NEET-UG 2024 | ಯುವಜನರ ಆಕ್ರೋಶವನ್ನು ಸಂಸತ್ತಿನಲ್ಲಿ ಪ್ರತಿಧ್ವನಿಸುತ್ತೇವೆ: ಕಾಂಗ್ರೆಸ್
x

NEET-UG 2024 | ಯುವಜನರ ಆಕ್ರೋಶವನ್ನು ಸಂಸತ್ತಿನಲ್ಲಿ ಪ್ರತಿಧ್ವನಿಸುತ್ತೇವೆ: ಕಾಂಗ್ರೆಸ್


ನವದೆಹಲಿ, ಜೂನ್ 13- ನೀಟ್ ಪರೀಕ್ಷೆಯಲ್ಲಿನ ಅವ್ಯವಸ್ಥೆ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕೆಂದು ಕಾಂಗ್ರೆಸ್ ಗುರುವಾರ ಪುನರುಚ್ಚರಿಸಿದೆ. ಈ ಸಂಬಂಧ ಜನರ ಕೋಪ ʻಸಂಸತ್ತಿನ ಒಳಗೂ ಪ್ರತಿಧ್ವನಿಸುತ್ತದೆʼ ಎಂದು ಎಚ್ಚರಿಸಿದೆ.

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಮಹಾನಿರ್ದೇಶಕರನ್ನು ವಜಾಗೊಳಿಸಬೇಕು ಎಂದು ಎಐಸಿಸಿ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ಒತ್ತಾಯಿಸಿದರು.

ʻ24 ಲಕ್ಷ ವಿದ್ಯಾರ್ಥಿ ಗಳ ಮೇಲೆ ಪರಿಣಾಮ ಬೀರುವ ಈ ಹಗರಣದ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆಗೆ ನಾವು ಒತ್ತಾಯಿಸುತ್ತೇವೆ. ನೀಟ್ ಪರೀಕ್ಷೆ ಕುರಿತು ತನಿಖೆ ನಡೆಸಬೇಕೆಂಬ ಬೇಡಿಕೆಗೆ ಬಿಜೆಪಿ ಸರ್ಕಾರ ಬೇಜವಾಬ್ದಾರಿ ಮತ್ತು ಸಂವೇದನಾರಹಿತ. ವಾಗಿ ವರ್ತಿಸುತ್ತಿದೆ. ಸಾಮಾನ್ಯ ಕುಟುಂಬಗಳು ಸುಮಾರು 30 ಲಕ್ಷ ರೂ. ಕಳೆದುಕೊಂಡಿವೆ. ಎನ್‌ಟಿಎ ನೇತೃತ್ವದ ತನಿಖೆ ನ್ಯಾಯಸಮ್ಮತ ಮತ್ತು ಸಮಗ್ರವಾಗಿರುವುದಿಲ್ಲ. 10 ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಲಹೆ ನೀಡುವ ಪ್ರಧಾನಿ ನರೇಂದ್ರ ಮೋದಿ ಅವರು, ಈ ಸ್ನಾತಕಪೂರ್ವ ವಿದ್ಯಾರ್ಥಿಗಳು ಎದುರಿಸುವ ಮಾನಸಿಕ ಆತಂಕವನ್ನು ಮರೆಯಬಾರದು,ʼ ಎಂದು ಹೇಳಿದರು.

ʻನೀಟ್ ಹಗರಣದ ಬಗ್ಗೆ ಗಮನ ಹರಿಸುವ ಬದಲು ಪ್ರಧಾನಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವುದು, ವಿದೇಶ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ. ಜೂನ್ 4 ರಂದು ಫಲಿತಾಂಶ ಏಕೆ ಪ್ರಕಟಿಸಲಾಯಿತು ಎಂಬುದು ನಿಗೂಢ. ಇಡೀ ದೇಶ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡುತ್ತಿರುವಾಗ, ಫಲಿತಾಂಶ ಪ್ರಕಟಿಸಿ ಈ ಸಂಬಂಧ ಚರ್ಚೆಯನ್ನು ತಪ್ಪಿಸಲಾಯಿತು,ʼ ಎಂದು ಗೊಗೋಯ್ ಹೇಳಿದರು.

ಪ್ರಧಾನ್‌ ಹೇಳಿಕೆಗೆ ವಿರೋಧ : ʻವೈದ್ಯಕೀಯ ಪ್ರವೇಶ ಪರೀಕ್ಷೆಯ ಪೇಪರ್ ಸೋರಿಕೆ ಆಗಿದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ,ʼ ಎಂದು ಸಚಿವ ಧರ್ಮೇಂದ್ರ ಪ್ರಧಾನ್‌ ಗುರುವಾರ ಹೇಳಿದ್ದಾರೆ.

ʻಎನ್‌ಟಿಎಯಲ್ಲಿ ಭ್ರಷ್ಟಾಚಾರದ ಆರೋಪ ಆಧಾರರಹಿತ. ಅದು ಅತ್ಯಂತ ವಿಶ್ವಾಸಾರ್ಹ ಸಂಸ್ಥೆ.ಸುಪ್ರೀಂ ಕೋರ್ಟ್ ವಿಷಯದ ವಿಚಾರಣೆ ನಡೆಸುತ್ತಿದೆ ಮತ್ತು ನಾವು ಅದರ ನಿರ್ಧಾರಕ್ಕೆ ಬದ್ಧರಾಗುತ್ತೇವೆ. ಯಾವುದೇ ವಿದ್ಯಾರ್ಥಿಗೆ ಅನನುಕೂಲವಾಗದಂತೆ ನಾವು ಖಚಿತಪಡಿಸಿಕೊಳ್ಳುತ್ತೇವೆ,ʼ ಎಂದು ಹೇಳಿದರು.

ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಗೊಗೊಯ್‌, ʻಪ್ರಧಾನಿ ಮೌನ ವಹಿಸಿರುವಾಗ ಇಂತಹ ಆರೋಪಗಳನ್ನು ತಳ್ಳಿಹಾಕುವುದು ಈ ಸರ್ಕಾರದ ವಿಧಾನ. ನಾವು ಸಂಸತ್ತಿನ ಅಧಿವೇಶನಕ್ಕಾಗಿ ಕಾಯುತ್ತಿದ್ದೇವೆ. ಸಂಸತ್ತಿನ ಒಳಗೆ ದೇಶದ 24 ಲಕ್ಷ ಯುವಕರ ಧ್ವನಿಯನ್ನು ಎತ್ತುತ್ತೇವೆ. ಯುವ ಜನರ ಕೋಪ ಸಂಸತ್ತಿನ ಒಳಗೆ ಪ್ರತಿಧ್ವನಿಸಲಿದೆ,ʼ ಎಂದು ಹೇಳಿದರು.

Read More
Next Story