ಅಮಿತ್ ಶಾ - ರಾಜ್ ಠಾಕ್ರೆ ಸಕಾರಾತ್ಮಕ ಮಾತುಕತೆ; ಫಡ್ನವೀಸ್
x

ಅಮಿತ್ ಶಾ - ರಾಜ್ ಠಾಕ್ರೆ ಸಕಾರಾತ್ಮಕ ಮಾತುಕತೆ; ಫಡ್ನವೀಸ್


ಮುಂಬೈ, ಮಾ.20- ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ನಡುವಿನ ಮಾತುಕತೆ ಸಕಾರಾತ್ಮಕವಾಗಿದ್ದು,ಮುಂದಿನ ಕೆಲವು ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬುಧವಾರ ಹೇಳಿದ್ದಾರೆ.

ದೆಹಲಿಯಲ್ಲಿ ಮಂಗಳವಾರ ಠಾಕ್ರೆ, ಶಾ ಅವರನ್ನು ಭೇಟಿಯಾದರು. ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ರಾಜ್‌ ಅವರೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ ಎಂಬುದರ ಸೂಚನೆ ಇದಾಗಿದೆ. ಫಡ್ನವೀಸ್ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ ,ʻರಾಜ್ ಠಾಕ್ರೆ ಮತ್ತು ಅಮಿತ್ ಶಾ ಅವರ ಭೇಟಿ ಕುರಿತು ತಕ್ಷಣ ಪ್ರತಿಕ್ರಿಯಿಸುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆʼ ಎಂದರು.

ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖಂಡ ಬಾಲ ನಂದಗಾಂವ್ಕರ್ ಮಾತನಾಡಿ, ʻರಾಜ್ ಠಾಕ್ರೆ ನಿರ್ದೇಶನದಂತೆ ನಾವು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೆವೆʼ ಎಂದು ಹೇಳಿದರು.

ಅವಿಭಜಿತ ಶಿವಸೇನೆಯ ಭಾಗವಾಗಿದ್ದ ರಾಜ್‌ ಠಾಕ್ರೆ, 2006 ರಲ್ಲಿ ಎಂಎನ್‌ಎಸ್‌ ಸ್ಥಾಪಿಸಿದರು.ಮೈತ್ರಿಯಾದಲ್ಲಿ ಎಂಎನ್‌ಎಸ್‌ಗೆ ಒಂದು ಸ್ಥಾನ ಸಿಗುವ ಸಾಧ್ಯತೆ ಇದೆ. ಬಾರಾಮತಿ (ಪುಣೆ ಜಿಲ್ಲೆ) ಮತ್ತು ಮಾಧಾ (ಸೋಲಾಪುರ ಜಿಲ್ಲೆ)ದಂಥ ಪ್ರಮುಖ ಕ್ಷೇತ್ರಗಳನ್ನು ಗೆಲ್ಲುವುದು ಎಲ್ಲ ಪಕ್ಷಗಳ ಗುರಿ ಎಂದ ಫಡ್ನವೀಸ್, ʻನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕುʼ ಎಂದರು.

ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರ ಹೆಸರನ್ನು ಎನ್‌ಸಿಪಿ (ಶರದ್ಚಂದ್ರ ಪವಾರ್) ಯ ಸಂಸದೆ ಸುಪ್ರಿಯಾ ಸುಳೆ ವಿರುದ್ಧ ಅಂತಿಮಗೊಳಿಸುವ ನಿರೀಕ್ಷೆಯಿದೆ. ಆದರೆ, ಬಿಜೆಪಿಯ ಮಿತ್ರಪಕ್ಷಗಳ ಸ್ಥಳೀಯ ನಾಯಕರು ಸುನೇತ್ರಾ ಅವರ ಉಮೇದುವಾರಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮುಖಂಡ ಹರ್ಷವರ್ಧನ್ ಪಾಟೀಲ್ ಅವರು ಬುಧವಾರ ಮುಂಬೈನಲ್ಲಿ ಫಡ್ನವೀಸ್ ಮತ್ತು ಇತರ ಬಿಜೆಪಿ ನಾಯಕರನ್ನು ಭೇಟಿ ಮಾಡಿದರು. ʻನಾನು ಬಿಜೆಪಿ ನಾಯಕರನ್ನು ಭೇಟಿ ಮಾಡಿ, ಬೆಂಬಲಿಗರ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೇನೆ. ಪಕ್ಷದ ಪ್ರತಿಕ್ರಿಯೆಗಾಗಿ ಕಾಯುತ್ತೇವೆʼ ಎಂದು ಸುದ್ದಿಗಾರರಿಗೆ ತಿಳಿಸಿದರು.

ಇಂದಾಪುರದ ಪಾಟೀಲ್ ಕುಟುಂಬ ಮತ್ತು ಬಾರಾಮತಿಯ ಪವಾರ್ ಕುಟುಂಬದ ನಡುವೆ ದಶಕಗಳಿಂದ ರಾಜಕೀಯ ಪೈಪೋಟಿ ಇದೆ. ಪಾಟೀಲ್ 2014 ಮತ್ತು 2019ರಲ್ಲಿ ಇಂದಾಪುರ ವಿಧಾನಸಭೆ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯ ಭಾಗವಾಗಿರುವ ಎನ್‌ಸಿಪಿಯ ದತ್ತಾ ಭರಣೆ ವಿರುದ್ಧ ಅಪಜಯ ಹೊಂದಿದ್ದರು.

Read More
Next Story