ಅಯೋಧ್ಯೆಯಲ್ಲಿ ದಲಿತ ಯುವತಿಯ ಅತ್ಯಾಚಾರ, ಕೊಲೆ: ಮೂವರ ಸೆರೆ
ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಯೋಗಿ ಸರ್ಕಾರವನ್ನು ಪ್ರತಿಪಕ್ಷಗಳು ಟೀಕಿಸಿದರೆ, ಈ ಘಟನೆಯ ಹಿಂದೆ ಎಸ್ಪಿ ಕೈವಾಡ ಎಂದು ಯುಪಿ ಸಿಎಂ ಆರೋಪ ಮಾಡಿದ್ದಾರೆ.
ಅಯೋಧ್ಯೆಯಲ್ಲಿ ದಲಿತ ಯುವತಿಯೊಬ್ಬಳನ್ನು ಅತ್ಯಾಚಾರ ಮಾಡಿ ಭೀಕರವಾಗಿ ಕೊಲೆ ನಡೆಸಿರುವ ವಿಷಯ ರಾಜಕೀಯ ಆರೋಪ- ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಪೊಲೀಸರು ಸೋಮವಾರ (ಫೆಬ್ರವರಿ 3) ಮೂವರು ಶಂಕಿತರನ್ನು ಬಂಧಿಸಿದ್ದರೂ ಎಸ್‌ಪಿ ಮತ್ತು ಆಡಳಿತಾರೂಢ ಬಿಜೆಪಿ ನಡುವೆ ವಾಕ್ಸಮರ ನಡೆದಿದೆ.
ಹರಿ ರಾಮ್ ಕೋರಿ, ವಿಜಯ್ ಸಾಹು ಮತ್ತು ದಿಗ್ವಿಜಯ್ ಸಿಂಗ್ ಎಂಬ ಮೂವರು ಪ್ರಕರಣದಲ್ಲಿ ಬಂಧಿತರಾದವರು. ಯುವತಿಯನ್ನು ಬಲಾತ್ಕರಿಸಿರುವ ಈ ಮೂವರು ಭೀಕರವಾಗಿ ಕೊಲೆ ಮಾಡಿ ಮೃತದೇಹವನ್ನು ಕಾಲುವೆಯೊಂದರಲ್ಲಿ ಎಸೆದು ಹೋಗಿದ್ದರು ಎಂಬುದಾಗಿ ಪೊಲೀಸರು ಹೇಳಿದ್ದಾರೆ. ಬಂಧಿತ ಆರೋಪಿಗಳು ಕೃತ್ಯ ಎಸಗುವ ಮೊದಲು ಮದ್ಯಪಾನ ಮಾಡಿದ್ದರು ಎಂಬುದಾಗಿಯೂ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
22 ವರ್ಷದ ಯುವತಿಯ ನಗ್ನ ಕಳೇಬರ ಶನಿವಾರ (ಫೆಬ್ರವರಿ 1) ಅಯೋಧ್ಯೆಯ ನಿರ್ಜನ ಪ್ರದರ್ಶನದ ಕಾಲುವೆಯಿಂದ ಪತ್ತೆಯಾಗಿತ್ತು. ಆಕೆಯ ಕುಟುಂಬ ಸದಸ್ಯರು ಅತ್ಯಾಚಾರ ಮತ್ತು ಕೊಲೆಯ ಆರೋಪ ಮಾಡಿದ್ದರು. ಕೊಲೆಯಾದ ಮಹಿಳೆಯ ಕಣ್ಣುಗುಡ್ಡೆಗಳು ಹೊರ ಬಂದಿದ್ದರೆ, ಮೂಳೆಗಳು ಮುರಿದಿವೆ ಮತ್ತು ಅವಳ ದೇಹದಲ್ಲಿ ಆಳವಾದ ಗಾಯಗಳಿವೆ ಎಂದು ಹೇಳಿದ್ದಾರೆ.
ಯೋಗಿ ಸರ್ಕಾರವನ್ನು ದೂಷಿಸಿದ ಅಖಿಲೇಶ್
ಅಯೋಧ್ಯೆಯ ಫೈಜಾಬಾದ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಮಿಲ್ಕಿಪುರ ವಿಧಾನಸಭಾ ಕ್ಷೇತ್ರಕ್ಕೆ ಫೆಬ್ರವರಿ 5ರಂದು ಉಪಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅತ್ಯಾಚಾರ ಘಟನೆಯು ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ಅತ್ಯಾಚಾರ ಘಟನೆಯು ಯೋಗಿ ನೇತೃತ್ವದ ಸರ್ಕಾರದ ವೈಫಲ್ಯ ಎಂಬುದಾಗಿ ಎಸ್‌ಪಿ ನಾಯಕರು ಆರೋಪಿಸಿದ್ದಾರೆ.
ಸಮಾಜವಾದಿ ಪಕ್ಷದ (ಎಸ್ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಮಾತನಾಡಿ, ಯೋಗಿ ಸರ್ಕಾರದ ಅಡಿಯಲ್ಲಿ ದಲಿತ ಸಮುದಾಯಗಳ ವಿರುದ್ಧ ದೌರ್ಜನ್ಯಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ. ಅಯೋಧ್ಯೆಯ ಫೈಜಾಬಾದ್ ಸಂಸದ ಅವಧೇಶ್ ಪ್ರಸಾದ್ ಸೇರಿದಂತೆ ಎಲ್ಲರಿಗೂ ಈ ಘಟನೆಯಿಂದ ನೋವಾಗಿದೆ ಎಂದು ಅವರು ಹೇಳಿದ್ದಾರೆ. .
ಚುನಾವಣೆ ನಡೆಯಲಿರುವ ಮಿಲ್ಕಿಪುರದಲ್ಲಿ ಬಿಜೆಪಿ ಸರ್ಕಾರ ಪಿತೂರಿ ನಡೆಸುತ್ತಿದೆ ಎಂದು ಯಾದವ್ ಆರೋಪಿಸಿದ್ದು, ಹಿಂದುಳಿದವರ ಮೇಲಿನ ದೌರ್ಜನ್ಯ ಯೋಗಿ ಆಡಳಿತದಲ್ಲಿ ನಿರಂತರ ಎಂಬುದಾಗಿ ಆರೋಪಿಸಿದ್ದಾರೆ.
"ಮಿಲ್ಕಿಪುರದ ಜನರು ಸಮಾಜವಾದಿ ಪಕ್ಷದೊಂದಿಗಿದ್ದಾರೆ. ಹೀಗಾಗಿ ಸರ್ಕಾರದ ಸ್ಥಳೀಯರಿಗೆ ಕಿರುಕುಳ ನೀಡಿ ಎಸ್‌ಪಿಯನ್ನು ಸೋಲಿಸಲು ಯತ್ನಿಸುತ್ತಿದೆ ಎಂದು ಅವರು ಹೇಳಿದ್ದಾರೆ.
"ಬಿಜೆಪಿ ಅತ್ಯಂತ ಅಪ್ರಾಮಾಣಿಕ ಮತ್ತು ಸುಳ್ಳು ಹೇಳುವ ಪಕ್ಷ. ಬಿಜೆಪಿ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಎರಡಕ್ಕೂ ಅಗೌರವ ತೋರುತ್ತಿದೆ" ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಬಿಜೆಪಿ ಸಮಾಜವಾದಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ವಿರುದ್ಧ ಸುಳ್ಳು ಮತ್ತು ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ಕಿರುಕುಳ ನೀಡುತ್ತಿದೆ. ಬಿಜೆಪಿ ಸರ್ಕಾರದ ಧೋರಣೆ ಸರ್ವಾಧಿಕಾರಿಯಾಗಿದೆ" ಎಂದು ಯಾದವ್ ಹೇಳಿದರು.
ಪತ್ರಿಕಾಗೋಷ್ಠಿಯ ಕಣ್ಣೀರು ಹಾಕಿದ ಪ್ರಸಾದ್
ಭಾನುವಾರ (ಫೆಬ್ರವರಿ 2) ಪತ್ರಿಕಾಗೋಷ್ಠಿಯಲ್ಲಿ ಸಂಸ ಅವಧೇಶ್ ಪ್ರಸಾದ್ ಕಣ್ಣೀರಿಟ್ಟ ಪ್ರಸಂಗವೂ ನಡೆದಿದೆ. ಮಹಿಳೆಗೆ ನ್ಯಾಯ ದೊರಕದೇ ಹೋದರೆ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅವರು ಹೇಳಿದ್ದರು.