ಅಸ್ಸಾಂನಲ್ಲಿ ಮೂವರ  ನಕಲಿ ಎನ್‌ಕೌಂಟರ್‌: ಹ್ಮಾರ್ ವಿದ್ಯಾರ್ಥಿ ಸಂಘಟನೆ ಆರೋಪ
x
ಕಾಚಾರ್ ಜಿಲ್ಲೆಯಲ್ಲಿ ಎನ್‌ಕೌಂಟರ್ ನಂತರ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಪೊಲೀಸ್ ಸಿಬ್ಬಂದಿ ಪ್ರದರ್ಶಿಸಿದರು.

ಅಸ್ಸಾಂನಲ್ಲಿ ಮೂವರ ನಕಲಿ ಎನ್‌ಕೌಂಟರ್‌: ಹ್ಮಾರ್ ವಿದ್ಯಾರ್ಥಿ ಸಂಘಟನೆ ಆರೋಪ

ಇದು ನಕಲಿ ಎನ್‌ಕೌಂಟರ್‌. ಈ ಬಗ್ಗೆ ತುರ್ತು ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಹ್ಮಾರ್ ಇನ್‌ಪುಯಿ ಮತ್ತು ಹ್ಮಾರ್ ಸ್ಟೂಡೆಂಟ್ಸ್ ಅಸೋಸಿಯೇಷನ್ (ಎಚ್‌ಎಸ್‌ಎ) ಪ್ರತ್ಯೇಕ ಹೇಳಿಕೆಗಳಲ್ಲಿ ಒತ್ತಾಯಿಸಿವೆ. ಎನ್‌ ಎಚ್‌ಆರ್‌ಸಿ ತುರ್ತು ವಿಚಾರಣೆ ನಡೆಸಿ,ಎನ್‌ಕೌಂಟರ್‌ಗೆ ಕಾರಣರಾದವರನ್ನು ಬಂಧಿಸಬೇಕೆಂದು ಸಂಘಟನೆ ಗಳು ಒತ್ತಾಯಿಸಿವೆ.


ಕಾಚಾರ್ ಜಿಲ್ಲೆಯಲ್ಲಿ ಬುಧವಾದ ಮುಂಜಾನೆ ನಡೆದ ಚಕಮಕಿಯಲ್ಲಿ ಮೂವರು ಹ್ಮಾರ್ ಉಗ್ರಗಾಮಿಗಳನ್ನು ಹೊಡೆದುರುಳಿಸಲಾಗಿದೆ ಎಂಬ ಪೊಲೀಸರ ಹೇಳಿಕೆಯನ್ನು ಬುಡಕಟ್ಟು ಗುಂಪುಗಳು ಪ್ರಶ್ನೆ ಮಾಡಿವೆ.

ಘಟನೆ ಬಗ್ಗೆ ತುರ್ತು ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಹ್ಮಾರ್ ಬುಡಕಟ್ಟಿನ ಉನ್ನತ ಸಂಸ್ಥೆಯಾದ ಹ್ಮಾರ್ ಇನ್‌ಪುಯಿ ಮತ್ತು ಹ್ಮಾರ್ ಸ್ಟೂಡೆಂಟ್ಸ್ ಅಸೋಸಿಯೇಷನ್ (ಎಚ್‌ಎಸ್‌ಎ) ಪ್ರತ್ಯೇಕ ಹೇಳಿಕೆಗಳಲ್ಲಿ ಒತ್ತಾಯಿಸಿವೆ.

ಗುಂಡಿಕ್ಕಿ ಹತ್ಯೆ: ಹ್ಮಾರ್ ಸ್ಟೂಡೆಂಟ್ಸ್ ಅಸೋಸಿಯೇಷನ್ ದೆಹಲಿಯ ಪ್ರಧಾನ ಕಚೇರಿಯಿಂದ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ʻಲ ಲ್ಲುಂಗಾವಿ ಹ್ಮಾರ್, ಲಾಲ್ಬೀಕುಂಗ್ ಹ್ಮಾರ್ ಮತ್ತು ಜೋಶುವಾ ಅವರುಗಳನ್ನು ಅಸ್ಸಾಂ ಪೊಲೀಸರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಇದು ಖಂಡನೀಯ,ʼ ಎಂದು ಹೇಳಿದೆ.

ಮೂವರು ಯುವಕರು ಗ್ರಾಮ ಸ್ವಯಂಸೇವಕರು. ಪೊಲೀಸರು ಹೇಳಿದಂತೆ ಉಗ್ರಗಾಮಿಗಳಲ್ಲ. ಅವರು ಕುಕಿ-ಜೋಮಿ-ಹ್ಮಾರ್ ಗ್ರಾಮಗಳನ್ನು ಮೈಥಿ ಉಗ್ರಗಾಮಿಗಳಿಂದ ರಕ್ಷಿಸಿದ್ದಾರೆ. ಮೂವರನ್ನು ಅಸ್ಸಾಂ ಪೊಲೀಸರು ಜುಲೈ 16, 2024 ರಂದು ಮಧ್ಯಾಹ್ನ ಬಂಧಿಸಿ ಕಚುಧರಂ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಆನಂತರ ಅಜ್ಞಾತ ಸ್ಥಳಕ್ಕೆ ಕೊಂಡೊಯ್ದು ಗುಂಡಿಕ್ಕಿ ಕೊಲ್ಲಲಾಗಿದೆ,ʼ ಎಂದು ಹೇಳಿಕೆ ತಿಳಿಸಿದೆ.

ವೈರಲ್ ವಿಡಿಯೋದಲ್ಲಿ ಏನಿದೆ?: ʻಪೊಲೀಸರ ಹೇಳಿಕೆ ಅಸಂಗತ. ವಿಡಿಯೋ ಪುರಾವೆಗಳಿಗೆ ತದ್ವಿರುದ್ಧವಾಗಿದೆ. ಇಂತಹ ಕಾನೂನುಬಾಹಿರ ಹತ್ಯೆಗಳು ಮಾನವ ಜೀವನದ ಪಾವಿತ್ರ್ಯವನ್ನು ಹಾಳುಮಾಡುವುದಲ್ಲದೆ, ಕಾನೂನು ಜಾರಿ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕುಗ್ಗಿಸುತ್ತದೆ,ʼ ಎಂದು ಹೇಳಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಪೊಲೀಸರು ಆಟೋರಿಕ್ಷಾದಿಂದ ಮೂವರನ್ನು ಬಂಧಿಸುತ್ತಿರುವುದು ಕಂಡುಬಂದಿದೆ. ಮತ್ತೊಂದು ವಿಡಿಯೋದಲ್ಲಿ, ಒಬ್ಬ ಬಂಧಿತನನ್ನು ಪೊಲೀಸರು ಹಿಂದೆ ಕೈ ಕಟ್ಟಿ ಅಜ್ಞಾತ ಅರಣ್ಯ ಪ್ರದೇಶಕ್ಕೆ ಕರೆದೊಯ್ಯುತ್ತಿರುವ ದೃಶ್ಯ ಇದೆ. ಇಂಡಿಜೀನಸ್ ಟ್ರೈಬಲ್ ಲೀಡರ್ಸ್ ಫೋರಮ್ (ಐಟಿಎಲ್‌ಎಫ್) ತನ್ನ ವಾಟ್ಸ್‌ಆಪ್‌ ಗುಂಪಿನಲ್ಲಿ ವಿಡಿಯೋ ಹಂಚಿಕೊಂಡಿದೆ.

ಅಸ್ಸಾಂನ ಕಾಚಾರ್ ಜಿಲ್ಲೆಯು ಮಣಿಪುರದ ಜಿರಿಬಾಮ್‌ಗೆ ಸಮೀಪದಲ್ಲಿದೆ. ಇದು ಮೈಥಿ-ಕುಕಿ ಜನಾಂಗೀಯ ಕಲಹದ ಇತ್ತೀಚಿನ ಕೇಂದ್ರಬಿಂದು ಆಗಿದೆ.

ಪೊಲೀಸರು ಏನು ಹೇಳುತ್ತಾರೆ?: ಕಾಚಾರ್ ಜಿಲ್ಲೆಯಲ್ಲಿ ನಡೆದ ಚಕಮಕಿಯಲ್ಲಿ ಮೂವರು ಶಂಕಿತ ಹ್ಮಾರ್ ಉಗ್ರಗಾಮಿಗಳು ಸಾವನ್ನಪ್ಪಿದ್ದಾರೆ ಮತ್ತು ಮೂವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಸ್ಸಾಂ ಪೊಲೀಸರು ಬುಧವಾರ (ಜುಲೈ 17) ಹೇಳಿದ್ದರು.

ʻಮುಂಜಾನೆ ನಡೆದ ಕಾರ್ಯಾಚರಣೆಯಲ್ಲಿ 3 ಹ್ಮಾರ್‌ ಉಗ್ರಗಾಮಿಗಳನ್ನು ಕೊಂದರು. 2 ಎಕೆ ರೈಫಲ್‌, 1 ಇತರ ರೈಫಲ್ ಮತ್ತು 1 ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ,ʼ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಎ‌ಕ್ಸ್‌ ನಲ್ಲಿ ಪೋಸ್ಟ್ ಮಾಡಿದ್ದರು. ಮೃತರು ಅಸ್ಸಾಂ-ಮಣಿಪುರ ಗಡಿ ಪ್ರದೇಶದಲ್ಲಿ ವಿಧ್ವಂಸಕ ಚಟುವಟಿಕೆಗಳನ್ನು ನಡೆಸಲು ಸಿದ್ಧತೆ ನಡೆಸುತ್ತಿದ್ದ ದೊಡ್ಡ ಗುಂಪಿನ ಭಾಗವಾಗಿ ದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಚಾರ್ ಎಸ್ಪಿ ನುಮಲ್ ಮಹತ್ತಾ, ಆಟೋರಿಕ್ಷಾದಲ್ಲಿ ಭುವನ್ ಹಿಲ್ಸ್ ಕಡೆಗೆ ಹೋಗುತ್ತಿದ್ದ ಮೂವರನ್ನು ಬಂಧಿಸಲಾಗಿದೆ. ಪ್ರಾಥಮಿಕ ತನಿಖೆಯಿಂದ ಅವರು ಹ್ಮಾರ್ ಉಗ್ರಗಾಮಿ ಸಂಘಟನೆಯ ಸದಸ್ಯರು. ಇಬ್ಬರು ಕಾಚಾರ್ ಮತ್ತು ಒಬ್ಬರು ಮಣಿಪುರದ ಚುರಾಚಂದಪುರದವರು. ಅವರಿಂದ ಒಂದು ಎಕೆ 47, ಸಿಂಗಲ್ ಬ್ಯಾರಲ್ ರೈಫಲ್ ಮತ್ತು ಒಂದು ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ವಿಶೇಷ ಕಾರ್ಯಾಚರಣೆ: ಮೂವರು ನೀಡಿದ ಮಾಹಿತಿ ಆಧರಿಸಿ ಭದ್ರತಾ ಪಡೆಗಳು ಭುವನ್ ಹಿಲ್ಸ್ ಭಾಗದಲ್ಲಿ ಹೆಚ್ಚುವರಿ ಎಸ್ಪಿ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆ ನಡೆಯಿತು. ಆರು-ಏಳು ಉಗ್ರರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದರು. ಪೊಲೀಸ್ ತಂಡ ಪ್ರತಿದಾಳಿ ನಡೆಸಿತು. ಗಾಯಗೊಂಡ ಉಗ್ರರನ್ನು ಸೋನೈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮತ್ತು ಆನಂತರ ಸಿಲ್ಚಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ವೈದ್ಯರು ಮೂವರೂ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಚಕಮಕಿಯಲ್ಲಿ ಮೂವರು ಪೊಲೀಸ್ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಎಸ್‌ಎಂಸಿಎಚ್‌ಗೆ ದಾಖಲಿಸಲಾಗಿದೆ ಎಂದು ಎಸ್‌ಪಿ ವಿವರಿಸಿದರು.

ಇಡೀ ಪ್ರದೇಶವನ್ನು ಭದ್ರತಾ ಸಿಬ್ಬಂದಿ ಸುತ್ತುವರಿದಿದ್ದು, ಪರಾರಿಯಾದ ಉಗ್ರರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಹೇಳಿದರು.

Read More
Next Story