
ಅಸ್ಸಾಂ ವಿಧಾನಸಭೆ| ಶುಕ್ರವಾರದ 'ನಮಾಜ್' ವಿರಾಮ ರದ್ದು
ಗುವಾಹಟಿ: ಮುಸ್ಲಿಂ ಶಾಸಕರು ಶುಕ್ರವಾರದಂದು ನಮಾಜ್ ಮಾಡಲು ನೀಡುತ್ತಿದ್ದ ಎರಡು ಗಂಟೆಗಳ ವಿರಾಮವನ್ನು ಸ್ಥಗಿತಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಮುಂದಿನ ಅಧಿವೇಶನದಿಂದಲೇ ಈ ನಿಯಮ ಜಾರಿಯಾಗಲಿದೆ ಎಂದು ರಾಜ್ಯದ ಸಂಸದೀಯ ವ್ಯವಹಾರಗಳ ಸಚಿವ ತಿಳಿಸಿದ್ದಾರೆ.
ಎಕ್ಸ್ ನ ಪೋಸ್ಟ್‌ನಲ್ಲಿ ಶರ್ಮಾ,ʻ 2 ಗಂಟೆಗಳ ಜುಮ್ಮಾ ವಿರಾಮವನ್ನು ತೆಗೆದುಹಾಕುವ ಮೂಲಕ ಅಸ್ಸಾಂ ವಿಧಾನಸಭೆ ಉತ್ಪಾದಕತೆಗೆ ಆದ್ಯತೆ ನೀಡಿದೆ ಮತ್ತು ವಸಾಹತುಶಾಹಿಯ ಮತ್ತೊಂದು ಕುರುಹನ್ನು ವರ್ಜಿಸಿದೆ. ಈ ಅಭ್ಯಾಸವನ್ನು ಮುಸ್ಲಿಂ ಲೀಗ್‌ನ ಸೈಯದ್ ಸಾದುಲ್ಲಾ ಅವರು 1937 ರಲ್ಲಿ ಪರಿಚಯಿಸಿದರು,ʼ ಎಂದು ಹೇಳಿದರು.
ಕೊನೆಯ ಬಾರಿಗೆ ವಿಧಾನಸಭೆಯ ಶರತ್ಕಾಲದ ಅಧಿವೇಶನದ ಅಂತಿಮ ದಿನವಾದ ಶುಕ್ರವಾರ ಈ ವಿರಾಮವನ್ನು ನೀಡಲಾಯಿತು.
ಸ್ಪೀಕರ್ ಬಿಸ್ವಜಿತ್ ಡೈಮರಿ, ʻಸಂವಿಧಾನದ ಜಾತ್ಯತೀತ ಸ್ವರೂಪದ ದೃಷ್ಟಿಯಿಂದ, ಅಸ್ಸಾಂ ವಿಧಾನಸಭೆಯು ಇತರ ಯಾವುದೇ ದಿನದಂತೆ ಶುಕ್ರವಾರದಂದು ತನ್ನ ಕಲಾಪ ನಡೆಸಬೇಕು,ʼ ಎಂದು ಪ್ರಸ್ತಾಪಿಸಿದರು. ವಿಧಾನಸಭೆಯ ಕಾರ್ಯವಿಧಾನದ ನಿಯಮಗಳಲ್ಲಿನ ನಿಬಂಧನೆಯನ್ನು ತೆಗೆದುಹಾಕುವ ಪ್ರಸ್ತಾಪವನ್ನು ಸ್ಪೀಕರ್ ನೇತೃತ್ವದ ನಿಯಮಗಳ ಸಮಿತಿ ಮುಂದೆ ಇರಿಸಿದ್ದು, ಅದು ಅಭ್ಯಾಸವನ್ನು ಕೈಬಿಡಲು ಸರ್ವಾನುಮತದಿಂದ ಒಪ್ಪಿಗೆ ನೀಡಿತು.
ಪ್ರತಿಪಕ್ಷಗಳ ವಿರೋಧ: ವಿರೋಧ ಪಕ್ಷದ ಶಾಸಕರು ಈ ನಿರ್ಧಾರ ಮತ್ತು ಅದರ ಸಮಯವನ್ನು ಪ್ರಶ್ನಿಸಿದರು. ʻಈ ನಿರ್ಧಾರವನ್ನು ಹೇಗೆ ತೆಗೆದುಕೊಳ್ಳಲಾಯಿತು?ವಿರಾಮವನ್ನು ಏಕೆ ರದ್ದುಗೊಳಿಸಲಾಯಿತು ಮತ್ತು ಯಾರೊಂದಿಗೆ ಚರ್ಚಿಸಲಾಯಿತು ಎಂದು ನನಗೆ ತಿಳಿದಿಲ್ಲ,ʼ ಎಂದು ಕಾಂಗ್ರೆಸ್ ಶಾಸಕ ಜಾಕೀರ್ ಹುಸೇನ್ ಸಿಕ್ದರ್ ಹೇಳಿದ್ದಾರೆ.
ಹಿರಿಯ ಕಾಂಗ್ರೆಸ್ ಶಾಸಕ ವಾಜೇದ್ ಅಲಿ ಚೌಧರಿ,ʻಸ್ವಾತಂತ್ರ್ಯಪೂರ್ವದಿಂದಲೂ ಇದ್ದ ಈ ಪದ್ಧತಿಯನ್ನು ಇದ್ದಕ್ಕಿದ್ದ ಹಾಗೆ ಏಕೆ ತೆಗೆದುಹಾಕಲಾಯಿತು?ʼ ಎಂದು ಪ್ರಶ್ನಿಸಿದರು.
ಆಡಳಿತಾರೂಢ ಬಿಜೆಪಿ ಶಾಸಕರೊಬ್ಬರು ಈ ಹಿಂದೆ ಮಂಡಿಸಿದ್ದ ಪ್ರಸ್ತಾವನೆಯನ್ನು ಪ್ರತಿಪಕ್ಷ ಎಐಯುಡಿಎಫ್ ಶಾಸಕ ಅಮಿನುಲ್ ಇಸ್ಲಾಂ ಅವರು ಶುಕ್ರವಾರ ಮಂಡಿಸಿದರು. ಸದನ ಧ್ವನಿಮತದಿಂದ ಅಂಗೀಕರಿಸಿತು ಎಂದು ಬಿಜೆಪಿ ಶಾಸಕರೊಬ್ಬರು ಹೇಳಿದರು.