![Delhi Election Result : ಆಪ್- ಕಾಂಗ್ರೆಸ್ ಜಗಳ; ಬಿಜೆಪಿಗೆ ಲಾಭ Delhi Election Result : ಆಪ್- ಕಾಂಗ್ರೆಸ್ ಜಗಳ; ಬಿಜೆಪಿಗೆ ಲಾಭ](https://karnataka.thefederal.com/h-upload/2025/02/08/511468-aap-office.webp)
Delhi Election Result : ಆಪ್- ಕಾಂಗ್ರೆಸ್ ಜಗಳ; ಬಿಜೆಪಿಗೆ ಲಾಭ
Delhi Election Result: ಎಎಪಿಗೆ ಗೆಲುವು ತಂದುಕೊಡುವುದು ಕಾಂಗ್ರೆಸ್ ಜವಾಬ್ದಾರಿ ಆಗಿರಲಿಲ್ಲ. ಈ ಫಲಿತಾಂಶಕ್ಕೆ ಕೇಜ್ರಿವಾಲ್ ಅವರ ಮೊಂಡುತನದ ನಿರ್ಧಾರವೇ ಕಾರಣ ಎಂದು ಕಾಂಗ್ರೆಸ್ ಹೇಳಿದೆ.
ದೆಹಲಿ ಚುನಾವಣೆಯಲ್ಲಿ ಇಂಡಿಯಾ ಬ್ಲಾಕ್‌ನ ವಿಭಜನೆ ಫಲಿತಾಂಶದಲ್ಲಿ ಪ್ರಕಟಗೊಂಡಿದೆ. ಕಾಂಗ್ರೆಸ್ ತನ್ನ ಖಾತೆ ತೆರೆಯಲು ವಿಫಲವಾಗಿದ್ದರೆ ಆಮ್ ಆದ್ಮಿ ಪಕ್ಷ (AAP) 22 ಸ್ಥಾನಗಳಿಗೆ ಸ್ಥಿರವಾಗಲಿದೆ. ಇದು ಬಿಜೆಪಿಯ ಪಡೆದಿರುವ 48 ಸ್ಥಾನಗಳ ಅರ್ಧಕ್ಕಿಂತಲೂ ಕಡಿಮೆ. ಆಪ್‌ನ ಪ್ರಮುಖ ನಾಯಕರು, ಮುಖ್ಯವಾಗಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಕೂಡ ಸೋಲನುಭವಿಸಿದ್ದಾರೆ.
ಈ ಫಲಿತಾಂಶದ ಬಳಿಕ ಇಂಡಿಯಾ ಮೈತ್ರಿಕೂಟ ಅಂತ್ಯಗೊಳ್ಳುವುದು ಬಹುತೇಕ ಖಚಿತ. ಶೂನ್ಯ ಸಂಪಾದನೆ ಮಾಡಿರುವ ಕಾಂಗ್ರೆಸ್ ತಕ್ಷಣವೇ ತನ್ನ ಅಸಹನೆಯನ್ನು ಆಪ್ ಮೇಲೆ ತೋರಿದೆ. ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನಾಟೆ ಮಾತನಾಡಿ, ಆಪ್ ಗೆಲ್ಲಿಸಿಕೊಡುವುದು ಕಾಂಗ್ರೆಸ್ ಜವಾಬ್ದಾರಿಯಾಗಿರಲಿಲ್ಲ. ಅವರ ಸೋಲಿಗೆ ಅವರೇ ಕಾರಣ ಎಂದು ಹೇಳಿದ್ದಾರೆ.
ಮೈತ್ರಿಗಳ ಜಗಳ
ದೆಹಲಿಯಲ್ಲಿ ಕಾಂಗ್ರೆಸ್‌ಗೆ ಅವಕಾಶ ನೀಡುವುದಕ್ಕೆ ಆಪ್ ಒಪ್ಪಲೇ ಇಲ್ಲ. ಗೋವಾ, ಹರಿಯಾಣ, ಗುಜರಾತ್ ಮತ್ತು ಉತ್ತರಾಖಂಡದಲ್ಲೂ ಅವಕಾಶ ನೀಡಲಿಲ್ಲ. ಗೋವಾ ಮತ್ತು ಉತ್ತರಾಖಂಡದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಮತಗಳ ಅಂತರವು ಆಪ್ ಪಡೆದ ಮತಗಳಷ್ಟೇ ಇದ್ದವು. ಅಲ್ಲಿ ಆಪ್ ಸ್ಪರ್ಧೆಗೆ ಇಳಿಯದೆ ಇದ್ದಿದ್ದರೆ, ಬಿಜೆಪಿ ಸೋಲುಣಿಸಬಹುದಾಗಿತ್ತು ಎಂದು ಅವರು ಹೇಳಿದ್ದಾರೆ.
1998ರಿಂದ 2013ರವರೆಗೆ 15 ವರ್ಷಗಳ ಕಾಲ ದೆಹಲಿಯಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್ 2013ರ ಚುನಾವಣೆ ಬಳಿಕ ಸಂಪೂರ್ಣವಾಗಿ ದುರ್ಬಲಗೊಂಡಿತ್ತು. ಈ ಬಗ್ಗೆ ಮಾತನಾಡಿದ ಸುಪ್ರಿಯಾ "ನಮ್ಮ ಜವಾಬ್ದಾರಿ ಪ್ರಚಾರ ನಡೆಸುವುದು ಮತ್ತು ಚುನಾವಣೆಯಲ್ಲಿ ಎಷ್ಟು ಶಕ್ತಿಯಿಂದ ಸಾಧ್ಯವೋ ಅಷ್ಟು ಸ್ಪರ್ಧಿಸುವುದಾಗಿತ್ತು,ʼʼ ಎಂದು ಹೇಳಿದ್ದಾರೆ.
ಇಂಡಿಯಾ ಒಕ್ಕೂಟಕ್ಕೂ ಸೋಲು
ಇಂಡಿಯಾ ಒಕ್ಕೂಟದ ಮೈತ್ರಿ 2024ರಲ್ಲಿ ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಭಾರೀ ಹಿನ್ನಡೆ ಕಂಡಿತ್ತು. ಈ ಎರಡು ರಾಜ್ಯಗಳಲ್ಲೂ, ಕಾಂಗ್ರೆಸ್ ಮತ್ತು ಅದರ ಮೈತ್ರಿ ಪಕ್ಷಗಳ ನಡುವೆ ಸೀಟ್‌ಗಳ ಹಂಚಿಕೆಗೆ ಸಂಬಂಧಿಸಿದ ಹಗ್ಗಜಗ್ಗಾಟವೇ ಹೆಚ್ಚಾಗಿತ್ತು. ಮಹಾರಾಷ್ಟ್ರದಲ್ಲಿ ಉದ್ದವ್ ಠಾಕ್ರೆ ಅವರ ಶಿವಸೇನೆ ಮತ್ತು ಶರದ್ ಪವಾರ್ ಅವರ ಎನ್‌ಸಿಪಿಯೊಂದಿಗೆ ಕ್ಷೇತ್ರಗಳ ಹಂಚಿಕೆ ವಿವಾದವಿತ್ತು. ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಆಪ್ ಜೊತೆ ಮನಸ್ತಾಪವಿತ್ತು. ಎಲ್ಲ ಕಡೆಯೂ ಇಂಡಿಯಾ ಒಕ್ಕೂಟದ ಮೈತ್ರಿ ವಿಫಲಗೊಂಡಿದೆ.
ಯಾಕೆ ಪ್ರತಿಸಾರಿ ಕಾಂಗ್ರೆಸ್ ತ್ಯಾಗ ಮಾಡಬೇಕು?
ಹರಿಯಾಣ ಚುನಾವಣೆಯಲ್ಲಿ ಆಪ್ ಶೇಕಡಾ 1.5 ಮತಗಳನ್ನುಪಡೆದಿತ್ತು. ಆದಾಗ್ಯೂ ಅರವಿಂದ ಕೇಜ್ರಿವಾಲ್ ಪ್ರತಿಯೊಂದು ಕ್ಷೇತ್ರದಲ್ಲೂ ಸ್ಪರ್ಧಿಸಲು ಹಠ ಹಿಡಿದಿದ್ದರು ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಶಮಾ ಮೊಹಮದ್ ಆರೋಪಿಸಿದ್ದಾರೆ. "ಮೈತ್ರಿ ವಿಚಾರಕ್ಕೆ ಬಂದಾಗ ಪ್ರತಿಸಾರಿ ಕೇವಲ ಕಾಂಗ್ರೆಸ್ ತ್ಯಾಗ ಮಾಡಬೇಕಾಗುತ್ತದೆ. ಕೇಜ್ರಿವಾಲ್ ಹರಿಯಾಣದಲ್ಲಿ ಹಿಂದೆ ಸರಿದಿದ್ದರೆ, ನಾವು ದೆಹಲಿಯಲ್ಲಿ ಪ್ರತಿಯಾಗಿ ನೆರವು ನೀಡಬಹುದಾಗಿತ್ತು" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹರಿಯಾಣ ಮತ್ತು ಉತ್ತರಾಖಂಡದಲ್ಲಿ ಕಾಂಗ್ರೆಸ್ ಸೋಲಿಗೆ ಆಪ್ ಕಾರಣವೂ ಎನ್ನಲಾಗಿದೆ. ಹರಿಯಾಣದಲ್ಲಿ, ಕಾಂಗ್ರೆಸ್ 90 ಕ್ಷೇತ್ರಗಳಲ್ಲಿ 37 ಗೆದ್ದಿತ್ತು, ಆದರೆ ಆಪ್ ಕನಿಷ್ಠ ಅರ್ಧ ಡಜನ್ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಬಿಜೆಪಿ ಗೆಲುವಿಗೆ ಕಾರಣವಾಗಿತ್ತು. ಉತ್ತರಾಖಂಡದಲ್ಲಿ ಬಿಜೆಪಿ 44.3% ಮತಪಡೆದರೆ ಕಾಂಗ್ರೆಸ್ 37.9% ಮತ್ತು ಆಪ್ 4.82% ಮತಪಡೆದಿತ್ತು. ಗೋವಾದಲ್ಲಿ, ಕಾಂಗ್ರೆಸ್ 13.5%, ಆಪ್ 12.8% ಮತ ಗಳಿಸಿತ್ತು. ಬಿಜೆಪಿ 40.3% ಮತ ಪಡೆದು ಮುನ್ನಡೆ ಗಳಿಸಿತ್ತು.
ಕೇಜ್ರಿವಾಲ್ ಅವರ ʼನಿರಂಕುಶ ಮನಸ್ಥಿತಿʼ ದೆಹಲಿಯಲ್ಲಿ ಮೈತ್ರಿಯ ಬಾಂಧವ್ಯ ಹಾಳು ಮಾಡಿತು ಎಂದು ಶಮಾ ಮೊಹಮದ್ ಆರೋಪಿಸಿದ್ದಾರೆ. . "ಕಾಂಗ್ರೆಸ್ ಯಾವಾಗಲೂ ತನ್ನ ಮೈತ್ರಿ ಪಕ್ಷಗಳಿಗೆ ಜಾಗ ನೀಡಿದೆ. ತಮಿಳುನಾಡಿನಲ್ಲಿ ಡಿಎಂಕೆ, ಮಹಾರಾಷ್ಟ್ರದಲ್ಲಿ ಶಿವಸೇನೆ (UBT), ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ" ಎಂದು ಅವರು ಸ್ಪಷ್ಟಪಡಿಸಿದರು.
ದೆಹಲಿಯ ಚುನಾವಣೆಯ ಮುನ್ನ ಮೈತ್ರಿ ಪಕ್ಷಗಳ ಅಂತರಾಳ ಬಹಿರಂಗಗೊಂಡಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಆಪ್ ಮುಖ್ಯಸ್ಥ ಕೇಜ್ರಿವಾಲ್ ಪರಸ್ಪರ ವಾಗ್ದಾಳಿ ನಡೆಸಿಕೊಂಡಿದ್ದರು.
ಚುನಾವಣೆಯ ಕೊನೆಯ ಹಂತದಲ್ಲಿ ರಾಹುಲ್ ಗಾಂಧಿ ಪ್ರಚಾರಕ್ಕೆ ಇಳಿದು, ಕೇಜ್ರಿವಾಲ್ ಅವರ ಮದ್ಯ ನೀತಿ ಹಗರಣ ಮತ್ತು ಯಮುನಾ ನದಿಯ ಮಾಲಿನ್ಯ ಕುರಿತು ಆರೋಪಿಸಿದರು. ಇದಕ್ಕೆ ಪ್ರತಿಯಾಗಿ ಆಪ್ ಕಾಂಗ್ರೆಸ್ ಮತ್ತು ಬಿಜೆಪಿ ಒಳಗೆ ಒಪ್ಪಂದ ಮಾಡಿಕೊಂಡಿದೆ ಎಂದು ಹೇಳಿದ್ದರು.
ಸುಪ್ರಿಯಾ ಶ್ರಿನಾಟೆ ಈ ಕುರಿತು ಪ್ರತಿಕ್ರಿಯಿಸಿ, "ಆಪ್ ಪಕ್ಷದ ದೆಹಲಿಯ ದಯನೀಯ ಪ್ರದರ್ಶನಕ್ಕೆ ಕಾಂಗ್ರೆಸ್ ಕಾರಣ ಎಂಬ ಆರೋಪ ನಿರರ್ಥಕ" ಎಂದು ಹೇಳಿದರು. "ಕಾಂಗ್ರೆಸ್ ಕೇಜ್ರಿವಾಲ್ ಅವರ ದುರಾಡಳಿತವನ್ನು ಟೀಕಿಸಿದ ಹಾಗೆಯೇ ಬಿಜೆಪಿಯನ್ನೂ ಟೀಕಿಸುತ್ತದೆ" ಎಂದರು.