UGC-NET BAN | ರಾಷ್ಟ್ರೀಯ ಅರ್ಹತಾ ಪರೀಕ್ಷೆ ರದ್ದು: ಪ್ರಕರಣ ಸಿಬಿಐ ತನಿಖೆಗೆ
x
ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿನ ಅಕ್ರಮಗಳ ಕುರಿತು ಎನ್‌ಎಸ್‌ಯುಐ ಸದಸ್ಯರು ಪ್ರತಿಭಟಿಸಿದರು. ವಿಷಯ ಈಗ ಸುಪ್ರೀಂ ಕೋರ್ಟ್‌ನಲ್ಲಿದೆ.

UGC-NET BAN | ರಾಷ್ಟ್ರೀಯ ಅರ್ಹತಾ ಪರೀಕ್ಷೆ ರದ್ದು: ಪ್ರಕರಣ ಸಿಬಿಐ ತನಿಖೆಗೆ

ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಪಾವಿತ್ರ್ಯವನ್ನು ಖಚಿತಪಡಿಸಿಕೊಳ್ಳಲು ಯುಜಿಸಿ-ನೆಟ್‌ ಜೂನ್ 2024 ಪರೀಕ್ಷೆಯನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ. ವಿಷಯದ ಸಮಗ್ರ ತನಿಖೆಗೆ ಸಿಬಿಐಗೆ ಹಸ್ತಾಂತರಿಸಲಾಗುತ್ತಿದೆ,ʼ ಎಂದು ಸಚಿವಾಲಯ ತಿಳಿಸಿದೆ.


UGC-NET BAN | ನೀಟ್‌-ಯುಜಿ ಕುರಿತ ವಿವಾದದ ನಡುವೆಯೇ ಪರೀಕ್ಷೆಯ ಸಮಗ್ರತೆಗೆ ಧಕ್ಕೆಯುಂಟಾಗಿರುವ ಮಾಹಿತಿ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯವು ಯುಜಿಸಿ-ನೆಟ್‌ ಪರೀಕ್ಷೆಗಳನ್ನು ರದ್ದುಗೊಳಿಸಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದೆ.

ಪಾಟ್ನಾದಲ್ಲಿ ನಡೆದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್-ಯುಜಿ) 2024 ರಲ್ಲಿನ ಅಕ್ರಮಗಳ ಬಗ್ಗೆ ಸಚಿವಾಲಯವು ಬಿಹಾರ ಪೊಲೀಸ್‌ ನ ಆರ್ಥಿಕ ಅಪರಾಧಗಳ ಘಟಕದಿಂದ ವರದಿಯನ್ನು ಕೇಳಿದ್ದು, ವರದಿ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವಾಲಯ ಹೇಳಿದೆ.

ನೆಟ್‌ ಪರೀಕ್ಷೆ ಹೊಸದಾಗಿ ನಡೆಸಿ

ʻಯುಜಿಸಿಯು ಪರೀಕ್ಷೆಗೆ ಸಂಬಂಧಿಸಿದಂತೆ ಗೃಹ ವ್ಯವಹಾರಗಳ ಸಚಿವಾಲಯದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (ಐ4ಸಿ)ದ ರಾಷ್ಟ್ರೀಯ ಸೈಬರ್ ಕ್ರೈಮ್ ಥ್ರೆಟ್ ಅನಾಲಿಟಿಕ್ಸ್ ಘಟಕದಿಂದ ಕೆಲವು ಒಳಸುರಿಗಳನ್ನು ಸ್ವೀಕರಿಸಿದೆ. ಈ ಒಳಸುರಿಗಳು ಪರೀಕ್ಷೆಯ ಸಮಗ್ರತೆಯಲ್ಲಿ ರಾಜಿ ಆಗಿರಬಹುದು ಎಂದು ಮೇಲ್ನೋಟಕ್ಕೆ ಸೂಚಿಸುತ್ತವೆ,ʼಎಂದು ಶಿಕ್ಷಣ ಸಚಿವಾಲಯ ಹೇಳಿದೆ.

ʻಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಪಾವಿತ್ರ್ಯವನ್ನು ಖಚಿತಪಡಿಸಿಕೊಳ್ಳಲು ಯುಜಿಸಿ-ನೆಟ್‌ ಜೂನ್ 2024 ಪರೀಕ್ಷೆಯನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ. ವಿಷಯದ ಸಮಗ್ರ ತನಿಖೆಗೆ ಸಿಬಿಐಗೆ ಹಸ್ತಾಂತರಿಸಲಾಗುತ್ತಿದೆ,ʼ ಎಂದು ಸಚಿವಾಲಯ ತಿಳಿಸಿದೆ.

11 ಲಕ್ಷ ಮಂದಿ ನೆಟ್‌ಗೆ ನೋಂದಣಿ

ಈ ಬಾರಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ(ನೆಟ್)ಯನ್ನು ಒಂದೇ ದಿನದಲ್ಲಿ ಲೇಖನಿ ಮತ್ತು ಕಾಗದ ವಿಧಾನದಲ್ಲಿ ಜೂನ್‌ 18ರಂದು ಒಂದೇ ದಿನದಲ್ಲಿ ನಡೆಸಲಾಯಿತು. 11 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಯುಜಿಸಿ-ನೆಟ್‌ ಅನ್ನು ಜೂನಿಯರ್ ರಿಸರ್ಚ್ ಫೆಲೋಶಿಪ್ ಗೆ, ಸಹಾಯಕ ಪ್ರಾಧ್ಯಾಪಕರಾಗಿ ನೇಮಕ ಮಾಡಲು ಮತ್ತು ವಿಶ್ವವಿದ್ಯಾನಿಲಯಗಳು-ಕಾಲೇಜುಗಳಲ್ಲಿ ಪಿಎಚ್‌ಡಿಗೆ ಪ್ರವೇಶ ನೀಡಲು ನಡೆಸಲಾಗುತ್ತದೆ.

ನೀಟ್‌ನಲ್ಲಿ ಅಕ್ರಮಗಳು ನಡೆದಿವೆ ಎಂಬ ಭಾರೀ ಗದ್ದಲದ ನಡುವೆ ವಿಷಯ ಸುಪ್ರೀಂ ಕೋರ್ಟ್‌ನಲ್ಲಿರುವಾಗ, ನೆಟ್‌ ಪರೀಕ್ಷೆಯನ್ನು ಸರ್ಕಾರ ರದ್ದುಗೊಳಿಸಿದೆ.

ನೀಟ್‌ ದೂರುಗಳು

ಬಿಹಾರದಂತಹ ರಾಜ್ಯಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳು ನಡೆದಿವೆ ಎಂಬ ಆರೋಪಗಳಿವೆ. ಹಲವಾರು ನಗರಗಳಲ್ಲಿ ಪ್ರತಿಭಟನೆಗಳು ನಡೆದಿವೆ, ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ʻಪಾಟ್ನಾದಲ್ಲಿ ಪರೀಕ್ಷೆಯಲ್ಲಿ ನಡೆದ ಅಕ್ರಮಗಳ ಬಗ್ಗೆ ಬಿಹಾರ ಪೊಲೀಸರ ಆರ್ಥಿಕ ಅಪರಾಧಗಳ ಘಟಕದಿಂದ ವರದಿ ಕೇಳಲಾಗಿದೆ. ವರದಿ ಬಂದ ನಂತರ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ,ʼ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ʻಪರೀಕ್ಷೆಗಳ ಪಾವಿತ್ರ್ಯವನ್ನು ಖಚಿತಪಡಿಸಿಕೊಳ್ಳಲು ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧವಾಗಿದೆ. ಹಗರಣದಲ್ಲಿ ಭಾಗಿಯಾಗಿರುವ ವ್ಯಕ್ತಿ ಅಥವಾ ಸಂಸ್ಥೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ,ʼ ಎಂದು ಅವರು ಹೇಳಿದ್ದಾರೆ.

Read More
Next Story