UPSC ಪರೀಕ್ಷೆ| ಕೃತಕ ಬುದ್ಧಿಮತ್ತೆ ಆಧರಿತ ಸಿಸಿಟಿವಿ ಕಣ್ಗಾವಲು ವ್ಯವಸ್ಥೆ ಬಳಕೆಗೆ ನಿರ್ಧಾರ
ನವದೆಹಲಿ, ಜೂನ್ 24- ನೀಟ್, ನೆಟ್ ಪರೀಕ್ಷೆಗಳಲ್ಲಿ ಅಕ್ರಮಗಳ ವಿವಾದಗಳ ಹಿನ್ನೆಲೆಯಲ್ಲಿ ದೇಶದ ಪ್ರಮುಖ ನೇಮಕ ಸಂಸ್ಥೆ ಯುಪಿಎಸ್‌ಸಿ, ಪರೀಕ್ಷೆಗಳಲ್ಲಿ ವಂಚನೆ ಮತ್ತು ಬೇರೆಯವರು ಪರೀಕ್ಷೆ ಬರೆಯುವುದನ್ನು ತಡೆಯಲು ಮುಖ ಗುರುತಿಸುವಿಕೆ ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ಸಿಸಿಟಿವಿ ಕಣ್ಗಾವಲು ವ್ಯವಸ್ಥೆಯನ್ನು ಬಳಸಲು ನಿರ್ಧರಿಸಿದೆ.
ಆಧಾರ್ ಆಧಾರಿತ ಬೆರಳಚ್ಚು ದೃಢೀಕರಣ (ಇಲ್ಲದೇ ಡಿಜಿಟಲ್ ಬೆರಳಚ್ಚು ಗ್ರಹಿಸುವಿಕೆ) ಮತ್ತು ಮುಖ ಗುರುತಿಸುವಿಕೆ ಹಾಗೂ ಇ-ಅಡ್ಮಿಟ್ ಕಾರ್ಡ್‌ಗಳ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಮತ್ತು ಲೈವ್ ಎಂಬ ಎಐ ಆಧಾರಿತ ಸಿಸಿ ಟಿವಿ ಕಣ್ಗಾವಲು ವ್ಯವಸ್ಥೆಯನ್ನು ಅಳವಡಿಸಲು ಸಾರ್ವ ಜನಿಕ ಕ್ಷೇತ್ರದ ಸಂಸ್ಥೆಗಳಿಂದ ಟೆಂಡರ್ ಆಹ್ವಾನಿಸಿದೆ.
ಕೇಂದ್ರ ಸಾರ್ವಜನಿಕ ಸೇವಾ ಆಯೋಗ(ಯುಪಿಎಸ್ ಸಿ)ವು 14 ಪ್ರಮುಖ ಪರೀಕ್ಷೆಗಳನ್ನು ನಡೆಸುತ್ತದೆ; ಅವೆಂದರೆ, ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್ ), ಮತ್ತು ಭಾರತೀಯ ಪೊಲೀಸ್ ಸೇವೆ (ಐಪಿಎಸ್), ಕೇಂದ್ರ ಸರ್ಕಾರದ ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ' ಹುದ್ದೆಗಳಿಗೆ ಪ್ರತಿ ವರ್ಷ ಹಲವು ನೇಮಕ ಪರೀಕ್ಷೆಗಳು-ಸಂದರ್ಶನಗಳನ್ನು ನಡೆಸುತ್ತದೆ. ಲೆಹ್, ಕಾರ್ಗಿಲ್, ಶ್ರೀನಗರ, ಇಂಫಾಲ್, ಅಗರ್ತಲಾ, ಐಜ್ವಾಲ್ ಮತ್ತು ಗ್ಯಾಂಗ್ಟಕ್ ಸೇರಿದಂತೆ 80 ಕೇಂದ್ರಗಳಲ್ಲಿ ನಡೆಸುವ ಈ ನೇಮಕಾತಿಯಲ್ಲಿ ಅಂದಾಜು 26 ಲಕ್ಷ ಅಭ್ಯರ್ಥಿಗಳು ಪಾಲ್ಗೊಳ್ಳುತ್ತಾರೆ.
ʻಯುಪಿಎಸ್‌ಸಿ ತನ್ನ ಪರೀಕ್ಷೆಗಳನ್ನು ಮುಕ್ತ, ನ್ಯಾಯಸಮ್ಮತ ಮತ್ತು ನಿಷ್ಪಕ್ಷಪಾತವಾಗಿ ನಡೆಸಲು ಪ್ರಾಮುಖ್ಯತೆ ನೀಡುತ್ತದೆ. ಇದಕ್ಕಾಗಿ ಆಯೋಗ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಂಡು, ಬಯೋಮೆಟ್ರಿಕ್ ವಿವರಗಳನ್ನು ಹೋಲಿಸಿ, ಪರಿಶೀಲಿಸಲು ಉದ್ದೇಶಿಸಿದೆ. ಪರೀಕ್ಷೆಗಳಲ್ಲಿ ಮೋಸ, ವಂಚನೆ, ಅಕ್ರಮ ವಿಧಾನಗಳು ತಡೆಗಟ್ಟಲು ಇದು ಅಗತ್ಯವೆದೆ, ಎಂದು ಜೂನ್ 3, 2024 ರ ಟೆಂಡರ್ ದಾಖಲೆ ಹೇಳಿದೆ.
ಆಧಾರ್ ಆಧಾರಿತ ಬೆರಳಚ್ಚು ದೃಢೀಕರಣ (ಇಲ್ಲದೇ ಡಿಜಿಟಲ್ ಬೆರಳಚ್ಚು ಗ್ರಹಿಸುವಿಕೆ) ಮತ್ತು ಮುಖ ಗುರುತಿಸುವಿಕೆ ಹಾಗೂ ಇ-ಅಡ್ಮಿಟ್ ಕಾರ್ಡ್‌ಗಳ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಮತ್ತು ಲೈವ್ ಎಂಬ ಎಐ ಆಧಾರಿತ ಸಿಸಿ ಟಿವಿ ಕಣ್ಗಾವಲು ವ್ಯವಸ್ಥೆ ಮೂಲಕ ಪರೀಕ್ಷೆಗಳ ಮೇಲ್ವಿಚಾರಣೆ ಮಾಡಲು ಮುಂದಾಗಿದೆ.
ನೀಟ್-ಯುಜಿ, ಯುಜಿಸಿ-ನೆಟ್ ಪರೀಕ್ಷೆಯಲ್ಲಿನ ಅಕ್ರಮ ನಡೆದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸುತ್ತಿದೆ. ಇಂಥ ಸನ್ನಿವೇಶದಲ್ಲಿ ಯುಪಿಎಸ್‌ಸಿಯ ಈ ನಿರ್ಧಾರ ಮಹತ್ವ ಪಡೆದುಕೊಂಡಿದೆ.