ಆಂಧ್ರ ಅಗ್ನಿ ಅವಘಡ | ಉನ್ನತ ತನಿಖೆಗೆ ಸಿಎಂ ಆದೇಶ
ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ಔಷಧ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿರುವ ಕಾಂಗ್ರೆಸ್, ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದೆ.
ಔಷಧ ಘಟಕದಲ್ಲಿ ಬೆಂಕಿ ಮತ್ತು ಸ್ಫೋಟದಿಂದ 17 ಜನ ಸಾವನ್ನಪ್ಪಿದ್ದು, 33 ಜನ ಗಾಯಗೊಂಡಿದ್ದಾರೆ. ಊಟದ ಬಿಡುವಿನ ವೇಳೆಯಲ್ಲಿ ಅಪಘಾತ ಸಂಭವಿಸಿದ್ದರಿಂದ, ಕಡಿಮೆ ಕಾರ್ಮಿಕರು ಇದ್ದರು.
ಎಸ್ಸೆನ್ಷಿಯಾ ಔಷಧ ಘಟಕದಲ್ಲಿ ಮಧ್ಯಾಹ್ನ 2.15 ಕ್ಕೆ ಘಟನೆ ಸಂಭವಿಸಿದ್ದು, ಸುಟ್ಟ ಗಾಯಗಳಿದ್ದ, ರಕ್ತದಿಂದ ತೊಯ್ದ ಕಾರ್ಮಿಕರನ್ನು ಆಂಬ್ಯುಲೆನ್ಸ್‌ಗಳಲ್ಲಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ʻಔಷಧ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಿಂದ ಹಲವರು ಪ್ರಾಣ ಕಳೆದುಕೊಂಡಿದ್ದು,ದುಃಖಿತ ಕುಟುಂಬಗಳಿಗೆ ಸಂತಾಪಗಳು. ಸರ್ಕಾರ ಅವರಿಗೆ ತಕ್ಷಣ ಸೂಕ್ತ ಪರಿಹಾರ ನೀಡಬೇಕು. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸು ತ್ತೇವೆ,ʼ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ʻಭವಿಷ್ಯದಲ್ಲಿ ಇಂತಹ ಘಟನೆ ತಪ್ಪಿಸಲು ಮತ್ತು ಸಂತ್ರಸ್ತರಿಗೆ ನ್ಯಾಯ ಖಚಿತಪಡಿಸಿಕೊಳ್ಳಲು ಕ್ರಮ ತೆಗೆದುಕೊಳ್ಳಬೇಕಿದೆ. ಸರ್ಕಾರ ಉನ್ನತ ಮಟ್ಟದ ತನಿಖೆ ಕೈಗೊಳ್ಳಬೇಕು,ʼ ಎಂದು ಹೇಳಿದ್ದಾರೆ.
ಉನ್ನತ ಮಟ್ಟದ ತನಿಖೆಗೆ ಆದೇಶ: ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ನಿರ್ಲಕ್ಷ್ಯದಿಂದ ದುರಂತ ಸಂಭವಿಸಿದ್ದಲ್ಲಿ ಕಾರ್ಖಾನೆಯ ಆಡಳಿತದ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ.
ಮಧ್ಯಂತರ ರಾಸಾಯನಿಕಗಳು ಮತ್ತು ಸಕ್ರಿಯ ಔಷಧ ಘಟಕ(ಎಪಿಐ)ಗಳನ್ನು ತಯಾರಿಸುವ ಎಸ್ಸೆನ್ಷಿಯಾ, 2019 ರಲ್ಲಿ 200 ಕೋಟಿ ರೂ. ಹೂಡಿಕೆಯೊಂದಿಗೆ ಉತ್ಪಾದನೆ ಪ್ರಾರಂಭಿಸಿತು. ಕಾರ್ಖಾನೆಯು ಅಚ್ಚುತಪುರಂ ಕ್ಲಸ್ಟರ್‌ನಲ್ಲಿರುವ ಆಂಧ್ರಪ್ರದೇಶ ಕೈಗಾರಿಕಾ ಮೂಲಸೌಕರ್ಯ ನಿಗಮದ ಬಹು ಉತ್ಪನ್ನ ವಿಶೇಷ ಆರ್ಥಿಕ ವಲಯ(ಎಸ್ ಇಜಡ್)ದ 40 ಎಕರೆ ಕ್ಯಾಂಪಸ್‌ನಲ್ಲಿದೆ.