ಇಂದಿಗೂ ಸೆರೆಮನೆಗೆ ಕಳಿಸುವ ಪಾಕಿಸ್ತಾನ್ ಜಿಂದಾಬಾದ್
x

ಇಂದಿಗೂ ಸೆರೆಮನೆಗೆ ಕಳಿಸುವ 'ಪಾಕಿಸ್ತಾನ್ ಜಿಂದಾಬಾದ್'

ಈ ಘೋಷಣೆ ಯಾರನ್ನಾದರೂ ಜೈಲಿಗೆ ತಳ್ಳುವಷ್ಟು ಅಪಾಯಕಾರಿಯೇ? ಯುದ್ಧದ ಸಮಯದಲ್ಲಿ ಇಂಥ ಘೋಷಣೆಗಳು ಕ್ರಿಮಿನಲ್ ಅಪರಾಧವಾಗುತ್ತವೆ. ನಿಸ್ಸಂದೇಹವಾಗಿ ಭಾರತ ಮತ್ತು ಪಾಕಿಸ್ತಾನದ ಸಂಬಂಧ ಸೌಹಾರ್ದಯುತವಾಗಿಲ್ಲ; ಶತ್ರುತ್ವದ ಅಂಚಿನಲ್ಲಿದೆ. ಆದರೆ, ಈ ದೇಶಗಳಲ್ಲಿ ಭಯೋತ್ಪಾದಕ ದಾಳಿಗಳು ನಡೆದಾಗ, ಗುಪ್ತಚರ ಸಂಸ್ಥೆಗಳು ಪರಸ್ಪರ ಆರೋಪ ಮಾಡುತ್ತವೆ.


ವ್ಯಕ್ತಿಯೊಬ್ಬ ಕಾನೂನುಬಾಹಿರ ಕೃತ್ಯ ಎಸಗಿದರೆ, ಕ್ರಿಮಿನಲ್ ಮೊಕದ್ದಮೆ ದಾಖಲಾಗುತ್ತದೆ. ಆದರೆ, ಕಾನೂನು ಪುಸ್ತಕಗಳಲ್ಲಿ ಕಾನೂನುಬಾಹಿರ ಎಂದು ಸ್ಪಷ್ಟವಾಗಿ ನಮೂದಾಗದ ಕ್ರಿಯೆಯೊಂದು ಅಕ್ರಮ ಆಗುವುದು ಹೇಗೆ?

ಭಾರತದಲ್ಲಿ ʻಪಾಕಿಸ್ತಾನ್ ಜಿಂದಾಬಾದ್ʼ ಎಂಬ ಘೋಷಣೆ ಈ ವರ್ಗಕ್ಕೆ ಸೇರುತ್ತದೆ.

ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಜಯಿಸಿದ ಕಾಂಗ್ರೆಸ್ ನಾಯಕರೊಬ್ಬರ ವಿಜಯೋತ್ಸವದ ಸಂದರ್ಭದಲ್ಲಿ ಈ ರೀತಿ ಘೋಷಣೆ ಕೂಗಿದ ಮೂವರು ವ್ಯಕ್ತಿಗಳು ಈಗ ಬೆಂಗಳೂರು ಜೈಲಿನಲ್ಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಈ ಘೋಷಣೆಯನ್ನು ಖಂಡಿಸಿದರು.

ಘೋಷಣೆಯಲ್ಲಿ ಏನಿದೆ?

ಈ ಘೋಷಣೆ ಯಾರನ್ನಾದರೂ ಜೈಲಿಗೆ ತಳ್ಳುವಷ್ಟು ಅಪಾಯಕಾರಿಯೇ? ಯುದ್ಧದ ಸಮಯದಲ್ಲಿ ಇಂಥ ಘೋಷಣೆಗಳು ಕ್ರಿಮಿನಲ್ ಅಪರಾಧವಾಗುತ್ತವೆ. ಉದಾಹರಣೆಗೆ, ರಷ್ಯಾದಲ್ಲಿ ಯಾರಾದರೂ ʻಉಕ್ರೇನ್ ಜಿಂದಾಬಾದ್ʼ ಎಂದು ಕೂಗಿದರೆ, ಆತ ತೊಂದರೆಗೆ ಸಿಲುಕುತ್ತಾನೆ.

ನಿಸ್ಸಂದೇಹವಾಗಿ ಭಾರತ ಮತ್ತು ಪಾಕಿಸ್ತಾನದ ಸಂಬಂಧ ಸೌಹಾರ್ದಯುತವಾಗಿಲ್ಲ; ಶತ್ರುತ್ವದ ಅಂಚಿನಲ್ಲಿದೆ. ಆದರೆ, ಈ ದೇಶಗಳಲ್ಲಿ ಭಯೋತ್ಪಾದಕ ದಾಳಿಗಳು ನಡೆದಾಗ, ಗುಪ್ತಚರ ಸಂಸ್ಥೆಗಳು ಪರಸ್ಪರ ಆರೋಪ ಮಾಡುತ್ತವೆ. ಹೀಗಿದ್ದರೂ, ಎರಡೂ ದೇಶಗಳು ಯುದ್ಧ ಮಾಡುತ್ತಿಲ್ಲ.

ನಾಗರಿಕರು ಎರಡೂ ದೇಶಗಳಿಗೆ ಪರಸ್ಪರ ಭೇಟಿ ನೀಡುತ್ತಾರೆ; ದೇಶಗಳ ನಡುವೆ ವ್ಯಾಪಾರ ನಡೆಯುತ್ತದೆ; ದೇಶಗಳ ರಾಜಧಾನಿಯಲ್ಲಿ ದೂತಾವಾಸಗಳಿವೆ. ಕಳೆದ ಅಕ್ಟೋಬರ್‌ನಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್‌ ಪಂದ್ಯ ಸೇರಿದಂತೆ ಉಭಯ ರಾಷ್ಟ್ರಗಳ ನಡುವೆ ಕ್ರೀಡಾಕೂಟ ಗಳು ಕೂಡ ನಡೆಯುತ್ತವೆ.

ನದಿ ನೀರು ವಿವಾದ ಪರಿಹಾರ

ಆದರೆ, ಭಾರತ ಮತ್ತು ಪಾಕಿಸ್ತಾನ ಸಿಂಧೂ ನದಿ ನೀರಿನ ಹಂಚಿಕೆ ವಿವಾದವನ್ನು ಯಶಸ್ವಿಯಾಗಿ ಪರಿಹರಿಸಿಕೊಂಡಿರುವುದನ್ನು ಮರೆಯಬಾರದು. ವಾಸ್ತವವೆಂದರೆ, ಇದು ಜಗತ್ತಿನ ಯಾವುದೇ ನದಿ ನೀರಿನ ವಿವಾದ ಪರಿಹಾರಕ್ಕೆ ಒಂದು ಶ್ರೇಷ್ಠ ಉದಾಹರಣೆ. ಹೀಗಿರುವಾಗ, ʻಪಾಕಿಸ್ತಾನ್ ಜಿಂದಾಬಾದ್ʼ ಘೋಷಣೆ ಏಕೆ ಅಪಾಯಕರ? ಸಾರ್ವಜನಿಕವಾಗಿ ಈ ಘೋಷಣೆ ಮಾಡಿದ ವ್ಯಕ್ತಿಯನ್ನು ನೇರವಾಗಿ ಜೈಲಿಗೆ ಕಳಿಸಬಹುದೇ?

ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರೊಬ್ಬರು, ʻಯಾವುದೇ ಘೋಷಣೆ ಹಾಕುವುದನ್ನು ಅಪರಾಧವೆಂದು ಪರಿಗಣಿಸುವ ಕಾನೂನು ಇಲ್ಲʼ ಎಂದು ವಿವರಿಸುತ್ತಾರೆ. ಆದರೆ, ʻಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಸೌಹಾರ್ದವನ್ನು ಕೆಡಿಸುವ ಉದ್ದೇಶ ಹೊಂದಿದ್ದರೆ, ಶಾಂತಿ ಉಲ್ಲಂಘನೆ ಹಿನ್ನೆಲೆಯಲ್ಲಿ ಅಪರಾಧವಾಗುತ್ತದೆʼ ಎನ್ನುತ್ತಾರೆ ಅವರು.

ಆದರೆ, ಇಂಥ ವ್ಯಕ್ತಿಯ ಉದ್ದೇಶ ಏನು ಎಂದು ನಮಗೆ ಹೇಗೆ ಗೊತ್ತಾಗುತ್ತದೆ? ʻಉದ್ದೇಶ ಅಥವಾ ಉದ್ದೇಶರಹಿತ ಅಪರಾಧ ಎನ್ನುವುದು ಇಲ್ಲ. ಆದರೆ, ಉದ್ದೇಶಗಳು ಮತ್ತು ಗುರಿ ಮಾನಸಿಕ ಅಂಶಗಳಾಗಿರುತ್ತವೆ. ಆದ್ದರಿಂದ, ಅವುಗಳನ್ನು ಸಾಂದರ್ಭಿಕ ಪುರಾವೆಗಳ ಮೂಲಕ ಸಾಬೀತುಪಡಿಸಬೇಕು. ವಿಜಯೋತ್ಸವದಲ್ಲಿ ಯಾರೋ ಒಬ್ಬರು ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದರೆ, ಅದು ಶಾಂತಿಯನ್ನು ಕದಡುವ ಮತ್ತು ಭಂಗಗೊಳಿಸುವ ಉದ್ದೇಶ ಹೊಂದಿದೆ ಎಂದು ಭಾವಿಸಬಹುದುʼ ಎಂದು ಅವರು ಹೇಳುತ್ತಾರೆ.

ಜಿಂದಾಬಾದ್ ಅಥವಾ ಮುರ್ದಾಬಾದ್?

ಆದರೆ, ವಾಸ್ತವದಲ್ಲಿ ಇದನ್ನು ಹಾಸ್ಯಾಸ್ಪದ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಸಾಧ್ಯತೆ ಇದೆ. ಪಾಕಿಸ್ತಾನದ ಸಚಿವ ಬಿಲಾವಲ್ ಭುಟ್ಟೊ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದ್ದನ್ನು ವಿರೋಧಿಸಿ, ಡಿಸೆಂಬರ್ 2022 ರಲ್ಲಿ ಮಂಡ್ಯದಲ್ಲಿ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಆಗ ಬಿಜೆಪಿ ಕಾರ್ಯಕರ್ತ ಡಿ.ರವಿ, ʻಪಾಕಿಸ್ತಾನ್ ಜಿಂದಾಬಾದ್ʼ ಎಂದು ಕೂಗಲು ಪ್ರಾರಂಭಿಸಿದರು. ಸಹ ಪ್ರತಿಭಟನಾಕಾರರು ಗಲಾಟೆ ಮಾಡಿದರಲ್ಲದೆ, ಅವರಲ್ಲೊಬ್ಬ ರವಿ ಅವರ ಬಾಯಿಯನ್ನು ಮುಚ್ಚಲು ಪ್ರಯತ್ನಿಸಿದ.

ರವಿಗೆ ಹಿಂದಿಯ ಸೀಮಿತ ಜ್ಞಾನವಿತ್ತು ಮತ್ತು ʻಪಾಕಿಸ್ತಾನ್ ಮುರ್ದಾಬಾದ್ʼ ಎಂದು ಕೂಗುವುದು ಅವರ ಉದ್ದೇಶವಾಗಿತ್ತು. ಆದರೆ, 15 ತಿಂಗಳ ನಂತರ ಕಿಡಿಗೇಡಿತನ ಮತ್ತು ರಾಷ್ಟ್ರೀಯ ಭದ್ರತೆಗೆ ಅಪಾಯ ಉಂಟುಮಾಡಿದ ಆರೋಪದ ಮೇಲೆ ಅವರನ್ನು ಸೆರೆಮನೆಗೆ ಕಳಿಸಲಾಯಿತು. ಹಾಗಾದರೆ, ಒಂದು ಘೋಷಣೆಯಿಂದ ಏನು ಮಾಡಬಹುದು? ಅದು ಭಾರತದಂಥ ಪ್ರಬಲ ದೇಶವನ್ನು ಅಲುಗಾಡಿಸುವಷ್ಟು ಬಲಿಷ್ಠ ವಾಗಿದೆಯೇ? ಒಂದು ಘೋಷಣೆಯಿಂದ ಸೂಪರ್‌ ಪವರ್‌ ದೇಶದ ಶಕ್ತಿ ಕಡಿಮೆಯಾಗುವುದೇ? ಅಥವಾ, ಘೋಷಣೆಯೊಂದಕ್ಕೆ ಇಂಥ ಘನಘೋರ ಶಿಕ್ಷೆ ನೀಡಬೇಕೇ?

ಆದರೆ, ಘೋಷಣೆಯ ಅಗತ್ಯವೇನಿದೆ?

ಇನ್ನೊಂದೆಡೆ , ʻಪಾಕಿಸ್ತಾನ್ ಜಿಂದಾಬಾದ್ʼ ಎಂದು ಏಕೆ ಕೂಗಲು ಬಯಸುತ್ತಾರೆ? ಯಾರನ್ನಾದರೂ ಕೆರಳಿಸುವ ಉದ್ಧೇಶವಿದ್ದು, ಘೋಷಣೆ ಹಾಕಿ, ತಿಂಗಳುಗಟ್ಟಲೆ ಇಲ್ಲವೇ ವರ್ಷಗಳ ಕಾಲ ಕೊಳಕು ಜೈಲಿನಲ್ಲಿ ಕೊಳೆಯಲು ಏಕೆ ಇಚ್ಛಿಸುತ್ತಾರೆ? ʻಪಾಕಿಸ್ತಾನ್ ಜಿಂದಾಬಾದ್ʼ ಎಂದು ಕೂಗಿದ ತಕ್ಷಣ ಅದರಿಂದ ದೇಶದ ಸ್ಥಾನ ಕುಸಿಯುವುದೇ? ಪ್ರಪಂಚದ ಎಲ್ಲ ದೇಶಕ್ಕೂ ಒಂದು ʻಜಿಂದಾಬಾದ್ʼ ಇರಬಹುದಲ್ಲವೇ?

ಮಂಡ್ಯದ ಘಟನೆಯಂತೆಯೇ 2020 ರಲ್ಲಿ ಬೆಂಗಳೂರಿನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆ ಸಂದರ್ಭದಲ್ಲಿ ಮಾತುಗಾರಿಕೆಗೆ ಹೆಸರಾಗಿದ್ದ 19 ವರ್ಷದ ವಿದ್ಯಾರ್ಥಿನಿ ಅಮೂಲ್ಯ ಲಿಯೋನಾ ನೊರೊನ್ಹಾ, ಇದ್ದಕ್ಕಿದ್ದಂತೆ ʻಪಾಕಿಸ್ತಾನ್ ಜಿಂದಾಬಾದ್...ʼ ಎಂದು ಹೇಳಲು ಪ್ರಾರಂಭಿಸಿದಳು. ಅಷ್ಟರಲ್ಲಿ ಸಂಘಟಕರು ಆಕೆಯನ್ನು ತಡೆದರು. ವೇದಿಕೆಯಲ್ಲಿದ್ದ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ, ದಿಗ್ಭ್ರಮೆಗೊಂಡಂತೆ ಕಾಣುತ್ತಿದ್ದರು. ಆಕೆಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಯಿತು; ಜಾಮೀನು ಪಡೆಯುವ ಮೊದಲು 110 ದಿನ ಸೆರೆಮನೆಯಲ್ಲಿ ಇರಬೇಕಾಯಿತು.ಆನಂತರ ಆಕೆ ಮತ್ತೆ ವೇದಿಕೆ ಹತ್ತಲಿಲ್ಲ. ತಾನು ಪಾಕಿಸ್ತಾನದಿಂದ ಆರಂಭಿಸಿ ಬೇರೆ ದೇಶಗಳಿಗೂ ಜಿಂದಾಬಾದ್ ಎಂದು ಕೂಗಲು ಹೊರಟಿದ್ದೆ ಎಂದು ಅಮೂಲ್ಯಾ ಸಂಘಟಕರಿಗೆ ವಿವರಿಸಲು ಪ್ರಯತ್ನಿಸಿದರು. ಆದರೆ, ಆಕೆಯನ್ನು ಮಾತನಾಡದಂತೆ ತಡೆಯಲಾಯಿತು.

1947ಕ್ಕೆ ಮುನ್ನ

ರಾಜ್ಯಸಭೆಗೆ ಕಾಂಗ್ರೆಸ್‌ ನಿಂದ ಸೈಯದ್‌ ನಾಸಿರ್‌ ಹುಸೇನ್‌ ಆಯ್ಕೆಯಾದ ಬಳಿಕ ವಿಧಾನಸೌಧದಲ್ಲಿ ನಡೆದ ಪ್ರಕರಣದಲ್ಲಿ ಕೂಡ ʻಪಾಕಿಸ್ತಾನ್ ಜಿಂದಾಬಾದ್ʼ ಎಂದು ಘೋಷಣೆ ಕೂಗಿದ್ದರೇ ಎಂಬ ಬಗ್ಗೆ ಗೊಂದಲವಿತ್ತು. ಆನಂತರ ಫಾರೆನ್ಸಿಕ್‌ ಹಾಗೂ ಇನ್ನಿತರ ಸಾಕ್ಷ್ಯಗಳನ್ನು ಆಧರಿಸಿ, ಮೊಹಮ್ಮದ್ ಶಫಿ, ಇಲ್ತಾಜ್ ಮತ್ತು ಮುನಾವರ್ ಅವರನ್ನು ಬಂಧಿಸಲಾಯಿತು. ದೇಶದ ಸ್ವಾತಂತ್ರ್ಯ ಪೂರ್ವ ಇತಿಹಾಸವನ್ನು ನೋಡಿದರೆ, ʻಪಾಕಿಸ್ತಾನ ಜಿಂದಾಬಾದ್ʼ ಅನ್ನು ಏಕೆ ಗಂಭೀರವಾಗಿ ಪರಿಗಣಿಸಲಾಗಿದೆ ಎಂಬುದರ ಸುಳಿವು ಸಿಗುತ್ತದೆ. ಮುಸ್ಲಿಂ ಲೀಗ್‌ ಹಿಂದೂ ಬಹುಸಂಖ್ಯಾತ ಭಾರತದಿಂದ ಪ್ರತ್ಯೇಕತೆಯನ್ನು ಪ್ರತಿಪಾದಿಸುತ್ತಿತ್ತು. ಈ ಕಲ್ಪನೆಯನ್ನು ಬೆಂಬಲಿಸುವವರು ಸಾರ್ವಜನಿಕ ಸಭೆ ಮತ್ತು ಅವರ ನಾಯಕ ಮುಹಮ್ಮದ್ ಅಲಿ ಜಿನ್ನಾ ಅವರ ಮೆರವಣಿಗೆಳಲ್ಲಿ ಈ ಘೋಷಣೆ ಕೂಗುತ್ತಿದ್ದರು. ಈ ಘೋಷಣೆ ವಿಭಜನೆಯ ಕಲ್ಪನೆಗೆ ಪುಷ್ಟಿ ನೀಡಿತು ಮತ್ತು ಮುಸ್ಲಿಂ ಲೀಗ್ ನಾಯಕರು ತಮ್ಮ ಪ್ರಯತ್ನಗಳನ್ನು ತೀವ್ರಗೊಳಿಸಲು ಪ್ರೋತ್ಸಾಹಿಸಿತು. ಇದಕ್ಕೆ ಪ್ರತಿಯಾಗಿ ದೇಶ ವಿಭಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದವರು ʻಹಿಂದೂಸ್ತಾನ್ ಜಿಂದಾಬಾದ್ʼ ಎಂದು ಘೋಷಣೆ ಕೂಗಲಾರಂಭಿಸಿದರು. ಅಂತಿಮವಾಗಿ, ದೇಶ ವಿಭಜನೆ ಸಂಭವಿಸಿತು.

ಎರಡು ರಾಷ್ಟ್ರಗಳು ಬೇರೆ ಬೇರೆ ದಾರಿಯಲ್ಲಿ ಸಾಗಿ 77 ವರ್ಷ ಕಳೆದಿದೆ. ಆದರೆ, ʻಪಾಕಿಸ್ತಾನ್ ಜಿಂದಾಬಾದ್ʼ ಘೋಷಣೆ ಪಳೆಯುಳಿ ಕೆಯಾಗಿ ಉಳಿದುಕೊಂಡಿದೆ. ಇಂದಿನ ಭಾರತದಲ್ಲಿ ಈ ಘೋಷಣೆಗೆ ಯಾವುದೇ ಅರ್ಥವಿಲ್ಲ. ಆದರೆ, ಭಾರತದಲ್ಲಿ ಈ ಘೋಷಣೆ ಮೊಳಗಿದರೆ, ಪಾಕಿಸ್ತಾನಿಗಳೂ ಸಹ ಬೆಚ್ಚಿ ಬೀಳುವಂತಾಗಿದೆ. ಈ ಘೋಷಣೆ ಕೂಗುವವರ ಅಸಂಬದ್ಧತೆಯು ದೇಶದ ಅಸಮಂಜಸ ಪ್ರತಿಕ್ರಿಯೆಗೆ ಹೊಂದಿಕೆಯಾಗುತ್ತದೆ.

ಕಾಶ್ಮೀರ ಅಶಾಂತಿ

ಭಾರತ ಮತ್ತು ಪಾಕಿಸ್ತಾನದ ನಡುವಿನ ರಕ್ತಸಿಕ್ತ ವಿವಾದದ ಹೃದಯಭಾಗವಾಗಿರುವ ಕಾಶ್ಮೀರ ಮಾತ್ರ ಇದಕ್ಕೆ ಹೊರತಾಗಿದೆ. ಅಲ್ಲಿ ಈ ಘೋಷಣೆ ಅಪಾಯಕರ ಆಗಿರಬಹುದು ಮತ್ತು ಶಿಕ್ಷೆಗೆ ಕಾರಣ ಆಗಬಹುದು. ಕಾಶ್ಮೀರ ಹೊರತುಪಡಿಸಿ ಭಾರತದ ಬೇರೆಡೆ ಈ ಹಳತಾದ ಘೋಷಣೆಯು ಸೆರೆಮನೆಗೆ ಕಳಿಸುತ್ತದೆ ಎನ್ನುವುದು ನಮ್ಮ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತದೆ. ಜೈಲು ಶಿಕ್ಷೆ ವಿಧಿಸುವ ಮುನ್ನ ಅವರ ಕ್ರಿಯೆಗಳ ಹಿಂದಿನ ತಾರ್ಕಿಕ ಕಾರಣ ಕೇಳುವುದು ಮತ್ತು ಮಾನಸಿಕ ಸಲಹೆ ನೀಡುವುದು ಉತ್ತಮವಲ್ಲವೇ?

ಅಥವಾ, ʻಪಾಕಿಸ್ತಾನ್ ಜಿಂದಾಬಾದ್ʼ ಘೋಷಣೆಯು ತಮ್ಮ ನೆರೆಯ ರಾಷ್ಟ್ರದ ನಾಗರಿಕರು ಬಳಲುತ್ತಿರುವುದನ್ನು ನೋಡಲು ಇಷ್ಟ ಪಡುವವರ ಆಶಯಗಳಿಗೆ ವಿರುದ್ಧವಾಗಿದೆಯೇ? ಹಾಗಿದ್ದರೆ, ಇಂಥ ಹಾರೈಕೆಯ ಮರುಪರಿಶೀಲನೆ ಅಗತ್ಯವಿದೆ. ಏಕೆಂದರೆ, ಪಾಕಿಸ್ತಾನದ ಸಮಸ್ಯೆಗಳು ಭಾರತ ಸೇರಿದಂತೆ ನೆರೆಹೊರೆ ಮೇಲೆ ಪರಿಣಾಮ ಬೀರುತ್ತವೆ.

ಉದಾಹರಣೆಗೆ, 1980ರ ದಶಕದ ಉತ್ತರಾರ್ಧದಲ್ಲಿ ಅಧ್ಯಕ್ಷ ಜನರಲ್ ಜಿಯಾ ಉಲ್ ಹಕ್ ಅವರ ನೇತೃತ್ವದಲ್ಲಿ ಪಾಕಿಸ್ತಾನ ಹೆಚ್ಚು ಇಸ್ಲಾಮೀಕರಣಗೊಂಡಾಗ, ಅದರ ಪರಿಣಾಮ ಕಾಶ್ಮೀರದ ಮೇಲೆ ಆಯಿತು. 1989 ರಿಂದ 2001 ರವರೆಗೆ ಕಾಶ್ಮೀರದಲ್ಲಿ ಹಿಂಸಾಚಾರದ ಉಲ್ಬಣವು ಇಸ್ಲಾಮಿ ಮಿಲಿಟರೀಕರಣದ ನೇರ ಪರಿಣಾಮ. ಇದು ಅಫ್ಘಾನಿಸ್ತಾನದ ಮೇಲೆ ಸೋವಿಯತ್ ಆಕ್ರಮಣವನ್ನು ವಿರೋಧಿ ಸಲು ಪಾಕಿಸ್ತಾನವನ್ನು ವೇದಿಕೆಯಾಗಿ ಬಳಸಿದ್ದರಿಂದ ಸಂಭವಿಸಿತು. ಆಗ ಆರಂಭವಾದ ಹಿಂಸಾಚಾರದಿಂದ ಕಾಶ್ಮೀರಕ್ಕೆ ಇಂದಿಗೂ ಮುಕ್ತಿ ಸಿಕ್ಕಿಲ್ಲ. ಆದ್ದರಿಂದ, ಪಾಕಿಸ್ತಾನಕ್ಕೆ ಶುಭ ಹಾರೈಸುವುದು ಭಾರತದ ಹಿತಾಸಕ್ತಿಗೆ ಪೂರಕವಾಗಿದೆ ಮತ್ತು ಕಾಶ್ಮೀರದಲ್ಲಿ ಶಾಂತಿ ಯನ್ನು ತರುತ್ತದೆ.

ದೇಶ ವಿಭಜನೆ ಮತ್ತು ಸ್ವಾತಂತ್ರ್ಯಾನಂತರದ 77 ವರ್ಷಗಳಲ್ಲಿ ಭಾರತ 1947-48, 1965, 1971 ಮತ್ತು 1999 ರಲ್ಲಿ ಪಾಕಿಸ್ತಾನವನ್ನು ಸಮಗ್ರವಾಗಿ ಸೋಲಿಸಿದೆ. ಹೀಗಿರುವಾಗ, ಕೇವಲ ಘೋಷಣೆಯೊಂದರ ಬಗ್ಗೆ ಏಕೆ ಚಿಂತಿಸಬೇಕು?

Read More
Next Story