
ಸ್ನೇಹಿತರ ಜೊತೆ ಬೆಟ್ಟಿಂಗ್; ಪೆನ್ನು ನುಂಗಿದ ಬಾಲಕ- 3 ವರ್ಷಗಳ ನಂತರ ಹೊರತೆಗೆದ ವೈದ್ಯರು
ಗುಂಟೂರಿನ 16 ವರ್ಷದ ಬಾಲಕ ಮುರಳಿ ಕೃಷ್ಣ, ಮೂರು ವರ್ಷಗಳ ಹಿಂದೆ ಸ್ನೇಹಿತರೊಂದಿಗೆ ಬೆಟ್ಟಿಂಗ್ ಕಟ್ಟಿ ಇಡೀ ಪೆನ್ನನ್ನೇ ನುಂಗಿದ್ದಾನೆ.
ಸ್ನೇಹಿತರ ನಡುವಿನ ಸಣ್ಣದೊಂದು ಸವಾಲು ಯುವಕನೊಬ್ಬನ ಪ್ರಾಣವನ್ನೇ ಸಂಕಷ್ಟಕ್ಕೆ ದೂಡಿದೆ. ಕಳೆದ ಮೂರು ವರ್ಷಗಳಿಂದ ಹೊಟ್ಟೆಯಲ್ಲೇ ಪೆನ್ನು ಇಟ್ಟುಕೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ 16 ವರ್ಷದ ಮುರಳಿ ಕೃಷ್ಣ ಎಂಬ ಯುವಕನಿಗೆ ಗುಂಟೂರು ಸರ್ಕಾರಿ ಆಸ್ಪತ್ರೆ ವೈದ್ಯರು ಶಸ್ತ್ರಚಿಕಿತ್ಸೆ ಇಲ್ಲದೆಯೇ ಯಶಸ್ವಿ ಚಿಕಿತ್ಸೆ ನೀಡುವ ಮೂಲಕ ಹೊಸ ಬದುಕು ನೀಡಿದ್ದಾರೆ. ಆಂಧ್ರಪ್ರದೇಶದ ಗುಂಟೂರಿನಲ್ಲಿ ಈ ಘಟನೆ ನಡೆದಿದ್ದು, ಇದು ವೈದ್ಯ ಲೋಕವೇ ಅಚ್ಚರಿ ಪಡುವಂತಹ ಸಂಗತಿಯಾಗಿದೆ.
ಮೂರು ವರ್ಷಗಳ ಕಾಲ ಅಡಗಿದ್ದ ರಹಸ್ಯ
ಗುಂಟೂರಿನ 16 ವರ್ಷದ ಯುವಕ ಮುರಳಿ ಕೃಷ್ಣ, ಮೂರು ವರ್ಷಗಳ ಹಿಂದೆ ಸ್ನೇಹಿತರೊಂದಿಗೆ ಕಟ್ಟಿದ ಪಂದ್ಯದ ಭರದಲ್ಲಿ ಇಡೀ ಪೆನ್ನನ್ನೇ ನುಂಗಿದ್ದನು. ಮನೆಯವರ ಭಯದಿಂದ ಈ ವಿಷಯವನ್ನು ರಹಸ್ಯವಾಗಿಟ್ಟಿದ್ದನು. ಆರಂಭದಲ್ಲಿ ಯಾವುದೇ ತೊಂದರೆ ಕಾಣಿಸದಿದ್ದರೂ, ಕಳೆದ ಒಂದು ವರ್ಷದಿಂದ ಈತನಿಗೆ ತೀವ್ರವಾಗಿ ಹೊಟ್ಟೆ ನೋವು ಕಾಣಿಸಿಕೊಳ್ಳತೊಡಗಿತ್ತು.
ಪತ್ತೆಯಾಯಿತು ಕರುಳಿನಲ್ಲಿದ್ದ ಪೆನ್ನು
ನೋವು ಅಸಹನೀಯವಾದಾಗ ಪೋಷಕರು ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿನ ವೈದ್ಯರು ಪರೀಕ್ಷೆ ನಡೆಸಿದಾಗ ಕರುಳಿನಲ್ಲಿ ಯಾವುದೋ ವಸ್ತು ಸಿಲುಕಿರುವುದು ಕಂಡುಬಂದಿತು. ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಗುಂಟೂರು ಸರ್ಕಾರಿ ಆಸ್ಪತ್ರೆಗೆ (GGH) ದಾಖಲಿಸಲಾಯಿತು. ಅಲ್ಲಿನ ಪರಿಣತ ವೈದ್ಯರು ಸ್ಕ್ಯಾನಿಂಗ್ ಮಾಡಿದಾಗ ಮೂರು ವರ್ಷಗಳ ಹಿಂದೆ ನುಂಗಿದ್ದ ಪೆನ್ನು ಕರುಳಿನ ಒಳಭಾಗದಲ್ಲಿ ಸಿಲುಕಿರುವುದು ಕಂಡುಬಂದು ವೈದ್ಯರೇ ಬೆಚ್ಚಿಬಿದ್ದರು.
ಶಸ್ತ್ರ ಚಿಕಿತ್ಸೆ ಇಲ್ಲದೇ ಚಿಕಿತ್ಸೆ
ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಹೊಟ್ಟೆ ಸೀಳಿ ಶಸ್ತ್ರಚಿಕಿತ್ಸೆ ಮಾಡುವುದು ಅನಿವಾರ್ಯ. ಆದರೆ ಜಿಜಿಹೆಚ್ ವೈದ್ಯರ ತಂಡವು ಯುವಕನ ಮೇಲೆ ಯಾವುದೇ ಕಟ್ ಅಥವಾ ಹೊಲಿಗೆ ಹಾಕದೆ ಅತ್ಯಾಧುನಿಕ 'ಎಂಡೋಸ್ಕೋಪಿ' ತಂತ್ರಜ್ಞಾನದ ಮೂಲಕ ಅತ್ಯಂತ ಜಾಗರೂಕತೆಯಿಂದ ಪೆನ್ನನ್ನು ಹೊರತೆಗೆದಿದ್ದಾರೆ. ಪ್ರಸ್ತುತ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ.
ಈ ಘಟನೆಯ ಕುರಿತು ಮಾತನಾಡಿದ ಆಸ್ಪತ್ರೆಯ ಸೂಪರಿಂಟೆಂಡೆಂಟ್, "ಮಕ್ಕಳು ಆಟವಾಡುವಾಗ ಅಥವಾ ಇಂತಹ ಸವಾಲುಗಳನ್ನು ಹಾಕಿಕೊಳ್ಳುವಾಗ ಪೋಷಕರು ಹೆಚ್ಚಿನ ನಿಗಾ ವಹಿಸಬೇಕು. ಪ್ಲಾಸ್ಟಿಕ್ ಅಥವಾ ಲೋಹದ ವಸ್ತುಗಳು ಕರುಳನ್ನು ತೂತು ಮಾಡಬಲ್ಲವು, ಇದು ಪ್ರಾಣಕ್ಕೆ ಅಪಾಯಕಾರಿ. ಸರ್ಕಾರಿ ಆಸ್ಪತ್ರೆಗಳಲ್ಲಿ ಇಂದು ಕಾರ್ಪೊರೇಟ್ ಮಟ್ಟದ ಚಿಕಿತ್ಸೆಗಳು ಲಭ್ಯವಿದ್ದು, ಇಂತಹ ಘಟನೆಗಳು ನಡೆದಾಗ ತಕ್ಷಣ ವೈದ್ಯರನ್ನು ಸಂಪರ್ಕಿಸಿ" ಎಂದು ಕಿವಿಮಾತು ಹೇಳಿದ್ದಾರೆ.

