ದೆಹಲಿಗೆ ನೀರು ಬಿಡುಗಡೆಗೆ ಒತ್ತಾಯಿಸಿ ನಿರಶನ: ಆಸ್ಪತ್ರೆಗೆ ದಾಖಲಾದ ಜಲಸಚಿವೆ ಅತಿಶಿ
ಹರ್ಯಾಣ ಸರ್ಕಾರ ದೆಹಲಿಗೆ ನೀರು ಹರಿಸಬೇಕೆಂದು ಅನಿರ್ದಿಷ್ಟಾವಧಿ ಉಪವಾಸ ಕೈಗೊಂಡಿದ್ದ ದೆಹಲಿ ಜಲ ಸಚಿವೆ ಅತಿಶಿ ಮರ್ಲೆನಾ ಅವರು ಮಂಗಳವಾರ ಮುಂಜಾನೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಎಎಪಿ ರಾಜ್ಯಸಭೆ ಸದಸ್ಯ ಸಂಜಯ್ ಸಿಂಗ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಂಗ್, ಐದು ದಿನಗಳ ಉಪವಾಸದ ನಂತರ ಅತಿಶಿ ಅವರ ಆರೋಗ್ಯ ಹದಗೆಟ್ಟಿದೆ. ರಕ್ತದಲ್ಲಿ ಸಕ್ಕರೆ ಮಟ್ಟ ಡೆಸಿ ಲೀಟರಿಗೆ 36 ಮಿಲಿಗ್ರಾಂಗೆ ಕುಸಿದಿದೆ. ಅವರನ್ನು ಲೋಕನಾಯಕ ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಗೆ ಮುಂಜಾನೆ 3.45 ರ ಸುಮಾರಿಗೆ ದಾಖಲಿಸಲಾಯಿತು ಎಂದು ಹೇಳಿದರು.
ವೈದ್ಯರು ಆಕೆಯನ್ನು ಆಸ್ಪತ್ರೆಗೆ ಸೇರಿಸಲು ಒತ್ತಾಯಿಸಿದ್ದು, ಜೀವಕ್ಕೆ ಅಪಾಯವಿದೆ ಎಂದು ಎಚ್ಚರಿಸಿದರು. ಅವರು ಐಸಿಯುನಲ್ಲಿದ್ದು, ಪರೀಕ್ಷೆ ನಡೆಸಲಾಗುತ್ತಿದೆ. ನಿರಶನ ಕೈಬಿಡಲಾಗಿದೆ ಎಂದರು.
ಹರಿಯಾಣದಿಂದ ದೆಹಲಿ ಪಾಲಿನ ನೀರು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗುತ್ತದೆ. ಎಎಪಿ ಮತ್ತು ಮಿತ್ರ ಪಕ್ಷಗಳು ಈ ಕುರಿತು ಪ್ರಶ್ನೆ ಎತ್ತುತ್ತಾರೆ. ಕಳೆದ ಮೂರು ವಾರಗಳಿಂದ ಹರಿಯಾಣ, ಯಮುನಾ ನದಿ ನೀರಿನಲ್ಲಿ ದೆಹಲಿಯ ಪಾಲನ್ನು100 ಎಂಜಿಡಿ ಕಡಿಮೆ ಮಾಡಿದೆ. ಆದರೆ, ಕಳೆದ ಎರಡು ದಿನಗಳಿಂದ ಹರಿವು ಹೆಚ್ಚಾಗಿದ್ದು, ಇದೀಗ 90 ಎಂಜಿಡಿ ಕೊರತೆಯಿದೆ ಎಂದರು.