ಜುಬೀನ್​ ಗರ್ಗ್​​ ಹತ್ಯೆ ಪ್ರಕರಣ: ನಾಲ್ವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ
x

ಜುಬೀನ್​ ಗರ್ಗ್

ಜುಬೀನ್​ ಗರ್ಗ್​​ ಹತ್ಯೆ ಪ್ರಕರಣ: ನಾಲ್ವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

ತನಿಖಾ ವರದಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೃತ ಗಾಯಕರ ಪತ್ನಿ ಗರಿಮಾ ಗರ್ಗ್​​, ಎಸ್‌ಐಟಿ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ನಮ್ಮ ಕುಟುಂಬ ನೀಡಿದ ದೂರಿನ ಆಧಾರದ ಮೇಲೆಯೇ ಪೊಲೀಸರು ತನಿಖೆ ನಡೆಸಿದ್ದಾರೆ.


Click the Play button to hear this message in audio format

ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಪ್ರಖ್ಯಾತ ಗಾಯಕ ಜುಬೀನ್​ ಗರ್ಗ್​​ ಅವರ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದ್ದು, ಅಸ್ಸಾಂ ಪೊಲೀಸ್​​ನ ವಿಶೇಷ ತನಿಖಾ ತಂಡ ಶುಕ್ರವಾರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದೆ. ಪ್ರಕರಣದಲ್ಲಿ ಗಾಯಕರ ಆಪ್ತ ಕಾರ್ಯದರ್ಶಿ ಹಾಗೂ ಕಾರ್ಯಕ್ರಮ ಸಂಘಟಕ ಸೇರಿದಂತೆ ನಾಲ್ವರ ವಿರುದ್ಧ ಕೊಲೆ ಆರೋಪ ಹೊರಿಸಲಾಗಿರುವುದು ತನಿಖೆಯಿಂದ ದೃಢಪಟ್ಟಿದೆ.

ಜುಬೀನ್​ ಗರ್ಗ್​​ ಅವರ ಸಾವು ಆಕಸ್ಮಿಕವಲ್ಲ, ಇದೊಂದು ಯೋಜಿತ ಹತ್ಯೆ ಎಂಬ ಕುಟುಂಬಸ್ಥರ ಅನುಮಾನ ಇದೀಗ ತನಿಖೆಯಿಂದ ಬಲಗೊಂಡಂತಾಗಿದೆ. ಎಸ್‌ಐಟಿ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಜುಬೀನ್​ ಅವರ ಕಾರ್ಯದರ್ಶಿ ಸಿದ್ಧಾರ್ಥ ಶರ್ಮಾ ಮತ್ತು ಈವೆಂಟ್ ಸಂಘಟಕ ಶ್ಯಾಮ್‌ಕಾನು ಮಹಂತ ಅವರನ್ನು ಪ್ರಮುಖ ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಇವರಲ್ಲದೆ, ಗಾಯಕರ ಬ್ಯಾಂಡ್ ಸದಸ್ಯರಾದ ಶೇಖರ್ ಜ್ಯೋತಿ ಗೋಸ್ವಾಮಿ ಮತ್ತು ಅಮೃತ್‌ಪ್ರಭಾ ಮಹಂತ ಅವರ ಮೇಲೂ ಹತ್ಯೆಯ ಆರೋಪ ಹೊರಿಸಲಾಗಿದೆ.

ಗಾಯಕರ ಭದ್ರತಾ ಸಿಬ್ಬಂದಿಗಳಾದ ನಂದೇಶ್ವರ್ ಬೋರಾ ಮತ್ತು ಪ್ರಬೀನ್ ಬೈಶ್ಯಾ ಅವರು ಕರ್ತವ್ಯ ಲೋಪ ಎಸಗಿದ್ದಲ್ಲದೆ, ಕ್ರಿಮಿನಲ್ ಸಂಚು ಮತ್ತು ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇದೆ: ಗರಿಮಾ ಗರ್ಗ್​​

ತನಿಖಾ ವರದಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೃತ ಗಾಯಕರ ಪತ್ನಿ ಗರಿಮಾ ಗರ್ಗ್​​, ಎಸ್‌ಐಟಿ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ನಮ್ಮ ಕುಟುಂಬ ನೀಡಿದ ದೂರಿನ ಆಧಾರದ ಮೇಲೆಯೇ ಪೊಲೀಸರು ತನಿಖೆ ನಡೆಸಿದ್ದಾರೆ. ತನಿಖೆಯು ನಿರೀಕ್ಷಿತ ಹಾದಿಯಲ್ಲೇ ಸಾಗಿದ್ದು, ನಮಗೆ ಸಮಾಧಾನ ತಂದಿದೆ. ಸಾರ್ವಜನಿಕರ ನಿರೀಕ್ಷೆಗೆ ತಕ್ಕಂತೆ ತನಿಖಾ ವರದಿ ಬಂದಿದ್ದು, ಈಗ ಚೆಂಡು ನ್ಯಾಯಾಲಯದ ಅಂಗಳದಲ್ಲಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುತ್ತದೆ ಎಂಬ ನಂಬಿಕೆ ನಮಗಿದೆ," ಎಂದು ಅವರು ಭಾವನಾತ್ಮಕವಾಗಿ ನುಡಿದಿದ್ದಾರೆ.

ತ್ವರಿತ ಗತಿಯ ವಿಚಾರಣೆಗೆ ಸಿಎಂ ಭರವಸೆ

ಪ್ರಕರಣದ ಗಂಭೀರತೆಯನ್ನು ಅರಿತಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು, ತ್ವರಿತಗತಿಯ ನ್ಯಾಯಾಲಯದಲ್ಲಿ (ಫಾಸ್ಟ್ ಟ್ರ್ಯಾಕ್ ಕೋರ್ಟ್) ವಿಚಾರಣೆ ನಡೆಸಲು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡುವುದಾಗಿ ಭರವಸೆ ನೀಡಿದ್ದಾರೆ. "ಜುಬೀನ್​ ಅವರ ಅಗಲಿಕೆಯಿಂದ ನಮ್ಮ ಇಡೀ ಮನೆಯೇ ಛಿದ್ರವಾಗಿದೆ. ಅಂತಹ ಮೇರು ಕಲಾವಿದನ ಹತ್ಯೆಯಾಗಿರುವುದು ಜನರಿಗೂ ಅಘಾತ ತಂದಿದೆ. ಆದಷ್ಟು ಬೇಗ ನ್ಯಾಯ ಸಿಗಬೇಕು ಎಂಬುದೇ ನಮ್ಮ ಹಾಗೂ ಇಡೀ ಅಸ್ಸಾಂ ಜನರ ಬಯಕೆ," ಎಂದು ಗರಿಮಾ ಒತ್ತಾಯಿಸಿದ್ದಾರೆ. ಕಳೆದ ಸೆಪ್ಟೆಂಬರ್ 19ರಂದು ಸಿಂಗಾಪುರದಲ್ಲಿ ನಡೆದ ನಾರ್ತ್ ಈಸ್ಟ್ ಇಂಡಿಯಾ ಫೆಸ್ಟಿವಲ್‌ನಲ್ಲಿ ಭಾಗವಹಿಸಲು ಹೋಗಿದ್ದಾಗ, ಸಮುದ್ರದಲ್ಲಿ ಈಜುವ ವೇಳೆ ಜುಬೀನ್​ ಗರ್ಗ್​​ ನಿಗೂಢವಾಗಿ ಮೃತಪಟ್ಟಿದ್ದರು.

Read More
Next Story