ಯುಜಿಸಿ-ನೆಟ್‌: ಪರೀಕ್ಷೆಗೆ ಹೊಸ ದಿನಾಂಕ ಪ್ರಕಟ
x

ಯುಜಿಸಿ-ನೆಟ್‌: ಪರೀಕ್ಷೆಗೆ ಹೊಸ ದಿನಾಂಕ ಪ್ರಕಟ

ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ–ರಾಷ್ಟ್ರೀಯ ಅರ್ಹತಾ ಪರೀಕ್ಷೆ(ಯುಜಿಸಿ-ನೆಟ್)ಯನ್ನು ಜೂನ್ 18 ರಂದು ನಡೆಸಿದ ಒಂದು ದಿನದ ನಂತರ, ಶಿಕ್ಷಣ ಸಚಿವಾಲಯವು ಪರೀಕ್ಷೆಯ ಸಮಗ್ರತೆಗೆ ಧಕ್ಕೆಯಾಗಿದೆ ಎಂದು ರದ್ದುಗೊಳಿಸಿತ್ತು.


ಹೊಸದಿಲ್ಲಿ, ಜೂ.28- ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮಗಳ ಕುರಿತು ತೀವ್ರ ಕೋಲಾಹಲದ ನಡುವೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ರದ್ದುಪಡಿಸಿದ ಮತ್ತು ಮುಂದೂಡಲಾದ ಪರೀಕ್ಷೆಗಳಿಗೆ ಹೊಸ ದಿನಾಂಕಗಳನ್ನು ಶುಕ್ರವಾರ ರಾತ್ರಿ ಬಿಡುಗಡೆ ಮಾಡಿದೆ. ಪರೀಕ್ಷೆಗಳು ಆಗಸ್ಟ್ 21- ಸೆಪ್ಟೆಂಬರ್ 4ರಂದು ನಡೆಯಲಿವೆ.

ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ–ರಾಷ್ಟ್ರೀಯ ಅರ್ಹತಾ ಪರೀಕ್ಷೆ(ಯುಜಿಸಿ-ನೆಟ್)ಯನ್ನು ಜೂನ್ 18 ರಂದು ನಡೆಸಿದ ಒಂದು ದಿನದ ನಂತರ, ಶಿಕ್ಷಣ ಸಚಿವಾಲಯವು ಪರೀಕ್ಷೆಯ ಸಮಗ್ರತೆಗೆ ಧಕ್ಕೆಯಾಗಿದೆ ಎಂದು ರದ್ದು ಗೊಳಿಸಿತ್ತು.

ಪ್ರಶ್ನೆಪತ್ರಿಕೆ ಡಾರ್ಕ್‌ನೆಟ್‌ನಲ್ಲಿ ಸೋರಿಕೆಯಾಗಿದ್ದು, ಟೆಲಿಗ್ರಾಮ್ ಆ್ಯಪ್‌ನಲ್ಲಿ ಪ್ರಸಾರವಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಸಿಒಐ ಪ್ರಕರಣದ ತನಿಖೆ ನಡೆಸುತ್ತಿದೆ.

ಯುಜಿಸಿ-ನೆಟ್ ಜೂನಿಯರ್ ರಿಸರ್ಚ್ ಫೆಲೋಶಿಪ್, ಸಹಾಯಕ ಪ್ರಾಧ್ಯಾಪಕರ ನೇಮಕ ಮತ್ತು ಪಿಎಚ್‌ಡಿ ಕೋರ್ಸ್‌ಗಳಿಗೆ ಪ್ರವೇಶಕ್ಕೆ ಅರ್ಹತೆಯನ್ನು ನಿರ್ಧರಿಸುವ ಪರೀಕ್ಷೆಯಾಗಿದೆ.

ಈ ವರ್ಷ ಹಿಂದಿನ ಮಾದರಿಯನ್ನು ಬದಲಿಸಿ, ಒಂದೇ ದಿನದಲ್ಲಿ ಆಫ್‌ಲೈನ್ ಮೋಡ್‌ನಲ್ಲಿ ಪರೀಕ್ಷೆಯನ್ನು ನಡೆಸಲಾಯಿತು. ಆದರೆ, ಮರುನಿಗದಿಪಡಿಸಿದ ಪರೀಕ್ಷೆಯನ್ನು ಹಿಂದಿನಂತೆ ಹದಿನೈದು ದಿನಗಳ ಅವಧಿಯಲ್ಲಿ ಕಂಪ್ಯೂಟರ್ ಆಧರಿತ ಪರೀಕ್ಷೆ(ಸಿಬಿಟಿ)ಯಂತೆ ನಡೆಸಲಾಗುತ್ತದೆ.

ಕೌನ್ಸಿಲ್ ಫಾರ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ಯುಜಿಸಿ-ನೆಟ್ ಪರೀಕ್ಷೆಯನ್ನು ಮುಂದೂಡಿದೆ. ಪರೀಕ್ಷೆ ಈಗ ಜುಲೈ 25 ರಿಂದ ಜುಲೈ 27 ರವರೆಗೆ ನಡೆಯಲಿದೆ.

ಸಿಎಸ್‌ಐಆರ್‌ ರಸಾಯನ ಶಾಸ್ತ್ರ, ಹವಾಮಾನ, ಸಾಗರ ಮತ್ತು ಖಗೋಳ ಶಾಸ್ತ್ರ, ಜೀವಶಾಸ್ತ್ರ, ಗಣಿತ ಶಾಸ್ತ್ರ ಮತ್ತು ಭೌತಿಕ ವಿಜ್ಞಾನಗಳಲ್ಲಿ ಪಿಎಚ್‌ಡಿ ಪ್ರವೇಶಕ್ಕೆ ಯುಜಿಸಿ-ನೆಟ್‌ ಪರೀಕ್ಷೆ ನಡೆಸುತ್ತದೆ.

ನಾಲ್ಕು ವರ್ಷಗಳ ಇಂಟಿಗ್ರೇಟೆಡ್ ಟೀಚರ್ ಎಜುಕೇಶನ್ ಪ್ರೋಗ್ರಾಂ(ಐಟಿಇಪಿ) ಗೆ ಪ್ರವೇಶಕ್ಕೆ ಜೂನ್‌ 12ರಂದು ನಡೆಯಬೇಕಿದ್ದ ರಾಷ್ಟ್ರೀಯ ಸಾಮಾನ್ಯ ಪ್ರವೇಶ ಪರೀಕ್ಷೆ (ಎನ್‌ ಸಿಇಟಿ)ಯನ್ನು ಪರೀಕ್ಷೆ ಪ್ರಾರಂಭಕ್ಕೆ ಗಂಟೆಗಳ ಮೊದಲು ಮುಂದೂಡಲಾಯಿತು.ಪರೀಕ್ಷೆ ಈಗ ಜುಲೈ 10 ರಂದು ನಡೆಯಲಿದೆ.

ಐಐಟಿ, ಎನ್‌ಐಟಿ, ಆರ್‌ಐಇ ಮತ್ತು ಸರ್ಕಾರಿ ಕಾಲೇಜುಗಳು ಸೇರಿದಂತೆ ಆಯ್ದ ಕೇಂದ್ರ ಮತ್ತು ರಾಜ್ಯ ವಿಶ್ವವಿದ್ಯಾನಿಲಯಗಳು ಅಥವಾ ಸಂಸ್ಥೆಗಳಿಗೆ ಆಯ್ಕೆಗೆ ಈ ಪರೀಕ್ಷೆ ನಡೆಸಲಾಗುತ್ತದೆ.

ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್-ಯುಜಿ ಮತ್ತು ಪಿಎಚ್‌ಡಿ ಪ್ರವೇಶ ಪರೀಕ್ಷೆ ಯುಜಿಸಿ- ನೆಟ್‌ನಲ್ಲಿನ ಅಕ್ರಮ ದೂರುಗಳ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಪಾರದರ್ಶಕ, ಸುಗಮ ಮತ್ತು ನ್ಯಾಯಯುತವಾಗಿ ನಡೆಸುವುದನ್ನು ಖಚಿತಪಡಿಸಿಕೊಳ್ಳಬೇಕೆಂದು ಕೇಂದ್ರ, ಸರ್ಕಾರವು ಎ‌ನ್‌ಇಟಿಗೆ ಸೂಚನೆ ನೀಡಿತ್ತು.ಇತರ ಎರಡು ಪರೀಕ್ಷೆಗಳಾದ ಸಿಎಸ್‌ಐಆರ್-ಯುಜಿಸಿ ನೆಟ್‌ ಹಾಗೂ ನೀಟ್-ಪಿಜಿ ಪರೀಕ್ಷೆಗಳನ್ನು ಪೂರ್ವ ಭಾವಿಯಾಗಿ ರದ್ದುಗೊಳಿಸಲಾಗಿದೆ.

Read More
Next Story