. ರಾಜ್ಯಗಳ ಒಕ್ಕೂಟ ಹೇಗಿರಬೇಕು ಎಂಬ ಸ್ಪಷ್ಟ ಕಲ್ಪನೆ ಅವರಿಗಿತ್ತು. ಇದರಲ್ಲಿ ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ನೀಡುವ ಮತ್ತು ಕೇಂದ್ರ ಸರ್ಕಾರಕ್ಕೆ ಅತ್ಯಗತ್ಯ ಅಧಿಕಾರಗಳನ್ನು ಮಾತ್ರ ಉಳಿಸಿಕೊಳ್ಳುವುದಕ್ಕೆ ಅವರು ಒತ್ತು ನೀಡಿದ್ದರು. ವಿಭಜನೆಯ ಯೋಜನೆಯನ್ನೂ ಒಳಗೊಂಡಂತೆ ಈ ನಿರ್ಣಯವನ್ನು ಏಪ್ರಿಲ್ 31, 1946 ರಂದು ಮಂಡಿಸಲಾಗಿತ್ತು ಎಂಬುದನ್ನು ನ್ಯಾ| ರೆಡ್ಡಿ ಅವರು ವಿವರಿಸಿದ್ದರು.
ನೆಹರು ಅವರ ಕೊಡುಗೆಯನ್ನು ಕಡೆಗಣಿಸುವ ವಿಮರ್ಶಕರನ್ನು ನ್ಯಾ.| ರೆಡ್ಡಿ ಪ್ರಶ್ನಿಸುತ್ತಾರೆ. ಉಪನಿಷತ್ತು, ಹಿಮಾಲಯ, ಗಂಗಾನದಿ, ಆರ್ಯರು ಮತ್ತು ಮೊಹೆಂಜೊ-ದಾರೋ ಬಗ್ಗೆ ವಿವರಿಸುವ 'ದಿ ಡಿಸ್ಕವರಿ ಆಫ್ ಇಂಡಿಯಾ'ದಂತಹ ಅವರ ಕೃತಿಯಲ್ಲಿ ಕಂಡುಬರುವ ಜ್ಞಾನದ ಆಳವನ್ನು ವಿಮರ್ಶಕರು ಅರ್ಥಮಾಡಿಕೊಳ್ಳಲು ಸಾಧ್ಯವೇ ಎನ್ನುವ ಮೂಲಕ ನೆಹರು ಅವರನ್ನು ಅನ್ಯಾಯವಾಗಿ ದೂಷಿಸುವ ಮತ್ತು ಜ್ಞಾನಿಗಳಂತೆ ನಟಿಸುವವರಿಗೆ ಸವಾಲು ಹಾಕುತ್ತಾರೆ.
ಮಹಾತ್ಮ ಗಾಂಧಿ ಚಿಂತನೆ
ಮಹಾತ್ಮ ಗಾಂಧಿಯವರನ್ನು ಉಲ್ಲೇಖಿಸುವ ನ್ಯಾ ರೆಡ್ಡಿಯವರು, "ಹೊಸ ವಿಚಾರಗಳು ಎಲ್ಲಿಂದಾದರೂ ಬರಲಿ, ಅದಕ್ಕಾಗಿ ನಾನು ನನ್ನ ಎಲ್ಲ ಕಿಟಕಿಗಳನ್ನು ತೆರೆದಿಡುತ್ತೇನೆ" ಎಂದು ಹೇಳಿದ್ದಾರೆ.
ಇಷ್ಟುಮಾತ್ರವಲ್ಲದೆ, ಕೆಲವರು ಅಂಬೇಡ್ಕರ್ ಮತ್ತು ಗಾಂಧೀಜಿಯವರ ನಡುವೆ ಕೃತಕ ಸಂಘರ್ಷವನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಾರೆ ಮತ್ತು ಅಂತಹ ತಪ್ಪು ನಿರೂಪಣೆಗಳಲ್ಲಿ ಸಂತೋಷವನ್ನು ಕಂಡುಕೊಳ್ಳುತ್ತಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಅವರು ನ್ಯಾಯಾಂಗ ನೀತಿ, ಮಾನವ ಹಕ್ಕುಗಳು ಮತ್ತು ಸಾಂವಿಧಾನಿಕ ನೈತಿಕತೆಯ ಸಂಕೇತವಾಗಿದ್ದಾರೆ. ಉಪರಾಷ್ಟ್ರಪತಿ ಹುದ್ದೆಗೆ ಅವರ ನಾಮನಿರ್ದೇಶನವು ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಮಾನವೀಯ ಮೌಲ್ಯಗಳನ್ನು ಸಂರಕ್ಷಿಸುವ ಬದ್ಧತೆಗೆ ಸಾಕ್ಷಿಯಾಗಿದೆ.
ಅವರ ನ್ಯಾಯಾಂಗ ವೃತ್ತಿಜೀವನ, ವಿಶೇಷವಾಗಿ ಸಾಲ್ವಾ ಜುದುಮ್ ತೀರ್ಪು, ಪ್ರಜಾಸತ್ತಾತ್ಮಕ ಸಮಾಜದಲ್ಲಿ ಕಾನೂನು ಹೇಗೆ ನ್ಯಾಯ ಮತ್ತು ಸಹಾನುಭೂತಿಗೆ ಒಂದು ಸಾಧನವಾಗಬಹುದು ಎಂಬುದಕ್ಕೆ ಉದಾಹರಣೆಯಾಗಿದೆ,