ಶಬರಿಮಲೆ ಚಿನ್ನ ಕಳ್ಳತನ ಪ್ರಕರಣ: ತಟಸ್ಥ ಏಜೆನ್ಸಿಯಿಂದ ತನಿಖೆಗೆ ಅಮಿತ್ ಶಾ ಆಗ್ರಹ
x

ಶಬರಿಮಲೆ ಚಿನ್ನ ಕಳ್ಳತನ ಪ್ರಕರಣ: ತಟಸ್ಥ ಏಜೆನ್ಸಿಯಿಂದ ತನಿಖೆಗೆ ಅಮಿತ್ ಶಾ ಆಗ್ರಹ

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಶಾ, "ಶಬರಿಮಲೆಯ ಆಸ್ತಿಯನ್ನು ರಕ್ಷಿಸಲು ವಿಫಲವಾದ ಸರ್ಕಾರಕ್ಕೆ ಜನರ ನಂಬಿಕೆಯನ್ನು ರಕ್ಷಿಸುವ ನೈತಿಕ ಹಕ್ಕಿಲ್ಲ ಎಂದರು.


Click the Play button to hear this message in audio format

ಶಬರಿಮಲೆ ಅಯ್ಯಪ್ಪ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆ ತರುವಂತಹ ಚಿನ್ನ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈ ಬಗ್ಗೆ ತಟಸ್ಥ ಸಂಸ್ಥೆಯಿಂದ ತನಿಖೆ ನಡೆಸುವಂತೆ ಕೇರಳ ಸರ್ಕಾರವನ್ನು ಒತ್ತಾಯಿಸಿದ್ದಾರೆ. ತಿರುವನಂತಪುರಂನಲ್ಲಿ ಬಿಜೆಪಿ ಆಯೋಜಿಸಿದ್ದ 'ಮಿಷನ್ 2026' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಶಾ, "ಶಬರಿಮಲೆಯ ಆಸ್ತಿಯನ್ನು ರಕ್ಷಿಸಲು ವಿಫಲವಾದ ಸರ್ಕಾರಕ್ಕೆ ಜನರ ನಂಬಿಕೆಯನ್ನು ರಕ್ಷಿಸುವ ನೈತಿಕ ಹಕ್ಕಿಲ್ಲ," ಎಂದು ಗುಡುಗಿದರು. "ಶಬರಿಮಲೆ ಚಿನ್ನ ಕಳ್ಳತನ ಕೇವಲ ಕೇರಳದ ಸಮಸ್ಯೆಯಲ್ಲ, ಇದು ದೇಶಾದ್ಯಂತ ಇರುವ ಕೋಟ್ಯಂತರ ಅಯ್ಯಪ್ಪ ಭಕ್ತರ ಆತಂಕವಾಗಿದೆ," ಎಂದು ಅವರು ಹೇಳಿದರು.

ಎಫ್‌ಐಆರ್ (FIR) ಬಗ್ಗೆ ಸಂಶಯ

ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್ ಪ್ರತಿಯನ್ನು ತಾನು ನೋಡಿದ್ದೇನೆ ಎಂದ ಅಮಿತ್ ಶಾ, "ಆರೋಪಿಗಳನ್ನು ರಕ್ಷಿಸುವ ಉದ್ದೇಶದಿಂದಲೇ ಎಫ್‌ಐಆರ್ ಸಿದ್ಧಪಡಿಸಿದಂತೆ ಕಾಣುತ್ತಿದೆ. ಎಲ್‌ಡಿಎಫ್ ನೊಂದಿಗೆ ನಂಟು ಹೊಂದಿರುವ ಇಬ್ಬರು ವ್ಯಕ್ತಿಗಳ ಮೇಲೆ ಸಂಶಯವಿದ್ದರೂ, ನಿಷ್ಪಕ್ಷಪಾತ ತನಿಖೆ ನಡೆಯುತ್ತಿಲ್ಲ," ಎಂದು ಆರೋಪಿಸಿದರು. "ವಿಜಯನ್ ಅವರೇ, ಇದು ಪ್ರಜಾಪ್ರಭುತ್ವ. ನೀವು ತಕ್ಷಣ ತಟಸ್ಥ ಸಂಸ್ಥೆಗೆ ತನಿಖೆಯನ್ನು ಹಸ್ತಾಂತರಿಸಬೇಕು," ಎಂದು ಅವರು ಸವಾಲು ಹಾಕಿದರು.

ಕಾಂಗ್ರೆಸ್ ವಿರುದ್ಧವೂ ಆರೋಪ

ಈ ಹಗರಣದಲ್ಲಿ ಕಾಂಗ್ರೆಸ್ ನಾಯಕರ ಕೈವಾಡವೂ ಇದೆ ಎಂಬ ಸಾಕ್ಷ್ಯಗಳು ಹೊರಬರುತ್ತಿವೆ ಎಂದು ಶಾ ಗಂಭೀರ ಆರೋಪ ಮಾಡಿದರು. "ವಿಶ್ವದಾದ್ಯಂತ ಕಮ್ಯುನಿಸಂ ಮುಗಿದಿದ್ದರೆ, ಭಾರತದಾದ್ಯಂತ ಕಾಂಗ್ರೆಸ್ ಮುಗಿದ ಅಧ್ಯಾಯವಾಗಿದೆ," ಎಂದು ವ್ಯಂಗ್ಯವಾಡಿದರು.

ಮಿಷನ್ 2026: ಕೇರಳದಲ್ಲಿ ಕಮಲ ಅರಳಿಸುವ ಪಣ

ಮುಂಬರುವ ಕೇರಳ ವಿಧಾನಸಭೆ ಚುನಾವಣೆಗೆ (2026) ರಣಕಹಳೆ ಊದಿದ ಅಮಿತ್ ಶಾ, "ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಕಷ್ಟದ ಹಾದಿಯಾದರೂ ಅಸಾಧ್ಯವಲ್ಲ. ಕಮಲ ಚಿಹ್ನೆಯಡಿ ಬಿಜೆಪಿ ಮುಖ್ಯಮಂತ್ರಿಯನ್ನು ಅಧಿಕಾರಕ್ಕೆ ತರುವುದು ನಮ್ಮ ಅಂತಿಮ ಗುರಿ," ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಕೇರಳದ ಸಮಗ್ರ ಅಭಿವೃದ್ಧಿ ಕೇವಲ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಅವರು ಪ್ರತಿಪಾದಿಸಿದರು.

Read More
Next Story