ಅಯೋಧ್ಯೆ ಅತ್ಯಾಚಾರ: ಬಿಜೆಪಿ, ಎಸ್‌ಪಿ ನಡುವೆ ರಾಜಕೀಯ ಗುದ್ದಾಟ
ಅತ್ಯಾಚಾರ ಆರೋಪಿ ಒಡೆತನದ ಬೇಕರಿಯನ್ನು ಅಧಿಕಾರಿಗಳು ಉರುಳಿಸಿದ್ದಾರೆ. ಸಿಎಂ ಆದಿತ್ಯನಾಥ್, ಆರೋಪಿಗಳ ವಿರುದ್ಧ 'ಬುಲೆಟ್ ಯಾತ್ರೆ'ಯ ಎಚ್ಚರಿಕೆ ನೀಡಿದ್ದಾರೆ; ರಾಜ್ಯ ಸರ್ಕಾರ ಸೋಲಿನ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣವು ಆಡಳಿತಾರೂಢ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವಿನ ರಾಜಕೀಯ ಸಮರಕ್ಕೆ ತಿರುಗಿದೆ. ಪ್ರಮುಖ ಆರೋಪಿ ಸಮಾಜವಾದಿ ಪಕ್ಷ (ಎಸ್‌ಪಿ)ಕ್ಕೆ ಸೇರಿದ್ದಾನೆ.
ಅತ್ಯಾಚಾರದ ಆರೋಪಿಗಳಾದ ಮೊಯಿದ್ ಖಾನ್ ಮತ್ತು ರಾಜು ಖಾನ್ ಅವರನ್ನು ಬಂಧಿಸಿದ ನಂತರ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಸ್ಪಿ ವಿರುದ್ಧ ತೀವ್ರ ವಾಗ್ದಾಳಿ ಆರಂಭಿಸಿದರು. ಭದ್ರಸಾ ಎಸ್‌ಪಿ ಘಟಕದ ನಗರಾಧ್ಯಕ್ಷ ಮೊಯಿದ್ ಖಾನ್ ಅವರು ಪಕ್ಷದ ಸಂಸದ ಅವಧೇಶ್ ಪ್ರಸಾದ್‌ಗೆ ನಿಕಟವರ್ತಿ ಎಂದು ಹೇಳಲಾಗುತ್ತದೆ. ಅಯೋಧ್ಯೆ / ಫೈಜಾಬಾದ್‌ನಿಂದ ಲೋಕಸಭೆ ಕದನದಲ್ಲಿ ಪ್ರಸಾದ್ ಅವರ ಗೆಲುವು ಬಿಜೆಪಿಯನ್ನು ದಿಗ್ಮೂಢಗೊಳಿಸಿತ್ತು.
ಯುಪಿ ಅಧಿಕಾರಿಗಳು ಮೊಯಿದ್ ಖಾನ್ ಒಡೆತನದ ಬೇಕರಿಯನ್ನು ಉರುಳಿಸಿದ್ದಾರೆ ಮತ್ತು ಈ ಪ್ರದೇಶದಲ್ಲಿರುವ ಅವರ ಇತರ ಆಸ್ತಿಗಳನ್ನು ವಶಪಡಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಇಬ್ಬರ ವಿರುದ್ಧ ತನಿಖೆ ನಡೆಸುವಲ್ಲಿ ವಿಳಂಬ ಮಾಡಿದ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಎಸ್‌ಪಿಯನ್ನು ಗುರಿಯಾಗಿಸಿಕೊಂಡ ಸಿಎಂ, ʻಎಸ್‌ಪಿ ಸದಸ್ಯರು ಮಹಿಳಾ ಸುರಕ್ಷತೆಗೆ ಬೆದರಿಕೆ. ಆರೋಪಿಗಳ ವಿರುದ್ಧ ತಮ್ಮ ಸರ್ಕಾರ ಬುಲೆಟ್ ಯಾತ್ರೆ ನಡೆಸಲಿದೆʼ ಎಂದು ಬೆದರಿಕೆ ಹಾಕಿದ್ದಾರೆ.
ನ್ಯಾಯ ಕೇಳಿದ ಅಖಿಲೇಶ್: ಸಂತ್ರಸ್ತೆಗೆ ನ್ಯಾಯ ಸಿಗಬೇಕು ಎಂದಿರುವ ಎಸ್‌ಪಿ ನಾಯಕ ಅಖಿಲೇಶ್ ಯಾದವ್, ಆರೋಪಿಗಳ ಡಿಎನ್‌ಎ ಪರೀಕ್ಷೆ ಮಾಡಬೇಕೆಂದು ಕೋರಿದರು. ಮುಸ್ಲಿಮರು ಮತ್ತು ಸಮಾಜವಾದಿ ಪಕ್ಷಕ್ಕೆ ಸೇರಿದವರಾಗಿರುವುದರಿಂದ, ಖಾನ್ ಗಳನ್ನು ಗುರಿಯಾಗಿಸಸಿಕೊಳ್ಳಲಾಗಿದೆ ಎಂದು ಹೇಳಿದರು.
ʻತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಬೇಕು. ಆದರೆ, ಡಿಎನ್‌ಎ ಪರೀಕ್ಷೆಯು ಆರೋಪಗಳನ್ನು ಸುಳ್ಳು ಎಂದು ಸಾಬೀತುಪಡಿಸಿದರೆ, ಇದರಲ್ಲಿ ಭಾಗಿಯಾಗಿರುವ ಸರ್ಕಾರಿ ಅಧಿಕಾರಿಗಳನ್ನು ಬಿಡಬಾರದು,ʼ ಎಂದು ಎಸ್ಪಿ ಮುಖ್ಯಸ್ಥ ಅಖಿಲೇಶ್ ಹೇಳಿದ್ದಾರೆ.
ಅವರ ಸಹೋದ್ಯೋಗಿ ಪವನ್ ಪಾಂಡೆ, ʻತಪ್ಪಿತಸ್ಥರಾಗಿದ್ದರೆ, ಅವರಿಗೆ ಶಿಕ್ಷೆಯಾಗಬೇಕು. ಆದರೆ, ಯೋಗಿ ಸರ್ಕಾರ ಅವರ ವಿರುದ್ಧ ವರ್ತಿಸುತ್ತಿರುವ ರೀತಿಯಲ್ಲಿ ಅಲ್ಲ,ʼ ಎಂದು ಮಾಧ್ಯಮಗಳಿಗೆ ತಿಳಿಸಿದರು.
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ತರಾಟೆ: ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಅಖಿಲೇಶ್ ಯಾದವ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ʻಅಪ್ರಾಪ್ತ ವಯಸ್ಕ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ನಿಮ್ಮ ಪಕ್ಷದ ನಾಯಕನ ಮೇಲೆ ಆರೋಪವಿದ್ದರೂ, ನೀವು ಅವನನ್ನು ಸಮರ್ಥಿಸಿಕೊಳ್ಳುತ್ತಿದ್ದೀರಿ,ʼ ಎಂದು ಎನ್ಸಿಪಿಸಿಆರ್ ಅಧ್ಯಕ್ಷೆ ಪ್ರಿಯಾಂಕ್ ಕಾನುಂಗೊ ಅವರು ಎಕ್ಸ್ ನಲ್ಲಿ ಬರೆದಿದ್ದಾರೆ.
ಯುಪಿ ಸರ್ಕಾರದಿಂದ ಪ್ರತೀಕಾರ: ಅಯೋಧ್ಯೆ ಮತ್ತು ಯುಪಿಯ ಇತರೆಡೆಗಳಲ್ಲಿ ಬಿಜೆಪಿಯ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರವು ಪ್ರತೀಕಾರ ತೀರಿಸಿಕೊಳ್ಳುತ್ತಿದೆ. ಎಸ್‌ಪಿಯನ್ನು ಕ್ರಿಮಿನಲ್‌ಗಳ ಪಕ್ಷ ಎಂದು ಬಿಂಬಿಸಲು ಪ್ರಯತ್ನಿಸುತ್ತಿದೆ. ಸಂತ್ರಸ್ತರಿಗೆ ನ್ಯಾಯ ಒದಗಿಸುವ ಬದಲು ಯುಪಿ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಎಸ್‌ಪಿ ನಾಯಕರು ಆರೋಪಿಸಿದ್ದಾರೆ.
ಪೊಲೀಸರ ಪ್ರಕಾರ, ಬೇಕರಿ ಮಾಲೀಕ ಮೊಯಿದ್ ಖಾನ್ ಮತ್ತು ಅವರ ಉದ್ಯೋಗಿ ರಾಜು ಖಾನ್ ಅವರು ಬಾಲಕಿ ಮೇಲೆ ಎರಡೂವರೆ ತಿಂಗಳಿಗೂ ಹೆಚ್ಚು ಕಾಲ ದೌರ್ಜನ್ಯ ಎಸಗಿದ್ದಾರೆ. ಬಾಲಕಿ ಗರ್ಭಿಣಿ ಎಂದು ಪತ್ತೆಯಾದಾಗ ಅತ್ಯಾಚಾರ ಘಟನೆ ಬೆಳಕಿಗೆ ಬಂದಿದೆ. ಮೊಯಿದ್ ಖಾನ್ ಮತ್ತು ರಾಜು ಖಾನ್ ಅವರನ್ನು ಬಂಧಿಸಲಾಗಿದೆ.