
ದೆಹಲಿಯ ಕೆಂಪು ಕೋಟೆಗೆ ನುಗ್ಗಲು ಯತ್ನ: ಐವರು ಬಾಂಗ್ಲಾದೇಶಿಗರ ಬಂಧನ
ಪ್ರಧಾನ ಮಂತ್ರಿಗಳು ಕೆಂಪು ಕೋಟೆಯ ಮೇಲೆ ಧ್ವಜಾರೋಹಣ ಮಾಡಿ, ರಾಷ್ಟ್ರವನ್ನುದ್ದೇಶಿಸಿ ಮಾತನಾಡುವುದರಿಂದ, ಜುಲೈ 15 ರಿಂದ ಆಗಸ್ಟ್ 15 ರವರೆಗೆ ಈ ಐತಿಹಾಸಿಕ ಕೋಟೆಯನ್ನು ಸಾರ್ವಜನಿಕರಿಗೆ ಮುಚ್ಚಲಾಗುತ್ತದೆ
ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯಲ್ಲಿರುವ ದೆಹಲಿಯ ಕೆಂಪು ಕೋಟೆಗೆ "ಬಲವಂತವಾಗಿ" ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ ಐವರು ಬಾಂಗ್ಲಾದೇಶಿ ಪ್ರಜೆಗಳನ್ನು ಸೋಮವಾರ (ಆಗಸ್ಟ್ 4) ಬಂಧಿಸಲಾಗಿದೆ.
ದೆಹಲಿ ಪೊಲೀಸರ ಪ್ರಕಾರ, ಬಂಧಿತರು ಅಕ್ರಮ ವಲಸಿಗರಾಗಿದ್ದು, ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪ್ರಧಾನ ಮಂತ್ರಿಗಳು ಕೆಂಪು ಕೋಟೆಯ ಮೇಲೆ ಧ್ವಜಾರೋಹಣ ಮಾಡಿ, ರಾಷ್ಟ್ರವನ್ನುದ್ದೇಶಿಸಿ ಮಾತನಾಡುವುದರಿಂದ, ಜುಲೈ 15 ರಿಂದ ಆಗಸ್ಟ್ 15 ರವರೆಗೆ ಈ ಐತಿಹಾಸಿಕ ಕೋಟೆಯನ್ನು ಸಾರ್ವಜನಿಕರಿಗೆ ಮುಚ್ಚಲಾಗುತ್ತದೆ ಮತ್ತು ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆಯನ್ನು ಏರ್ಪಡಿಸಲಾಗುತ್ತದೆ.
ಬಂಧಿತರಿಂದ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. 20 ರಿಂದ 25 ವರ್ಷ ವಯಸ್ಸಿನ ಈ ಯುವಕರು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ವಿಚಾರಣೆ ವೇಳೆ ಅವರು ನಕಲಿ ಆಧಾರ್ ಕಾರ್ಡ್ಗಳನ್ನು ತೋರಿಸಿದ್ದು, ಅವರ ಬಳಿ ಬಾಂಗ್ಲಾದೇಶಕ್ಕೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ. ಸದ್ಯಕ್ಕೆ ಅವರನ್ನು ವಿಚಾರಣೆ ನಡೆಸಿ, ಬಾಂಗ್ಲಾದೇಶಕ್ಕೆ ಗಡಿಪಾರು ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ.
ಬಿಜೆಪಿ ಆಡಳಿತವಿರುವ ಹಲವಾರು ರಾಜ್ಯಗಳಲ್ಲಿ ಬಾಂಗ್ಲಾದೇಶಿಗರೆಂದು ಹೇಳಿ ಅನೇಕರನ್ನು ಬಂಧಿಸಿ ಗಡಿಪಾರು ಮಾಡಲಾಗುತ್ತಿದೆ. ಆದರೆ, ಅವರಲ್ಲಿ ಹಲವರು ಪಶ್ಚಿಮ ಬಂಗಾಳದ ಬಂಗಾಳಿಗಳೇ ಆಗಿರುತ್ತಾರೆ. ಪಶ್ಚಿಮ ಬಂಗಾಳದ ಅಧಿಕೃತ ನಾಗರಿಕರನ್ನು "ಬಾಂಗ್ಲಾದೇಶಿಗರು" ಎಂದು ಹಣೆಪಟ್ಟಿ ಕಟ್ಟಿ, ದೇಶದ ಇತರ ಭಾಗಗಳಲ್ಲಿ ಕಿರುಕುಳ ನೀಡುವುದನ್ನು ತೃಣಮೂಲ ಕಾಂಗ್ರೆಸ್ ಸರ್ಕಾರ ತೀವ್ರವಾಗಿ ವಿರೋಧಿಸುತ್ತಿದೆ.