
ಐತಿಹಾಸಿಕ ಬಾಹ್ಯಾಕಾಶ ಯಾನ ನಡೆಸಿದ ಗಗನಯಾತ್ರಿ ಶುಭಾಂಶು ಶುಕ್ಲಾ ಭಾರತಕ್ಕೆ ವಾಪಸ್
2027ರಲ್ಲಿ ಇಸ್ರೋ ಕೈಗೊಳ್ಳಲು ಉದ್ದೇಶಿಸಿರುವ ಮಹತ್ವಾಕಾಂಕ್ಷೆಯ ಮಾನವಸಹಿತ ಗಗನಯಾನ ಯೋಜನೆಗೆ ಪೂರ್ವಭಾವಿಯಾಗಿ, ನಾಸಾ ಸಹಯೋಗದೊಂದಿಗೆ ಈ ಯಾನವನ್ನು ಕೈಗೊಳ್ಳಲಾಗಿತ್ತು.
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಐತಿಹಾಸಿಕ ಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಭಾನುವಾರ ಬೆಳಗಿನ ಜಾವ ತಾಯ್ನಾಡು ಭಾರತಕ್ಕೆ ಮರಳಿದರು. ಅವರೊಂದಿಗೆ ಮತ್ತೊಬ್ಬ ಗಗನಯಾತ್ರಿ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಕೂಡ ಭಾರತಕ್ಕೆ ಬಂದಿಳಿದರು. ದೆಹಲಿ ವಿಮಾನ ನಿಲ್ದಾಣದಲ್ಲಿ ಅವರನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಅವರು ಅದ್ದೂರಿಯಾಗಿ ಸ್ವಾಗತಿಸಿದರು.
2027ರಲ್ಲಿ ಇಸ್ರೋ ಕೈಗೊಳ್ಳಲು ಉದ್ದೇಶಿಸಿರುವ ಮಹತ್ವಾಕಾಂಕ್ಷೆಯ ಮಾನವಸಹಿತ ಗಗನಯಾನ ಯೋಜನೆಗೆ ಪೂರ್ವಭಾವಿಯಾಗಿ, ನಾಸಾ ಸಹಯೋಗದೊಂದಿಗೆ ಈ ಯಾನವನ್ನು ಕೈಗೊಳ್ಳಲಾಗಿತ್ತು. ಕಳೆದ ಒಂದು ವರ್ಷದಿಂದ ಅಮೆರಿಕದಲ್ಲಿದ್ದ ಶುಭಾಂಶು ಅವರು, ಆಕ್ಸಿಯಂ–4 ಯೋಜನೆಯ ಭಾಗವಾಗಿ ಕಠಿಣ ತರಬೇತಿಯಲ್ಲಿ ಪಾಲ್ಗೊಂಡಿದ್ದರು.
ಗಗನಯಾತ್ರಿಗಳ ವಾಪಸಾತಿಯ ಬಗ್ಗೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಸಾಮಾಜಿಕ ಮಾಧ್ಯಮ 'ಎಕ್ಸ್' ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. "ಭಾರತದ ಆದರ್ಶ ಪುತ್ರ, ಗಗನಯಾತ್ರಿ ಶುಭಾಂಶು ಶುಕ್ಲಾ ಇಂದು ಬೆಳಗಿನ ಜಾವ ದೆಹಲಿಗೆ ಬಂದಿಳಿದರು. ಇವರೊಂದಿಗೆ ಮತ್ತೊಬ್ಬ ಗಗನಯಾತ್ರಿ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಕೂಡ ಮರಳಿದ್ದಾರೆ" ಎಂದು ಅವರು ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ದೆಹಲಿಗೆ ಬಂದಿಳಿದಿರುವ ಗಗನಯಾತ್ರಿಗಳು, ಮೊದಲಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ನಂತರ ಶುಭಾಂಶು ಶುಕ್ಲಾ ಅವರು ತಮ್ಮ ಸ್ವಂತ ಊರಾದ ಉತ್ತರಪ್ರದೇಶದ ಲಖನೌಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ತದನಂತರ, ದೆಹಲಿಯಲ್ಲಿ ಆಗಸ್ಟ್ 22 ಮತ್ತು 23 ರಂದು ನಡೆಯಲಿರುವ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಕಾರ್ಯಕ್ರಮದಲ್ಲಿ ಇಬ್ಬರೂ ಗಗನಯಾತ್ರಿಗಳು ಪಾಲ್ಗೊಳ್ಳಲಿದ್ದಾರೆ.