
ಮೃತ ಎಂಜಿನಿಯರ್‌ಗಳು (ಎಕ್ಸ್ ಚಿತ್ರ)
ಅತಿಯಾಗಿ ಬಿಯರ್ ಕುಡಿದು ಇಬ್ಬರು ಟೆಕ್ಕಿಗಳ ಸಾವು
ಪ್ರಾಥಮಿಕ ತನಿಖೆಯ ಪ್ರಕಾರ, ಅತಿಯಾದ ಆಲ್ಕೋಹಾಲ್ ಸೇವನೆಯ ಬಳಿಕ ಸೇವಿಸಿದ ಆಹಾರವು ಶ್ವಾಸನಾಳದಲ್ಲಿ ಸಿಲುಕಿಕೊಂಡಿದ್ದು (Choking), ಇದು ಉಸಿರಾಟದ ವೈಫಲ್ಯಕ್ಕೆ ಕಾರಣವಾಗಿ ಸಾವು ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅತಿಯಾದ ಮದ್ಯ ಸೇವನೆಯ ಕಾರಣ ಉಸಿರಾಟದ ತೊಂದರೆಯಿಂದ ಇಬ್ಬರು ಸಾಫ್ಟ್‌ವೇರ್ ಎಂಜಿನಿಯರ್‌ಗಳು ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಮಣಿಕುಮಾರ್ (35) ಮತ್ತು ಪುಷ್ಪರಾಜ್ (27) ಎಂದು ಗುರುತಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಅತಿಯಾದ ಆಲ್ಕೋಹಾಲ್ ಸೇವನೆಯ ಬಳಿಕ ಸೇವಿಸಿದ ಆಹಾರವು ಶ್ವಾಸನಾಳದಲ್ಲಿ ಸಿಲುಕಿಕೊಂಡಿದ್ದು (Choking), ಇದು ಉಸಿರಾಟದ ವೈಫಲ್ಯಕ್ಕೆ ಕಾರಣವಾಗಿ ಸಾವು ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿವರ
ಜನವರಿ 17ರಂದು ಮಣಿಕುಮಾರ್ ಮತ್ತು ಪುಷ್ಪರಾಜ್ ತಮ್ಮ ಗ್ರಾಮದ ನಾಲ್ವರು ಸ್ನೇಹಿತರೊಂದಿಗೆ ಸೇರಿ ಪಾರ್ಟಿ ಮಾಡಿದ್ದರು. ಮಧ್ಯಾಹ್ನ 3.30 ರಿಂದ ಸಂಜೆ 7. 30 ರವರೆಗೆ ನಡೆದ ಈ ಪಾರ್ಟಿಯಲ್ಲಿ ಗುಂಪು ಒಟ್ಟು 19 ಬಿಯರ್ ಕ್ಯಾನುಗಳನ್ನು ಖರೀದಿಸಿತ್ತು. ಈ ವೇಳೆ ಮಣಿಕುಮಾರ್ ಸುಮಾರು 6 ಮತ್ತು ಪುಷ್ಪರಾಜ್ 5 ಬಿಯರ್ ಕ್ಯಾನುಗಳನ್ನು ಖಾಲಿ ಮಾಡಿದ್ದರು ಎಂದು ರಾಯಚೋಟಿ ಡಿವೈಎಸ್‌ಪಿ ಕೃಷ್ಣ ಮೋಹನ್ ಮಾಹಿತಿ ನೀಡಿದ್ದಾರೆ. ಮಣಿಕುಮಾರ್ ಅವರು ಬಿಯರ್ ಕುಡಿಯುವ ಮೊದಲೇ ಮದ್ಯಪಾನ ಮಾಡಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಪಾರ್ಟಿ ಮುಗಿಸಿ ಮನೆಗೆ ಮರಳುವಾಗ ಮಣಿಕುಮಾರ್ ಅವರು ಉಸಿರಾಟದ ತೊಂದರೆಯಿಂದ ಕುಸಿದು ಬಿದ್ದಿದ್ದಾರೆ. ತಕ್ಷಣ ಸ್ನೇಹಿತರು ಅವರನ್ನು ಆಸ್ಪತ್ರೆಗೆ ಸಾಗಿಸಿದರಾದರೂ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಬಳಿಕ ಅಂದು ರಾತ್ರಿ 10 ಗಂಟೆಯ ಸುಮಾರಿಗೆ ಪುಷ್ಪರಾಜ್ ಕೂಡ ಮೃತಪಟ್ಟಿದ್ದಾರೆ.
ಪ್ರಕರಣ ದಾಖಲು
ಘಟನೆಗೆ ಸಂಬಂಧಿಸಿದಂತೆ ಮಣಿಕುಮಾರ್ ತಂದೆ ನರಸಿಂಹ ಅವರು ಜನವರಿ 18 ರಂದು ದೂರು ದಾಖಲಿಸಿದ್ದು, ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 194 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಘಟನಾ ಸ್ಥಳದಲ್ಲಿದ್ದ ಬಿಯರ್ ಕ್ಯಾನುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷಿಸಲಾಗಿದೆ. ವರದಿಯಲ್ಲಿ ಬಿಯರ್‌ನಲ್ಲಿ ಯಾವುದೇ ಕಲ್ಮಶಗಳಿಲ್ಲ ಎಂಬುದು ದೃಢಪಟ್ಟಿದೆ ಎಂದು ಡಿವೈಎಸ್‌ಪಿ ಸ್ಪಷ್ಟಪಡಿಸಿದ್ದಾರೆ.

