NEET-UG 2024|  ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ತಡೆಯಲು ಕೇಂದ್ರದಿಂದ ಕಾನೂನು
x

NEET-UG 2024| ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ತಡೆಯಲು ಕೇಂದ್ರದಿಂದ ಕಾನೂನು

ಯುಪಿಎಸ್‌ಸಿ, ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ), ರೈಲ್ವೆ, ಬ್ಯಾಂಕಿಂಗ್ ನೇಮಕ ಮತ್ತು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ನಡೆಸುವ ಸಾರ್ವಜನಿಕ ಪರೀಕ್ಷೆಗಳಲ್ಲಿ ಅಕ್ರಮ ತಡೆಯುವ ಉದ್ದೇಶವನ್ನು ಈ ಕಾಯಿದೆ ಹೊಂದಿದೆ.


ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅವ್ಯವಹಾರ ಮತ್ತು ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರ ಕಠಿಣ ಕಾನೂನನ್ನು ಜಾರಿಗೊಳಿಸಲಿದೆ. ಅಪರಾಧ ಸಾಬೀತಾದಲ್ಲಿ ಗರಿಷ್ಠ 10 ವರ್ಷ ಜೈಲು ಶಿಕ್ಷೆ ಮತ್ತು 1 ಕೋಟಿ ರೂ.ವರೆಗೆ ದಂಡ ವಿಧಿಸಲಾಗುತ್ತದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಾರ್ವಜನಿಕ ಪರೀಕ್ಷೆ (ಅಕ್ರಮ ವಿಧಾನಗಳ ತಡೆ) ಕಾಯಿದೆ, 2024 ಗೆ ಒಪ್ಪಿಗೆ ನೀಡಿದ ಸುಮಾರು ನಾಲ್ಕು ತಿಂಗಳ ನಂತರ ಸಿಬ್ಬಂದಿ ಸಚಿವಾಲಯವು ಶುಕ್ರವಾರ ರಾತ್ರಿ ಅಧಿಸೂಚನೆಯನ್ನು ಹೊರಡಿಸಿದೆ. ಕಾನೂನು ಜೂನ್ 21 ರಿಂದ ಜಾರಿಗೆ ಬರಲಿದೆ ಎಂದು ಹೇಳಿದೆ.

ಸಿಬಿಐ ಪ್ರಕರಣ ದಾಖಲು: ಯುಜಿಸಿ-ನೆಟ್‌ 2024 ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಇದು ಮಹತ್ವದ ಕ್ರಮವಾಗಿದೆ. ರಾಷ್ಟ್ರೀ ಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ನಡೆಸಿದ ಪರೀಕ್ಷೆಯ ತನಿಖೆಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ಗುರುವಾರ ಪ್ರಕರಣ ದಾಖಲಿಸಿದೆ. ಜೂನ್ 4 ರಂದು ಎನ್‌ಟಿಎ ಪ್ರಕಟಿಸಿದ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ದೇಶದೆಲ್ಲೆಡೆ ಪ್ರತಿಭಟನೆ ನಡೆದಿತ್ತು

ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ವಿಧಾನಗಳ ತಡೆ) ಕಾಯಿದೆಯನ್ನು ಯಾವಾಗ ಜಾರಿಗೆ ತರಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಪ್ರಶ್ನಿಸಿದ ಒಂದು ದಿನದ ನಂತರ ಅಧಿಸೂಚನೆ ಪ್ರಕಟಿಸಲಾಗಿದೆ. ಕಾನೂನು ಸಚಿವಾಲಯ ನಿಯಮ ಗಳನ್ನು ರೂಪಿಸುತ್ತಿದೆ ಎಂದು ಸಚಿವರು ಹೇಳಿದ್ದರು.

ಮಸೂದೆಯು ಫೆಬ್ರವರಿ 9, 2024 ರಂದು ರಾಜ್ಯಸಭೆಯಿಂದ ಹಾಗೂ ಫೆಬ್ರವರಿ 6ರಂದು ಲೋಕಸಭೆಯಿಂದ ಅಂಗೀಕರಿಸಲ್ಪಟ್ಟಿದೆ. ರಾಷ್ಟ್ರಪತಿ ಮುರ್ಮು ಅವರು ಫೆಬ್ರವರಿ 12 ರಂದು ಮಸೂದೆಗೆ ಅನುಮೋದನೆ ನೀಡಿದರು.

ಯುಪಿಎಸ್‌ಸಿ, ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ), ರೈಲ್ವೆ, ಬ್ಯಾಂಕಿಂಗ್ ನೇಮಕ ಮತ್ತು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ನಡೆಸುವ ಸಾರ್ವಜನಿಕ ಪರೀಕ್ಷೆಗಳಲ್ಲಿ ಅನ್ಯಾಯವನ್ನು ತಡೆಯುವ ಉದ್ದೇಶವನ್ನು ಕಾಯಿದೆ ಹೊಂದಿದೆ.

ವಂಚನೆ ಸಾಬೀತಾದಲ್ಲಿ ಕನಿಷ್ಠ ಮೂರರಿಂದ ಐದು ವರ್ಷಗಳವರೆಗೆ ಸೆರೆವಾಸ, ಸಂಘಟಿತ ವಂಚನೆ ಅಪರಾಧಗಳಲ್ಲಿ ಐದರಿಂದ 10 ವರ್ಷಗಳ ಜೈಲು ಶಿಕ್ಷೆ ಮತ್ತು ಕನಿಷ್ಠ 1 ಕೋಟಿ ರೂ. ದಂಡ ವಿಧಿಸಬಹುದಾಗಿದೆ.

ಇದಕ್ಕೆ ಮೊದಲು ಕೇಂದ್ರ ಸರ್ಕಾರ ಮತ್ತು ಅದರ ಏಜೆನ್ಸಿಗಳು ನಡೆಸುವ ಸಾರ್ವಜನಿಕ ಪರೀಕ್ಷೆಗಳಲ್ಲಿ ಅಕ್ರಮ ವಿಧಾನಗಳು ಅಥವಾ ಅಪರಾಧಗಳನ್ನು ಎದುರಿಸಲು ನಿರ್ದಿಷ್ಟ ವಸ್ತುನಿಷ್ಠ ಕಾನೂನು ಇರಲಿಲ್ಲ.

ಕಾಯ್ದೆಯು ವಿತ್ತೀಯ ಲಾಭಕ್ಕಾಗಿ ಅನ್ಯಾಯದ ವಿಧಾನಗಳಲ್ಲಿ ತೊಡಗಿರುವ ಸಂಘಟಿತ ಗುಂಪುಗಳು ಮತ್ತು ಸಂಸ್ಥೆಗಳನ್ನು ತಡೆಗಟ್ಟುವ ಗುರಿಯನ್ನು ಹೊಂದಿದೆ. ಅಭ್ಯರ್ಥಿಗಳನ್ನು ರಕ್ಷಿಸುತ್ತದೆ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

Read More
Next Story