
ಅಂಗನವಾಡಿ, ಆಶಾ ಹಾಗೂ ಬಿಸಿಯೂಟ ನೌಕರರ ಪ್ರತಿನಿಧಿಗಳು ಕೇಂದ್ರ ಸಚಿವೆ ಅನ್ನಪೂರ್ಣದೇವಿಗೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಸಚಿವ ಎಚ್.ಡಿ. ಕುಮಾರಸ್ವಾಮಿ ಇದ್ದರು.
ಅಂಗನವಾಡಿ, ಆಶಾ ಸಿಬ್ಬಂದಿಗೆ ಚುನಾವಣಾ ಕೆಲಸದಿಂದ ಮುಕ್ತಿ; ಕೇಂದ್ರ ಸರ್ಕಾರದ ಭರವಸೆ
ಎಫ್‌ಆರ್‌ಎಸ್ ನೀತಿಯಲ್ಲಿ ಸುಧಾರಣೆ, ವಿಮಾ ಸೌಲಭ್ಯ, ಎಲ್ಲಾ ನೌಕರರ ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಕೇಂದ್ರ ಸಚಿವೆ ಅನ್ನಪೂರ್ಣದೇವಿ ಭರವಸೆ ನೀಡಿದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ಚುನಾವಣಾ ಕೆಲಸಗಳಿಂದ ಬಿಡುಗಡೆ ಮಾಡುವ ಕುರಿತು ಕೇಂದ್ರ ಚುನಾವಣಾ ಆಯೋಗದ ಜತೆ ಚರ್ಚಿಸಲಾಗುವುದು. ಎಫ್ ಆರ್ ಎಸ್ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಮೂಲಕ ಸಿಬ್ಬಂದಿಗೆ ಕೆಲಸದ ಒತ್ತಡ ಕಡಿಮೆ ಮಾಡಲು ಕ್ರಮ ವಹಿಸಲಾಗುವುದು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಅನ್ನಪೂರ್ಣದೇವಿ ಭರವಸೆ ನೀಡಿದರು.
ಬುಧವಾರ(ಡಿ.3) ನವದೆಹಲಿಯಲ್ಲಿ ಅಂಗನವಾಡಿ, ಆಶಾ ಹಾಗೂ ಬಿಸಿಯೂಟ ನೌಕರರ ಜೊತೆ ಚರ್ಚಿಸಿ ಮಾತನಾಡಿದ ಅವರು, ಎಫ್‌ಆರ್‌ಎಸ್ ನೀತಿಯಲ್ಲಿ ಸುಧಾರಣೆ, ವಿಮಾ ಸೌಲಭ್ಯ, ಎಲ್ಲಾ ನೌಕರರ ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳು ಸೇರಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ವ್ಯಾಪ್ತಿಗೆ ಬರುವ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಕ್ರಮ ವಹಿಸಲಾಗುವುದು. ನಿಮ್ಮ ಮೇಲಿನ ಕಾಳಜಿ ಹಾಗೂ ಮಾನವೀಯ ನೆಲೆಗಟ್ಟಿನ ಮೇರೆಗೆ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದರು.
ಕರ್ನಾಟಕದಲ್ಲಿ ಅಂಗನವಾಡಿ, ಆಶಾ ಹಾಗೂ ಬಿಸಿಯೂಟ ನೌಕರರು ನಡೆಸಿದ ಪ್ರತಿಭಟನೆ ವಿಚಾರವನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ನನ್ನೊಂದಿಗೆ ವಿವರವಾಗಿ ಚರ್ಚೆ ನಡೆಸಿದ್ದಾರೆ. ನೀವು ಉತ್ತಮ, ಶ್ರೇಷ್ಠ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಜತೆ ಕೇಂದ್ರ ಸರ್ಕಾರವಿದೆ. ಆದಷ್ಟು ಬೇಡಿಕೆಗಳನ್ನು ಈಡೇರಿಸಲಾಗುವುದು. ಉತ್ತಮ ಸೌಲಭ್ಯ ಕಲಿಸ್ಪಿಸುವ ದಿಸೆಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ನೌಕರರ ಬೇಡಿಕೆಗಳ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಸಭೆಗೂ ಮುನ್ನ ಅಂಗನವಾಡಿ, ಬಿಸಿಯೂಟ ಹಾಗೂ ಆಶಾ ಕಾರ್ಯಕರ್ತೆಯರ ಸಮಸ್ಯೆಗಳ ಬಗ್ಗೆ ಸಚಿವೆ ಅನ್ನಪೂರ್ಣ ದೇವಿಯೊಂದಿಗೆ ಸಚಿವ ಎಚ್.ಡಿ. ಕುಮಾರಸ್ವಾಮಿ ಮಹತ್ವದ ಮಾತುಕತೆ ನಡೆಸಿದರು.
ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ, ಬಿಸಿಯೂಟ ನೌಕರರು, ಆಶಾ ನೌಕರರ ಪ್ರಮುಖರನ್ನು ಬುಧವಾರ(ಡಿ.3) ಎಚ್.ಡಿ. ಕುಮಾರಸ್ವಾಮಿ ನವದೆಹಲಿಗೆ ಕರೆಸಿಕೊಂಡಿದ್ದರು.

