DELHI CM | ದೆಹಲಿಯ ನೂತನ ಸಿಎಂ ಆತಿಶಿ ಯಾರು?
x

DELHI CM | ದೆಹಲಿಯ ನೂತನ ಸಿಎಂ ಆತಿಶಿ ಯಾರು?

ಸಾರ್ವಜನಿಕ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ಮಾಡಿರುವ ಆತಿಶಿ(43) ಈಗ ದೆಹಲಿಯ ಮುಖ್ಯಮಂತ್ರಿ ಆಗಲಿದ್ದಾರೆ. ಆ‌ಕ್ಸ್‌ಫರ್ಡ್‌ನಲ್ಲಿ ವ್ಯಾಸಂಗ ಮಾಡಿರುವ ಅವರು ರೋಡ್ಸ್ ವಿದ್ವಾಂಸೆ ಕೂಡ.


ದೆಹಲಿಯ ಸಾರ್ವಜನಿಕ ಶಾಲೆಗಳ ಬದಲಾವಣೆಯಿಂದ ಹಿಡಿದು ಮುಖಂಡರು ಜೈಲಿನಲ್ಲಿರುವಾಗ ಪಕ್ಷವನ್ನು ಹಿಡಿದಿಟ್ಟುಕೊಂಡ, ರಾಜಧಾನಿಗೆ ನೀರು ತರಲು ಅನಿರ್ದಿಷ್ಟಾವಧಿ ನಿರಶನ ನಡೆಸಿದವರು ಆತಿಶಿ ಮರ್ಲೆನಾ ಸಿಂಗ್(43).

ಅನಿರೀಕ್ಷಿತ ಘಟನೆಗಳ ಸರಣಿಯಿಂದ ಅವರು ದೆಹಲಿಯ ನೂತನ ಮುಖ್ಯಮಂತ್ರಿ ಆಗಲಿದ್ದಾರೆ. ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಸಿಎಂ ಸ್ಥಾನದಿಂದ ಆಶ್ಚರ್ಯಕರವಾಗಿ ಕೆಳಗಿಳಿದ ಬಳಿಕ, ಅವರ ಸ್ಥಾನಕ್ಕೆ ಕಲ್ಕಾಜಿ ಕ್ಷೇತ್ರದ ಶಾಸಕಿ ಮುಖ್ಯ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು.

ಶಿಕ್ಷಣ ಸುಧಾರಣಾವಾದಿ

ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ 2013 ರಲ್ಲಿ ಆಮ್ ಆದ್ಮಿ ಪಕ್ಷದಿಂದ ರಾಜಕೀಯ ಜೀವನ ಪ್ರಾರಂಭಿಸಿ, 2015-2018 ರವರೆಗೆ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಶೈಕ್ಷಣಿಕ ಸಲಹೆಗಾರರಾದರು. ದೆಹಲಿಯ ಸರ್ಕಾರಿ ಶಾಲೆಗಳ ವ್ಯಾಪಕ ಸುಧಾರಣೆಗಳ ಹಿಂದಿನ ಪ್ರೇರಕ ಶಕ್ತಿಯಾಗಿದ್ದರು. ಶಾಲೆಗಳ ಮೂಲಸೌಲಭ್ಯ ಮರುರೂಪಿಸುವಿಕೆ, ಬೋಧನೆಯ ಗುಣಮಟ್ಟ ಹೆಚ್ಚಳ ಮತ್ತು ʻಉದ್ಯಮಶೀಲ ಮನಸ್ಥಿತಿ ಪಠ್ಯಕ್ರಮʼ ಹಾಗೂ ʻಸಂತೋಷದ ಪಠ್ಯಕ್ರಮʼ ದಂತಹ ಹಲವು ಉಪಕ್ರಮಗಳನ್ನು ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮುಂಚೂಣಿಗೆ ಬಂದರು

ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಆತಿಶಿ, ದೆಹಲಿಯ ರಾಜಕೀಯದಲ್ಲಿ ಮುಂಚೂಣಿಗೆ ಬಂದರು. ಅವರು ಹಾಗೂ ಸೌರಭ್ ಭಾರದ್ವಾಜ್, ಮಾರ್ಚ್ 9, 2023 ರಂದು ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿ, ಆತಿಶಿ ಅವರಿಗೆ ಶಿಕ್ಷಣ, ಲೋಕೋಪಯೋಗಿ ಇಲಾಖೆ, ವಿದ್ಯುತ್, ನೀರು ಮತ್ತು ಪ್ರವಾಸೋದ್ಯಮ ಖಾತೆಗಳನ್ನು ನೀಡಲಾಯಿತು.

ದೆಹಲಿಯ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಪಕ್ಷದ ಹಲವು ಪ್ರಮುಖ ನಾಯಕರು ಸೆರೆಮನೆ ಸೇರಿದಾಗ, ಪಕ್ಷದ ನಿಲುವು ವಿವರಿಸುವ ಜವಾಬ್ದಾರಿ ಅವರದಾಯಿತು. ರಾಜಧಾನಿ ತೀವ್ರ ನೀರಿನ ಕೊರತೆ ಎದುರಿಸಿದಾಗ, ಹರಿಯಾಣ ನೀರು ಬಿಡಲು ನಿರಾಕರಿಸಿತು. ಹರಿಯಾಣ ಸರ್ಕಾರ ದಿನಕ್ಕೆ 100 ದಶಲಕ್ಷ ಗ್ಯಾಲನ್ ನೀರನ್ನು ಬಿಡುಗಡೆ ಮಾಡಬೇಕೆಂದು ಬೇಡಿಕೆ ಇರಿಸಿ, ಅನಿರ್ದಿಷ್ಟ ನಿರಶನ ಆರಂಭಿಸಿದರು. ಆದರೆ, ಆರೋಗ್ಯ ಸ್ಥಿತಿ ಹದಗೆಟ್ಟು ಆಸ್ಪತ್ರೆಗೆ ದಾಖಲಾಗಬೇಕಾಯಿತು.

ವಿದ್ಯಾವಂತೆ, ಸ್ಪಷ್ಟವಾದಿ

ಸುಶಿಕ್ಷಿತ ಮತ್ತು ಸ್ಪಷ್ಟ ನಿಲುವುಗಳು ಆಕೆಯನ್ನು ನಗರ ಪ್ರದೇಶದ ಮಧ್ಯಮ ವರ್ಗದವರ ನೆಚ್ಚಿನ ನಾಯಕಿಯನ್ನಾಗಿ ಮಾಡಿದೆ. ಪ್ರೌಢಶಾಲಾ ಶಿಕ್ಷಣವನ್ನು ನವದೆಹಲಿಯ ಸ್ಪ್ರಿಂಗ್‌ ಡೇಲ್‌ ಶಾಲೆ (ಪುಸಾ ರಸ್ತೆ), 2001ರಲ್ಲಿ ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ, ಶೆವೆನಿಂಗ್ ವಿದ್ಯಾರ್ಥಿವೇತನ ಪಡೆದುಕೊಂಡು ಆಕ್ಸ್‌ಫರ್ಡ್ ವಿಶ್ವವಿದ್ಯಾ ನಿಲಯದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ(2001) ಪಡೆದರು. 2005ರಲ್ಲಿ ರೋಡ್ಸ್ ಸ್ಕಾಲರ್‌ ಆಗಿ ಆಕ್ಸ್‌ಫರ್ಡ್‌ನ ಮ್ಯಾಗ್ಡಲೆನ್ ಕಾಲೇಜಿನಲ್ಲಿ ಅಧ್ಯಯನ ನಡೆಸಿದರು.

ಆಪ್‌ ಸೇರುವ ಮೊದಲು ಮಧ್ಯಪ್ರದೇಶದ ಸಣ್ಣ ಹಳ್ಳಿಯಲ್ಲಿ ಏಳು ವರ್ಷ ಕಳೆದರು; ಸಾವಯವ ಕೃಷಿ ಮತ್ತು ಪ್ರಗತಿಶೀಲ ಶಿಕ್ಷಣ ವ್ಯವಸ್ಥೆ ಗಳೊಡನೆ ತೊಡಗಿಸಿಕೊಂಡಿದ್ದರು. ಹಲವಾರು ಎನ್‌ಜಿಒಗಳೊಂದಿಗೆ ಕೆಲಸ ಮಾಡಿದ್ದು, ಇಲ್ಲಿ ಕೆಲವು ಎಎಪಿ ಸದಸ್ಯರನ್ನು ಭೇಟಿಯಾದರು.

ರಾಜಕೀಯ ಜೀವನ

ಆಪ್‌ನ ಆರಂಭದ ದಿನಗಳಲ್ಲೇ ಸೇರಿ, ಪಕ್ಷದ ನೀತಿಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ (ಪಿಎಸಿ)ಯ ಸದಸ್ಯೆ ಹಾಗೂ 2013ರ ವಿಧಾನಸಭೆ ಚುನಾವಣೆಯ ಪ್ರಣಾಳಿಕೆ ಕರಡು ಸಮಿತಿಯಲ್ಲಿ ಭಾಗವಹಿಸಿದ್ದರು.

2015 ರಲ್ಲಿ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಐತಿಹಾಸಿಕ ಜಲ ಸತ್ಯಾಗ್ರಹದಲ್ಲಿ ಭಾಗವಹಿಸಿದರು ಮತ್ತು ಎಎಪಿ ನಾಯಕ- ಕಾರ್ಯಕರ್ತ ಅಲೋಕ್ ಅಗರ್ವಾಲ್ ಅವರಿಗೆ ಪ್ರತಿಭಟನೆಗಳು ಮತ್ತು ಕಾನೂನು ಹೋರಾಟಗಳಲ್ಲಿ ನೆರವಾದರು.

2019 ರಲ್ಲಿ ಪೂರ್ವ ದೆಹಲಿ ಲೋಕಸಭೆ ಕ್ಷೇತ್ರದಿಂದ ಬಿಜೆಪಿಯ ಗೌತಮ್ ಗಂಭೀರ್ ವಿರುದ್ಧ ಸ್ಪರ್ಧಿಸಿ, 4.5 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋತರು. ಆದರೆ, 2020 ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ದಕ್ಷಿಣ ದೆಹಲಿಯ ಕಲ್ಕಾಜಿ ಕ್ಷೇತ್ರದಿಂದ ಸ್ಪರ್ಧಿಸಿ, ಬಿಜೆಪಿ ಯ ಧರಂಬೀರ್ ಸಿಂಗ್ ಅವರನ್ನು 11,000 ಮತಗಳಿಂದ ಸೋಲಿಸಿದರು.

ಮರ್ಲೆನಾ ತೆಗೆದುಹಾಕಿದರು

ಜೂನ್ 8, 1981 ರಂದು ಜನಿಸಿದ ಆತಿಶಿ, ಅವರ ಮಧ್ಯದ ಹೆಸರು 'ಮರ್ಲೆನಾ'. ಪ್ರಾಧ್ಯಾಪಕ ಪೋಷಕರಾದ ವಿಜಯ್ ಸಿಂಗ್ ಮತ್ತು ತ್ರಿಪ್ತಾ ವಾಹಿ ಇಟ್ಟ ಹೆಸರು. ಎಎಪಿ ಪ್ರಕಾರ, ಆ ಹೆಸರು ಮಾರ್ಕ್ಸ್ ಮತ್ತು ಲೆನಿನ್ ಸಂಯೋಜನೆ. ಆದರೆ, ಚುನಾವಣೆಗೆ ಸ್ವಲ್ಪ ಮೊದಲು ಮರ್ಲೆನಾ, ಹೆಸರಿನ ಬಳಕೆ ನಿಲ್ಲಿಸಿದರು. 2018 ರಿಂದ ಅವರ ಹೆಸರು ಆತಿಶಿ.

ಕಳೆದ ವರ್ಷದಿಂದ ಆರಂಭವಾದ ಘಟನೆಗಳ ಸರಣಿಯಿಂದ ಅವರಿಗೆ ರಾಜಧಾನಿಯ ಉನ್ನತ ಹುದ್ದೆಯ ಅವಕಾಶ ಸಿಕ್ಕಿದೆ.

Read More
Next Story