ಚಂಪೈ ಬಿಜೆಪಿ ಸೇರ್ಪಡೆ ವದಂತಿ: ಬಿಜೆಪಿಯಿಂದ ಶಾಸಕರ ಬೇಟೆ-ಹೇಮಂತ್
x

ಚಂಪೈ ಬಿಜೆಪಿ ಸೇರ್ಪಡೆ ವದಂತಿ: ಬಿಜೆಪಿಯಿಂದ ಶಾಸಕರ ಬೇಟೆ-ಹೇಮಂತ್

ಈ ವರ್ಷ ಜಾರ್ಖಂಡ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಬೇಕಿದೆ. ʻಚುನಾವಣೆ ವೇಳಾಪಟ್ಟಿಯನ್ನು ಬಿಜೆಪಿ ನಿರ್ಧರಿಸುತ್ತದೆ; ಚುನಾವಣೆ ಆಯೋಗವಲ್ಲ. ಆಯೋಗ ಒಂದು ಸಾಂವಿಧಾನಿಕ ಸಂಸ್ಥೆಯಾಗಿ ಉಳಿದಿಲ್ಲ; ಏಕೆಂದರೆ ಅದನ್ನು ಬಿಜೆಪಿಯವರು ಕೈವಶ ಮಾಡಿಕೊಂಡಿದ್ದಾರೆ,ʼ ಎಂದು ಹೇಮಂತ್‌ ಸೊರೆನ್‌ ಆರೋಪಿಸಿದರು.


ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಚಂಪೈ ಸೊರೆನ್ ಅವರು ಬಿಜೆಪಿಗೆ ಸೇರಬಹುದು ಎಂಬ ಊಹಾಪೋಹದ ನಡುವೆ, ʻಕೇಸರಿ ಪಾಳಯ ಶಾಸಕರ ಬೇಟೆಯಾಡುತ್ತಿದೆ ಮತ್ತು ಸಮಾಜವನ್ನು ವಿಭಜಿಸುತ್ತಿದೆ,ʼ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ದೂರಿದ್ದಾರೆ.

ಜೆಎಂಎಂ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ದೆಹಲಿ ತಲುಪಿದ ಬಳಿಕ ಸೊರೆನ್ ಹೇಳಿಕೆ ಬಂದಿದೆ. ಹೇಮಂತ್‌ ಜಾಮೀನಿನ ಮೇಲೆ ಜೈಲಿನಿಂದ ಹಿಂತಿರುಗಿ, ತಮ್ಮನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಕೇಳಿದ ಬಳಿಕ ಪಕ್ಷದ ಸದಸ್ಯರಿಂದ ಅವಮಾನಕ್ಕೊಳಗಾಗಿರುವುದಾಗಿ ಚಂಪೈ ಅವರು ಎಕ್ಸ್‌ನಲ್ಲಿ ವಿವರವಾದ ಸಂದೇಶ ಪೋಸ್ಟ್ ಮಾಡಿದ್ದಾರೆ. ಅವರು ಯಾರ ಹೆಸರು ಉಲ್ಲೇಖಿಸದಿದ್ದರೂ, ಅದು ಹೇಮಂತ್ ಸೊರೆನ್ ಎಂಬ ಸುಳಿವು ಸ್ಪಷ್ಟವಾಗಿದೆ.

ಬಿಜೆಪಿ ವಿಷ ಹರಡುತ್ತಿದೆ: ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಸರ್ಕಾರಿ ಕಾರ್ಯಕ್ರಮದಲ್ಲಿ ಮಾತನಾಡಿದ ಹೇಮಂತ್, ಬಿಜೆಪಿ ಗುಜರಾತ್, ಅಸ್ಸಾಂ ಮತ್ತು ಮಹಾರಾಷ್ಟ್ರದಿಂದ ಜನರನ್ನು ಕರೆತಂದಿದ್ದು,ಆದಿವಾಸಿಗಳು, ದಲಿತರು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ನಡುವೆ ವಿಷವನ್ನು ಹರಡಲು ಮತ್ತು ಪರಸ್ಪರ ಹೊಡೆದಾಡುವಂತೆ ಪ್ರೇರೇಪಿಸುತ್ತಿದೆ ಎಂದು ದೂರಿದರು.

ʻಸಮಾಜ ಮಾತ್ರವಲ್ಲ; ಈ ಜನರು ಕುಟುಂಬಗಳು ಮತ್ತು ಪಕ್ಷಗಳನ್ನು ಒಡೆಯುವ ಕೆಲಸ ಮಾಡುತ್ತಾರೆ. ಶಾಸಕರನ್ನು ಬೇಟೆಯಾಡುತ್ತಾರೆ. ರಾಜಕಾರಣಿಗಳು ಹಣ ಪಡೆದು ಪಕ್ಷ ತೊರೆಯಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ,ʼ ಎಂದು ಹೇಳಿದರು.

ಚಂಪೈ ಸುತ್ತ ಊಹಾಪೋಹ: ಚಂಪೈ ಅವರು ಕೋಲ್ಕತ್ತಾದಿಂದ ದೆಹಲಿಗೆ ತೆರಳಿದ್ದಾರೆ ಎಂದು ಹಿರಿಯ ಜೆಎಂಎಂ ನಾಯಕನ ನಿಕಟವರ್ತಿಯೊಬ್ಬರು ಹೇಳಿದ್ದಾರೆ. ಚಂಪೈ ಅವರು ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಾವು ಯಾವುದೇ ಬಿಜೆಪಿ ನಾಯಕರನ್ನು ಭೇಟಿ ಮಾಡಿಲ್ಲ ಮತ್ತು ವೈಯಕ್ತಿಕ ಭೇಟಿಗೆ ಬಂದಿದ್ದೇನೆ ಎಂದು ಹೇಳಿದರು.

ಇಸಿ ವಿರುದ್ಧ ಆರೋಪ: ಈ ವರ್ಷ ಜಾರ್ಖಂಡ್‌ನಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಆದರೆ, ʻಚುನಾವಣೆ ವೇಳಾಪಟ್ಟಿಯನ್ನು ರಾಜ್ಯದ ವಿರೋಧ ಪಕ್ಷ ನಿರ್ಧರಿಸುತ್ತದೆ; ಚುನಾವಣೆ ಆಯೋಗವಲ್ಲ. ಆಯೋಗ ಒಂದು ಸಾಂವಿಧಾನಿಕ ಸಂಸ್ಥೆಯಾಗಿಲ್ಲ; ಏಕೆಂದರೆ ಅದನ್ನು ಬಿಜೆಪಿಯವರು ಕೈವಶ ಮಾಡಿಕೊಂಡಿದ್ದಾರೆ,ʼ ಎಂದು ಆರೋಪಿಸಿದರು.ʼಇವತ್ತು ಚುನಾವಣೆ ನಡೆದರೂ, ಬಿಜೆಪಿಯವರು ನಿರ್ನಾಮವಾಗುತ್ತಾರೆʼ ಎಂದು ಮುಖ್ಯಮಂತ್ರಿ ಹೇಳಿದರು.

Read More
Next Story