ಭಾರತದ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳು ಜುಲೈ 14ಕ್ಕೆ ಭೂಮಿಗೆ ವಾಪಸ್
x

ಭಾರತದ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳು ಜುಲೈ 14ಕ್ಕೆ ಭೂಮಿಗೆ ವಾಪಸ್

ಆಕ್ಸಿಯಂ-4 ಮಿಷನ್ ಜೂನ್ 25 ರಂದು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಿತ್ತು, ಮತ್ತು 28 ಗಂಟೆಗಳ ಪ್ರಯಾಣದ ನಂತರ ಜೂನ್ 26 ರಂದು ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಬಾಹ್ಯಾಕಾಶ ನಿಲ್ದಾಣಕ್ಕೆ ಡಾಕ್ ಆಗಿತ್ತು.


ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ಆಕ್ಸಿಯಂ-4 ಮಿಷನ್‌ನ ನಾಲ್ವರು ಸಿಬ್ಬಂದಿ ಜುಲೈ 14 ರಂದು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ISS) ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ಗುರುವಾರ ಪ್ರಕಟಿಸಿದೆ.

"ನಾವು ಬಾಹ್ಯಾಕಾಶ ನಿಲ್ದಾಣದ ಕಾರ್ಯಕ್ರಮದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಮತ್ತು ಆಕ್ಸಿಯಂ-4 ಮಿಷನ್‌ನ ಪ್ರಗತಿಯನ್ನು ಗಮನಿಸುತ್ತಿದ್ದೇವೆ. ಜುಲೈ 14ರಂದು 'ಹೈ ಬೀಟಾ ಅವಧಿ' ಮುಗಿದ ನಂತರ ಮಿಷನ್ ಅನ್ನು ಸುರಕ್ಷಿತವಾಗಿ ಭೂಮಿಗೆ ಕರೆತರುವ ಗುರಿ ಹೊಂದಿದ್ದೇವೆ" ಎಂದು ನಾಸಾದ ವಾಣಿಜ್ಯ ಸಿಬ್ಬಂದಿ ಕಾರ್ಯಕ್ರಮದ ವ್ಯವಸ್ಥಾಪಕ ಸ್ಟೀವ್ ಸ್ಟಿಚ್ ಕ್ರೂ-11 ಮಿಷನ್ ಕುರಿತ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆಕ್ಸಿಯಂ-4 ಮಿಷನ್ ಜೂನ್ 25 ರಂದು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಿತ್ತು, ಮತ್ತು 28 ಗಂಟೆಗಳ ಪ್ರಯಾಣದ ನಂತರ ಜೂನ್ 26 ರಂದು ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಬಾಹ್ಯಾಕಾಶ ನಿಲ್ದಾಣಕ್ಕೆ ಡಾಕ್ ಆಗಿತ್ತು.

'ಹೈ ಬೀಟಾ ಅವಧಿ' ಎಂದರೆ ನಿಲ್ದಾಣದ ಕಕ್ಷೆ ಮತ್ತು ಸೂರ್ಯನ ನಡುವಿನ ಕೋನವು 70 ಡಿಗ್ರಿಗಿಂತ ಹೆಚ್ಚಿರುವ ಸಮಯ. ಈ ಅವಧಿಯಲ್ಲಿ ನಿಲ್ದಾಣವು ಹೆಚ್ಚು ಸಮಯ ಸೂರ್ಯನ ಬೆಳಕಿನಲ್ಲಿ ಇರುವುದರಿಂದ ತಾಪಮಾನ ಹೆಚ್ಚಾಗುತ್ತದೆ ಮತ್ತು ನಾಸಾಕ್ಕೆ ತಾಪಮಾನ ನಿರ್ವಹಣೆಯ ಅಗತ್ಯವಿರುತ್ತದೆ.

ಶುಭಾಂಶು ಶುಕ್ಲಾ ಮತ್ತು ಆಕ್ಸಿಯಂ-4 ತಂಡವು ಐಎಸ್​ಎಸ್​​ನಲ್ಲಿ 230 ಸೂರ್ಯೋದಯಗಳನ್ನು ವೀಕ್ಷಿಸಿದ್ದು, ತಮ್ಮ ಎರಡು ವಾರಗಳ ಅವಧಿಯಲ್ಲಿ ಸುಮಾರು 100 ಲಕ್ಷ ಕಿ.ಮೀ. ದೂರ ಪ್ರಯಾಣಿಸಿದ್ದಾರೆ. ಶುಕ್ಲಾ, ಪೆಗ್ಗಿ ವಿಟ್ಸನ್, ಸ್ಲಾವೋಸ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಮತ್ತು ಟಿಬರ್ ಕಾಪು ಅವರ ತಂಡವು ಬಾಹ್ಯಾಕಾಶದದಲ್ಲಿ ತಮ್ಮ 'ಖುಷಿಯ ದಿನ' ಆಚರಿಸಿದೆ.

ಶುಭಾಂಶು ಅವರಿಂದ ನೇರ ಸಂವಾದ

ಈ ತಂಡವು 230 ಕಕ್ಷೆಗಳನ್ನು ಪೂರ್ಣಗೊಳಿಸಿ 96.5 ಲಕ್ಷ ಕಿ.ಮೀ. ದೂರವನ್ನು ಕ್ರಮಿಸಿದೆ ಎಂದು ಆಕ್ಸಿಯಂ ಸ್ಪೇಸ್ ತಿಳಿಸಿದೆ. ಶುಭಾಂಶು ತಮ್ಮ ಎರಡು ವಾರಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಇಸ್ರೋ ವಿಜ್ಞಾನಿಗಳು ಮತ್ತು ಶಾಲಾ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸಿದ್ದಾರೆ. ಜೊತೆಗೆ, ಹ್ಯಾಮ್​ ರೇಡಿಯೋ ಮೂಲಕ ಇಸ್ರೋ ಕೇಂದ್ರಗಳೊಂದಿಗೆ ಸಂಪರ್ಕ ಸಾಧಿಸಿದ್ದಾರೆ.

"ಭೂಮಿಯಿಂದ 250 ಮೈಲಿಗಳಷ್ಟು ಎತ್ತರದಲ್ಲಿರುವ ತಂಡವು ತಮ್ಮ ಬಿಡುವಿನ ಸಮಯದಲ್ಲಿ ಚಿತ್ರಗಳು ಮತ್ತು ವೀಡಿಯೊಗಳನ್ನು ತೆಗೆದು, ನಮ್ಮ ತವರು ಗ್ರಹದ ನೋಟವನ್ನು ಆನಂದಿಸಿದೆ ಮತ್ತು ಪ್ರೀತಿಪಾತ್ರರೊಂದಿಗೆ ಸಂಪರ್ಕ ಸಾಧಿಸಿದೆ" ಎಂದು ಆಕ್ಸಿಯಂ ಸ್ಪೇಸ್ ಹೇಳಿದೆ.

ಆಕ್ಸಿಯಂ-4 ತಂಡವು ಬಯೋಮೆಡಿಕಲ್ ಸೈನ್ಸ್, ಅಡ್ವಾನ್ಸ್ಡ್ ಮೆಟೀರಿಯಲ್ಸ್, ನ್ಯೂರೋಸೈನ್ಸ್, ಕೃಷಿ ಮತ್ತು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ 60 ಕ್ಕೂ ಹೆಚ್ಚು ಪ್ರಯೋಗಗಳನ್ನು ಪೂರ್ಣಗೊಳಿಸಿದೆ. ಇದು ಆಕ್ಸಿಯಂ ಸ್ಪೇಸ್‌ನ ಖಾಸಗಿ ಮಿಷನ್‌ಗಳಲ್ಲಿ ಇದುವರೆಗಿನ ಅತಿ ಹೆಚ್ಚು ಸಂಶೋಧನೆಯಾಗಿದೆ. ಈ ಪ್ರಯೋಗಗಳು ಮಾನವನ ಬಾಹ್ಯಾಕಾಶ ಪ್ರಯಾಣ ಮತ್ತು ಭೂಮಿಯ ಮೇಲಿನ ಜೀವನಕ್ಕೆ ಪರಿವರ್ತನೆ ತರಬಹುದು, ಮಧುಮೇಹ ನಿರ್ವಹಣೆ, ಕ್ಯಾನ್ಸರ್ ಚಿಕಿತ್ಸೆ ಮತ್ತು ಆರೋಗ್ಯ ಮೇಲ್ವಿಚಾರಣೆಯಲ್ಲಿ ಮಹತ್ವದ ಪ್ರಗತಿಗೆ ದಾರಿ ಮಾಡಿಕೊಡಬಹುದು.

Read More
Next Story